ಶೌಚಾಲಯಕ್ಕೆ ದೇವರ ಮೇಲೆ ಆಣೆ, ಉಪವಾಸ ಮಾಡಿ, ಹಠ ಸಾಧನೆ

ಶೌಚಾಲಯಕ್ಕಾಗಿ ಮಲ್ಲಮ್ಮನ ಹಾದಿ ಹಿಡಿದ ವಿದ್ಯಾರ್ಥಿನಿಯರು
ಶೌಚಾಲಯಕ್ಕಾಗಿ ಉಪವಾಸ ಕುಳಿತು, ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಜಿಲ್ಲೆಯ ಡಣಾಪುರದ ಮಲ್ಲಮ್ಮ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಇದೀಗ ಶೌಚಾಲಯಕ್ಕಾಗಿ ದೇವರ ಮೇಲೆ ಮಾಡಿದ ಆಣೆ ಹಾಗೂ ಉಪವಾಸ ಮಾಡುವ ಮೂಲಕ ಕೊಪ್ಪಳ ತಾಲೂಕು ಕಾಮನೂರು ಗ್ರಾಮದ ಮೂವರು ವಿದ್ಯಾರ್ಥಿನಿಯರು ಶೌಚಾಲಯ ಕಟ್ಟಿಸುವ ಹಠ ಸಾಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪಂಚಾಯತಿ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಿಷನ್ 200 ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಪ್ರಗತಿ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಾಲೂಕಿನ ಕಾಮನೂರ ಗ್ರಾಮಕ್ಕೆ ವಿಶೇಷ ಮಾಧ್ಯಮ ಪ್ರವಾಸ ಆಯೋಜಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ದೇವರ ಮೇಲೆ ಪ್ರಮಾಣ ಮತ್ತು ಉಪವಾಸ :
ಕಾಮನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರ್ಥನೆ ವೇಳೆ ಶಿಕ್ಷಕರು ಶೌಚಾಲಯ ಹೊಂದದೇ ಇರುವವರು ತಪ್ಪದೆ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸುವ ಕಾರ್ಯ ನಡೆದಿದ್ದು, ಇದಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರವೂ ನಡೆಯುತ್ತಿದೆ. ಈ ಪ್ರತಿಜ್ಞಾ ವಿಧಿ ಸ್ವೀಕಾರ ವೇಳೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದಾಗಿ ದುರ್ಗಾದೇವಿ ದೇವರ ಮೇಲೆ ಆಣೆ ಮಾಡಿದ್ದ 06 ನೇ ತರಗತಿ ವಿದ್ಯಾರ್ಥಿನಿ ಸಂಗೀತ ಸಿದ್ದಪ್ಪ ಸಂಗಟಿ, ಆಣೆ ತಪ್ಪುವುದು ಸರಿಯಲ್ಲ, ಶೌಚಾಲಯವನ್ನು ನಿರ್ಮಿಸಲೇ ಬೇಕು ಎಂದು ಪಾಲಕರಿಗೆ ನಿತ್ಯ ಒತ್ತಾಯಿಸಿದ್ದಾಳೆ. ಶೌಚಾಲಯಕ್ಕೆ ಜಾಗವಿಲ್ಲ ಎಂದು ಸಬೂಬು ಹೇಳುತ್ತಿದ್ದ ಪಾಲಕರು, ಕೊನೆಗೆ ಮನೆಯ ಮುಂಭಾಗದ ಕಟ್ಟೆಯನ್ನು ತೆರವುಗೊಳಿಸಿ, ಅಲ್ಲಿಯೇ ಶೌಚಾಲಯ ನಿರ್ಮಿಸಲು ಗುಂಡಿಯನ್ನು ತೋಡಿಸಿದ್ದಾರೆ. ಹೀಗೆ ಸಂಗೀತ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂಬ ಹಠವನ್ನು ಸಾಧಿಸಿದ್ದಾಳೆ. 6 ನೇ ತರಗತಿಯ ಇನ್ನೋರ್ವ ವಿದ್ಯಾರ್ಥಿನಿ ವಿದ್ಯಾ ಹನುಮಪ್ಪ ಮತ್ತು 8 ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ಭರಮಪ್ಪ ಹುಳ್ಳಿ ಶೌಚಾಲಯಕ್ಕಾಗಿ ನಿತ್ಯ ನಾವು ಶಾಲೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದೇವೆ. ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇವೆ. ಹೀಗಾಗಿ ಶೌಚಾಲಯ ಕಟ್ಟಿಸಿಕೊಳ್ಳದಿದ್ದರೆ, ಪ್ರತಿಜ್ಞೆಯನ್ನು ಉಲ್ಲಂಘಿಸಿದಂತಾಗಲಿದೆ ಎಂದು ಪಾಲಕರ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಪಾಲಕರು, ಕೊನೆಗೆ ಶೌಚಾಲಯಕ್ಕಾಗಿ ವಿದ್ಯಾರ್ಥಿನಿಯರು ಎರಡು ದಿನ ಉಪವಾಸ ಕೈಗೊಂಡ ಬಳಿಕ, ಹಠಕ್ಕೆ ಮಣಿದು, ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯರ ಪಾಲಕರನ್ನು ವಿಚಾರಿಸಿದಾಗ, ಇವೆಲ್ಲ ಅಂಶಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಈ ವಿಷಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲದೆ ಶೌಚಾಲಯ ಪ್ರತಿಯೊಂದು ಕುಟುಂಬಕ್ಕೂ ಅಗತ್ಯವಾಗಿದ್ದು, ಮುಂದೆಯೂ ಶೌಚಾಲಯ ಜಾಗೃತಿಗಾಗಿ ಇತರೆ ವಿದ್ಯಾರ್ಥಿಗಳಲ್ಲಿಯೂ ಅರಿವು ಮೂಡಿಸಲು ಯತ್ನ ಮಾಡುವುದಾಗಿ ಹೇಳಿದರು.