ಶಿವಾನಂದ ಸ್ವಾಮೀಜಿ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ಸ್ವಾಮೀಜಿಗಳ ಆಗ್ರಹ.!

 ಕೊಪ್ಪಳ: ಕಲಬುರಗಿ ಜಿಲ್ಲೆಯ  ಅಫಜಲಪುರ ತಾಲೂಕಿನ  ರೇವೂರ ಗ್ರಾಮದ ಶಿವಯೋಗಿ ಮಠದ  ಶಿವಾನಂದ  ಶಿವಚಾರ್ಯ  ಸ್ವಾಮಿಗಳ  ಮೇಲೆ  ಹಲ್ಲೆ ಮಾಡಿದ  ಪೊಲೀಸ್  ಪೇದೆಯನ್ನು  ಅಮಾನತು  ಮಾಡಿದ್ದು ಅಷ್ಟೇ  ಅಲ್ಲದೆ  ಆತನ ವಿರುದ್ದ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೀರಶೈವ  ಲಿಂಗಾಯತ ಯುವ ವೇದಿಕೆ ಮುಖಾಂತರ ಸ್ವಾಮಿಜಿಗಳು  ಆಗ್ರಹಿಸಿದರು.

ಅವರು ಸೋಮವಾರ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಮೂಲಕ ಗೃಹಸಚಿವರಿಗೆ  ಮನವಿ ಸಲ್ಲಿಸಿ ಒತ್ತಾಯಿಸಿದರು.
 
ಶಿವಾನಂದ  ಶಿವಚಾರ್ಯ ಸ್ವಾಮೀಜಿಯವರು  ಭಕ್ತರಿಂದ  ಧಾನ್ಯ  ಸಂಗ್ರಹ  ಮಾಡಲು ತೆರಳಿದ  ಸಮಯದಲ್ಲಿ ಅಫಜಲಪೂರ  ತಾಲೂಕಿನ  ಅರ್ಜುನಗಿ  ತಾಂಡಾ  ಚೆಕ್  ಪೋಸ್ಟ್‍ನಲ್ಲಿ ಪೇದೆ  ಶರಣಗೌಡ ಪಾಟೀಲ್ ಸ್ವಾಮೀಜಿಯವರಿಗೆ ಬಾಸುಂಡೆ ಬರುವ ಹಾಗೆ  ಥಳಿಸಿದ್ದಾನೆ. ಭಕ್ತರು ಹಾಗೂ ಸ್ವಾಮೀಜಿಗಳು ಎಂದು ಹೇಳಿದರೂ  ಕೂಡ ಇದನ್ನು ಲೆಕ್ಕಿಸದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಮಾನುಷ ಕೃತ್ಯ ಎಸಗಿದ್ದಾನೆ. ಕಾನೂನು ಕಾಪಾಡಬೇಕಾದ  ಪೊಲೀಸ್  ಪೇದೆಯೇ  ಈ ರೀತಿ  ವರ್ತಿಸಿದ್ದು  ಸರಿಯಲ್ಲ. ಆದ್ದರಿಂದ ಪೊಲೀಸ್ ಪೇದೆ ಮೇಲೆ  ಕಠೀಣ  ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿಗಳು ಒತ್ತಾಯಿಸಿದರು.

ಮಹಾರಾಷ್ಟ್ರದ  ನಾಂದೇಡಾ ಜಿಲ್ಲೆಯ ಉಮರಿ ತಾಲೂಕಿನ  ನಾಗಠಾಣದ  ನಿರ್ವಾಣಿ ಮಠದ ರುದ್ರಪಶುಪತಿ ಶಿವಚಾರ್ಯ ಮಹಾರಾಜ ಸ್ವಾಮೀಜಿಗಳ ಹತ್ಯೆಗೈದವರ  ಮೇಲೆ  ನ್ಯಾಯಾಂಗ  ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ  ನೀಡಲು ಮುಂದಾಗಬೇಕು ಎಂದು  ಆಗ್ರಹಿಸಿದರು.

ಈ ಸಂದರ್ಭದಲ್ಲಿ  ಕೂಕನೂರು ಅನ್ನಧಾನೇಶ್ವರ ಮಠದ ಮಹಾದೇವ ದೇವರು, ಯಲಬುರ್ಗಾ ಮುರಡಿ ಮಠದ ಶ್ರೀಗಳು, ಗಡ್ಡಿ ಮಠದ ಅಪ್ಪಾಜೀ ಶ್ರೀಗಳು, ಹೊಸಪೇಟೆಯ ಅನುರಾದ ಅಮ್ಮನವರು, ಸುಳೆಕಲ್ ಭುವನೇಶ್ವರಿ  ತಾತನವರು, ಹೇಮರಾಜ್ ಗಡ್ಡಿ, ಶರಣಯ್ಯಸ್ವಾಮಿ  ಮರಳಿಮಠ, ಸಂಗಯ್ಯಸ್ವಾಮಿ ಸಂಶಿಮಠ, ವಿ.ಎಂ. ಬೂಸನೂರ ಮಠ,  ಕಂಠಯ್ಯ ಹಿರೇಮಠ, ಸಿ.ವಿಕಲ್ಮಠ, ವಿರೇಶ ಮಹಾಂತಯ್ಯನಮಠ, ಸೇರಿದಂತೆ ಅನೇಕರು  ಭಾಗವಹಿಸಿದ್ದರು.

 

Please follow and like us:
error