ಶಿವರಾಜ ತಂಗಡಗಿ ಆಸ್ತಿ ಬಹಿರಂಗ ಪಡಿಸಲಿ: ಸವಾಲು ಹಾಕಿದ ಸಂಸದ ಸಂಗಣ್ಣ

 

ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ವೃಥಾ ಆರೋಪ ಮಾಡುವುದನ್ನು ಬಿಡಬೇಕು. ಇದುವರೆಗಿನ ನನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಕಪ್ಪುಚುಕ್ಕೆ ನನಗಿಲ್ಲ. ಅವರಿಗೆ ಅನುಮಾನವಿದ್ದರೆ 1978 ರಿಂದ ನನ್ನ. ಆಸ್ತಿ ಎಷ್ಟಿದೆ ಎಂಬುದನ್ನು ನಾನು ಬಹಿರಂಗ ಪಡಿಸುತ್ತೇನೆ. ಅವರು ಶಾಸಕರಾದಾಗಿನಿಂದ ಗಳಿಸಿದ ಆಸ್ತಿ ಎಷ್ಟು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾವತಿಯಲ್ಲಿ ಅಮೃತ್ ಸಿಟಿ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂಬುದು ನನ್ನ ಅಭಿಪ್ರಾಯ. ಕಾಮಗಾರಿ ಚನ್ನಾಗಿದೆ ಎಂಬುದು ಶಾಸಕ ಪರಣ್ಣ ಮುನವಳ್ಳಿ ಅವರ ಅಭಿಪ್ರಾಯ. ಹೀಗೆಂದ ಮಾತ್ರಕ್ಕೆ ಕಮೀಷನ್ ಸಿಕ್ಕಿಲ್ಲ ಎನ್ನುವುದು ಸರಿಯಲ್ಲ. ಅಭಿಪ್ರಾಯ ಹೇಳುವುದು ತಪ್ಪಾ? ಎಂದು ಅವರು ತಂಗಡಗಿ ವಿರುದ್ಧ ಹರಿ ಹಾಯ್ದರು.

ಜಿಲ್ಲೆಯೂ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಇದೆ. ಜಿಲ್ಲೆಯ ಹ್ಯಾಟಿ, ಮರಳಿ ಸೇರಿದಂತೆ ವಿವಿಧೆಡೆ ಸ್ಮಶಾನಕ್ಕೆ ಜಾಗದ ಕೊರತೆ ಇದ್ದು, ಸರಕಾರ ಜಮೀನು ಖರೀದಿಸುವಂತೆ ಜಿಲ್ಲಾಧಿಕಾರಿಗಳಿಗೆ, ಸರಕಾರಕ್ಕೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.

ಕೋವಿಡ್-19 ಬಗ್ಗೆ ಜನರು ಭೀತಿಗೊಳಗಾಗಬಾರದು. ಅದು ಭಯಪಡುವಂಥ ಕಾಯಿಲೆ ಅಲ್ಲ, ಎಷ್ಟೋ ಕುಟುಂಬಗಳ ಜನರು ಶವವನ್ನು ನೋಡಲು ಬರದ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಶೋಚನೀಯ. ಗಂಗಾವತಿ ತಾಲೂಕಿನ ಹಿರೇಜಂತಕಲ್, ಸಂಗಾಪುರದಲ್ಲಿ ಗುರುವಾರ ರಾತ್ರಿ ನಡೆದ ಘಟನೆ ತಲೆ ತಗ್ಗಿಸುವಂಥದ್ದು ಎಂದರು.

Please follow and like us:
error