ಶಾಲಾ ಶುಲ್ಕ ವಿವರ ಪ್ರದರ್ಶಿಸಿ, ಇಲ್ಲವೆ ಕ್ರಮ ಎದುರಿಸಿ : ಎಂ. ಕನಗವಲ್ಲಿ ಕಟ್ಟುನಿಟ್ಟಿನ ಸೂಚನೆ

ಕೊಪ್ಪಳ : ಜಿಲ್ಲೆಯಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ತಾವು ಪಡೆಯುವ ಶುಲ್ಕದ ವಿವರವನ್ನು ಶಾಲೆಯ ಗೋಡೆ ಮೇಲೆ ಬರೆಯಿಸಬೇಕು ಮತ್ತು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಈ ಕಾರ್ಯ ಮೂರು ದಿನಗಳ ಒಳಗಾಗಿ ಆಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆಗಳಲ್ಲಿ ಶುಲ್ಕದ ವಿವರವನ್ನು ಇದುವರೆಗೂ ಪ್ರದರ್ಶಿಸದ ಶಾಲಾ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಕೈಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ, ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಸಿ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ಸೂಚನಾ ಫಲಕದಲ್ಲಿ ಸಾರ್ವಜನಿಕವಾಗಿ ಪ್ರಕಟಿಸದೆ, ಸರ್ಕಾರದ ಶುಲ್ಕ ನೀತಿಯನ್ನು ಜಿಲ್ಲೆಯಲ್ಲಿ ಒಟ್ಟು 39 ಶಾಲೆಗಳು ಉಲ್ಲಂಘಿಸಿದ್ದು, ಅಂತಹ ಶಾಲೆಗಳು, ಶುಲ್ಕದ ವಿವರವನ್ನು ಶಾಲೆಯ ಗೋಡೆ ಮೇಲೆ ಬರೆಯಿಸಬೇಕು ಮತ್ತು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಇದಕ್ಕೆ ಮೂರು ದಿನಗಳ ಗಡುವು ನೀಡಲಾಗಿದೆ. ಮೂರು ದಿನಗಳ ಒಳಗಾಗಿ ಶಾಲಾ ಶುಲ್ಕದ ವಿವರವನ್ನು ಗೋಡೆ ಬರಹದಲ್ಲಿ ಬರೆಯಿಸಬೇಕು. ಮತ್ತು ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು. ಈ ಕುರಿತು ಫೋಟೋ ಸಹಿತ ವರದಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಸಭೆಗೆ ಗೈರು ಹಾಜರಾದ 09 ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಶಾಲೆಯವರು ನಿಯಮಬಾಹಿರವಾಗಿ ಶುಲ್ಕ ಸಂಗ್ರಹ ಮಾಡಿ, ಸರ್ಕಾರದ ಶುಲ್ಕ ನೀತಿ ಉಲ್ಲಂಘಿಸಿದಲ್ಲಿ, ಅಂತಹ ದೂರುಗಳ ಕುರಿತು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿಯೊಂದಿಗೆ ಜಿಲ್ಲಾ ಶೈಕ್ಷಣಿಕ ಕ್ರಮಬದ್ಧತಾ ಪ್ರಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಾಕೀತು ಮಾಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್, ಜಿಲ್ಲಾ ನೋಡಲ್ ಅಧಿಕಾರಿ ಎಂ. ಬಡದಾನಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಿಯಮ ಉಲ್ಲಂಘಿಸಿದ ಜಿಲ್ಲೆಯ 30 ಶಾಲೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

Please follow and like us: