ಶತಾಯುಷಿ ಉದಾರ ಹೃದಯಿ ಉಡುಚಮ್ಮ ತಾಯಿ ಪ್ರಥಮ ಪುಣ್ಯಸ್ಮರಣೋತ್ಸವ

೨೪-೧೧-೨೦೧೮ ರ ನಿಮಿತ್ಯ. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ ಎಲ್ಲರೊಳಗೊಂದಾಗು- ಮಂಕುತಿಮ್ಮ
ಎನ್ನುವ ಅನುಭಾವಿ ಡಿ,ವ್ಹಿ,ಜಿ ಕವಿಗಳ ಪದ್ಯದ ಸಾಲುಗಳಂತೆಯೇ ಅಕ್ಷಶಃ ಬದುಕಿಬಾಳಿದವರು ಶ್ರೀ ಉಡಚಮ್ಮ ಹಂಚಿನಾಳ. ಸದಾ ಶಿವ ದ್ಯಾನ – ಶಿವಚಿಂತನೆಯ ಜೊತೆ -ಜೊತೆಗೆ ಅಧ್ಯಾತ್ಮದ ಹಾದಿಯಲ್ಲಿಯೇ ಬದುಕು ಸವೆಸುತ್ತಾ ತಮ್ಮ ನೋವುಗಳನ್ನು ಮರೆತು ಜನರಿಗೆ ನಲಿವನ್ನು ನೀಡಿದ ಉದಾರ ಹೃದಯಿ ಉಡಚಮ್ಮ ತಾಯಿ. ಕೆಲವರು ಇರುವುದಕಿಂತಲೂ ಹೆಚ್ಚು ದೊಡ್ಡವರಾಗಿ ಇನ್ನು ಹಲವರು ಕಾಣುವುದಕ್ಕಿಂತಲೂ ಹೆಚ್ಚು ದೊಡ್ಡವರಾಗಿರುತ್ತಾರೆ ಈ ಮೇಲಿನ ದ್ವೀಪದಿಗಳಲ್ಲಿ ದ್ವಿತೀಯ ಸಾಲಿಗೆ ಸೇರಿದ ಅದ್ವಿತಿಯ ಮಾತೇ ಅರಕೇರಿಯ ಉಡುಚಮ್ಮ ಹಂಚಿನಾಳರೆಂದೆ ಗುರುತಿಸಬೇಕಾಗಿದೆ. ಆರಂಭದಲ್ಲಿಯೆ ಬಡತನವನ್ನೆ ಬೆನ್ನಿಗೆ ಕಟ್ಟಿಕೊಂಡು ಬಂದ ಉಡಚಮ್ಮನವರ ಸಾಹಸ ಗಾಥೆ ಅನನ್ಯ ವಾದುದಾಗಿದೆ ಸ್ವ ಗ್ರಾಮ ಅರಕೇರಿಯ ಭರಮಮ್ಮ-ಹನುಮಪ್ಪ ಮೇಟಿ ದಂಪತಿಗಳವರಲ್ಲಿ ಜನಿಸಿ ಬಂದ.

ಉಡುಚಾದ್ರಿ ದೇವಿ (ಉಡುಚಮ್ಮ) ಅದೇ ಗ್ರಾಮದ ಹಂಚಿನಾಳ ಮನೆತನದ ಹನುಮಪ್ಪನವರ

ಕಂಕಣ ಬಲ ಕೂಡಿ ಬಂದರೆ ಯಾವ ವಿಷಯವು ಎನನ್ನೂ ಮಾಡಲಾರದು. ಹಂಚಿನಾಳ ಮನೆತನದವರೂ ಬಹುಕಾಲದಿಂದಲೂ ಒಡನಾಡಿಗಳಾಗಿಯೇ ಬಂದವರಾಗಿದ್ದಾರೆ. ಯಾವುದೇ ವಿವಾಹ ಕಾರ್ಯಗಳಾಗಲಿ, ಇತ್ಯಾದಿ ಏನೇ ಕಾರ್ಯಕ್ರಮಗಳಾದರೂ ಸಹಿತ ಎರಡೂ ಮನೆತನದವರು ಸಮ್ಮೀಳಿತವಾಗಿ ಮಾಡಿಕೊಂಡು ಬಂದವರಾಗಿದ್ದಾರೆ, ಅಷ್ಟೊಂದು ಅನ್ಯೋನ್ನತೆ ಈ ಎರಡು ಮನೆತನಗಳಲ್ಲಿ. ಹೊಲಗಳು ಸಹಿತ ಅಕ್ಕಪಕ್ಕದಲ್ಲಿಯೇ ಇವೆ. ಒಂದು ಸಂದರ್ಭದಲ್ಲಿ ಬಾಳಪ್ಪ ಹಂಚಿನಾಳ, ಹನುಮಪ್ಪನವರ ತಂದೆ ಯವರಾದ ವೀರುಪಣ್ಣ ಬಾಳಪ್ಪಮೇಟಿ ಅವರೊಂದಗೆ ಮಾತನಾಡುತ್ತಾ, ನಿಮ್ಮ ಉಡುಚಮ್ಮನ ನಮ್ಮ ಹನುಮಪ್ಪನಿಗೆ ಕೊಡ್ತಿ ಏನಪ್ಪಾ? ಎಂದಾಗ ಆಗಲಿ ಮಾವಾ ನಿನ್ನ ಮಾತಿಗೆ ನಾನು ಹೊರ್ತ ಅದಿನೇನು? ತೊಗೋ ಮಾಡಿಕೋಂಡು ಬಿಡು ಎಂದು ಮೇಟಿ ಹನುಮಪ್ಪ ಅಲ್ಲಿಯೇ ಹೊಲದಲ್ಲಿಯೇ ಮಾತು ಕೊಟ್ಟ. ಎಂಥಹ ಮಾತು. ಮಾತು! ಆಡಿದರೇ ಆಯಿತು, ಮುತ್ತು ಒಡೆದರೆ ಹೋಯ್ತು’ ಎನ್ನುವಂತೆ ಈ ಹಿರಿಯರಿಬ್ಬರೂ ಹೊಲದಲ್ಲಿಯೇ ತಾವು ಮಾತನಾಡಿಕೊಂಡಂತೆ ನಡೆದರು. ಯಾವ ಸಾಕ್ಷಿ ಪುರಾವೆ ಹಿರಿಯರು ಕಿರಿಯರು ಗೋಜು ಗೊಜಲ ಇಲ್ಲದೇನೆ ‘ಉಡಚಮ್ಮ -ಹನುಮಂತಪ್ಪನ ಮದುವೆ ನಿರಾತಂಕವಾಗಿಯೇ ನೆರವೇರಿತು. ನಾಲಿಗೆ ಒಳ್ಳೆಯದಾದರೇ ನಾಡೆಲ್ಲ ಒಳ್ಳೆಯದಲ್ಲವೇ? ಬೆನ್ನಿಗಂಟಿಕೊಂಡ ಬಡತನವನ್ನು ಲೆಕ್ಕಿಸದೇ ಗಂಡ – ಹೆಂಡತಿಯರಿಬ್ಬರೂ ಹಗಲಿರುಳು ದುಡಿದರು ಭೂದೇವಿ ಕೈ ಹಿಡಿದಳು. ಸಕಾಲಕ್ಕೇ ಮಳೆ-ಬೆಳೆ ಚೆನ್ನಾಗಿ ಬಂದು ನಾಲ್ಕು ದುಡ್ಡು ಹನುಮಪ್ಪನ ಕೈ ಸೇರಿತು. ಆರಂಭದಲ್ಲಿ ಎರಡು-ಮೂರು ಎಕರೆ ಹೊಲದಲ್ಲಿ ಬದುಕು ಸಾಗಿಸುತ್ತಿದ್ದ ಉಡಚಮ್ಮ ಸುಮಾರು ೧೨೦ ಎಕರೆ ಹೊಲವನ್ನು ತನ್ನ ಸ್ವ ಪರಿಶ್ರಮದಿಂದಲೇ ಗಳಿಸಿದಳು. ತೊಟ್ಟಿಲು ತೋಗುವ ಕೈ ಜಗವನ್ನೇ ತೂಗಬಲ್ಲದು ಎಂಬುದಕ್ಕೆ ಈ ಉಡಚಮ್ಮನೇ ನಿದರ್ಶನವೆಂದರೆ ಅತಿಶಯೋಕ್ತಿಯಾಗಲಾರದು.

ಗಂಡ ಹನುಮಪ್ಪನೊಂದಿಗೆ ಸಮ ಸಮನಾಗಿಯೇ ದುಡಿದ ಗಟ್ಟಿಗಿತ್ತಿ, ಹೊಲದ ಒಡ್ಡು ಒಡೆಯಲಿ, ಹೊಲದೊಳಗೆ ಕರಕಿ ಬೆಳೆಯಲಿ, ದಂಪತಿಗಳಿಬ್ಬರೇ ಒಡ್ಡು ಹಾಕುವುದು ನೆಟ್ಟು ಕಡಿಯುವುದನ್ನು ಮಾಡುತ್ತಿದ್ದರು. ಸತಿ ಪತಿಗಳೋಂದಾದ ಭಕ್ತಿ ಹಿತವಾಗಿರ್ಪುದು ಶಿವಂಗೆ ಎನ್ನುವಂತೆ ಪ್ರತಿವರ್ಷ ಮಳೆ ಚೆನ್ನಾಗಿ ಬಂದಂತೆ ಬೆಳೆಯೂ ಬಂದಿತು ಭೂದೇವಿ ಕೃಪೆಯಿಂದ ಪ್ರತಿವರ್ಷ ಬಂದ ಫಸಲಿನ ಹಣದಿಂದಲೇ ಭೂಮಿಯನ್ನು ಕೊಳ್ಳುತ್ತಾ ಹೋದರು. ಹೀಗಾಗಿ ಉಡಚಮ್ಮ – ಹನುಮಪ್ಪ ೧೨೦ ಎಕರೇ ಹೊಲದ ಮಾಲೀಕರಾದರು. ಹೋಗಿ ಬರುವವರು ಇವರ ಹೊಲವನ್ನು, ಇವರ ಕೃಷಿ ಕಾಯಕವನ್ನು ನಿಂತು ನೋಡುವಂತೆ ದುಡಿದ ಪರಿಶ್ರಮ ಜೀವಿಗಳು.
ಸಹ ಕುಟುಂಬಿ: ಕೇವಲ ಹೊಲ ಮನೆ, ಎತ್ತು, ಎಮ್ಮೆಗಳಲ್ಲೇ ಕಾಲ ಕಳೆಯದ ಅಮ್ಮ ಕುಟುಂಬ ಪ್ರೇಮಿಯಾಗಿದ್ದರು. ನಾಲ್ಕು ಹೆಣ್ಣು ಒಂದು ಗಂಡು ಮಗುವಿನ ತಾಯಿಯಾದ ಉಡಚಮ್ಮ ಸುಖ ಸಂಸಾರಿಯಾಗಿಯೇ ಬದುಕು ಸಾಗಿಸಿದವಳು.
ನಾಲ್ಕು ಜನ ಹೆಣ್ಣು ಮಕ್ಕಳನ್ನು ಒಳ್ಳೆಯ ಸ್ಥಿತಿವಂತ ಮನೆತನಕ್ಕೆ ಮದುವೆ ಮಾಡಿಕೊಟ್ಟಿದ್ದಾಳೆ. ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ಈಗಾಗಲೇ ಇಬ್ಬರು ದಿವಂಗತರಾಗಿದ್ದಾರೆ. ಈಗ ಕೇವಲು ಇಬ್ಬರು ಹೆಣ್ಣು ಮಕ್ಕಳು ಉಳಿದಿದ್ದಾರೆ. ಮಗ ನಾಗಪ್ಪ ಎಂ. ಎ ಪಧವಿದರ ನಾಗಿರುವ ಜೊತೆಗೆ ಮೊಮ್ಮಕ್ಕಳನ್ನು ಕಂಡಿದ್ದಾನೆ. ಕೋಟಿ ವಿದ್ಯಗಿಂತ ಮೇಟಿ ವಿದ್ಯ ಮೇಲು ಎಂದು ಸರಕಾರಿ ಸೇವೆ ಮಾಡದೇ, ಮನೆಯಲ್ಲಿಯೇ ಇರುವಂತೆ ಮಗನಿಗೆ ತಾಕೀತು ಮಾಡಿದವಳು ಉಡಚಮ್ಮ. ಇಂತಹ ತುಂಬು ಸಂಸಾರ ಹೊಂದಿಗಳಾಗಿದ್ದ ಉಡಚಮ್ಮ ಸಹ ಕುಟುಂಬ ಪ್ರೇಮಿಯಾಗಿದ್ದವರು. ಅಪಾರ ಸಂಖ್ಯೆಯ ಮಕ್ಕಳು, ಮೊಮ್ಮಕ್ಕಳ್ಳನ್ನು ಹೊಂದಿದ ಹಿರಿಯ ಜೀವ ಉಡಚಮ್ಮಳದ್ದು.

ಸಮಾಜ ಮುಖಿ: ಉಡಚಮ್ಮನವರು ಯಾವ ಶಾಲೆ ಕಾಲೇಜುಗಳ ಮುಖವನ್ನೇ ನೋಡದ ತಾಯಿ, ರಾಮಾಯಣ ಮಹಾಭಾರತದ ಕಥಾ ಪ್ರಸಂಗಗಳನ್ನು ಬಹಳಷ್ಟು ಲೀಲಾ ಜಾಲವಾಗಿಯೇ ಹೇಳುತ್ತಿದ್ದಳು. ರಾಮಾಶ್ವಮೇದದ ಕಥೆಯಂಥೆಯೇ, ಸೀತಾ ಅಪಹರಣವನ್ನು ಸಹ ಬಹು ಸ್ವಾರಸ್ಯವಾಗಿ ಹೇಳುತ್ತಿದ್ದಳು. ಮಹಾ ಭಾರತದ ದ್ರೌಪದಿಯ ಸ್ವಯಂ ವರ, ಅರ್ಜುನ, ಅಭಿಮನ್ಯುವಿನ ಶೌರ್ಯ ಸಾಹಸಗಳನ್ನು ಹೇಳುವಷ್ಟು ಪರಿಣಿತಿ ಹೊಂದಿದ್ದ ಈ ತಾಯಿಗೆ ಅದೆಂತಹ ಜಾಣ್ಮೇ, ಹೇಗೆ ಲಭಿಸಿತ್ತೋ ನಾ ಕಾಣೆ? ರಾಮಾಯಣ ಮಹಾ ಭಾರತ ಆಧಾರಿತ ಕಥಾ ಪ್ರಸಂಗಗಳ ಬಯಲಾಟವನ್ನು ಸತ್ಯ ಹರಿಶ್ಚಂದ್ರ, ವಿಕ್ರಮಾದಿತ್ಯ ನಾಟಕಾದಿಗಳನ್ನು ನೋಡುತ್ತಾ ಬೆಳೆದ ಈ ಅಜ್ಜಿ ಬದುಕಿನುದ್ದಕ್ಕೂ ಸತ್ಯ, ಧರ್ಮ, ನ್ಯಾಯ ಅಹಿಂಸೆಗಳನ್ನು ಪರಿಪಾಲಿಸುತ್ತಲೇ ಬಂದ ಧಿಮಂತ ಮಹಿಳೆ ಈ ಉಡಚಮ್ಮ ಅಜ್ಜಿ.
‘ದೀನ ಬಂದು ಅನಾಥ ರಕ್ಷಕಿ’- ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದೆ ಕಟ್ಟಿದಾ ಬುತ್ತಿ ಸರ್ವಜ್ಞ ಎನ್ನುವ ನುಡಿಎಂತೆ ದೀನರಿಗೆ, ಅನಾಥರಿಗೆ ತನ್ನ ಎರಡೂ ಕೈಗಳಿಂದ ಮುಕ್ತ ದಾನ ಮಾಡಿದ ಈ ಉಡಚಮ್ಮ. ಅನಾಥ ಹೆಣ್ಣುಮಕ್ಕಳು ಅಥವಾ ಬಡವರು ಬಿಕ್ಷುಕ ತಾಯಂದಿರಾಗಿರಲಿ ಯಾವ ಗರ್ಭಿಣಿ ತಾಯಂದಿರು ಪ್ರಸವ ವೇದನೆಯನ್ನು ಅನುಭವಸುತ್ತಿದ್ದ ವಿಷಯ ಈ ಅಜ್ಜಿಯ ಕಿವಿಗೆ ಬಿತ್ತೆಂದರೆ ಸಾಕು ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು ಆ ತಾಯಂದಿರ ಬಾಣಂತನ ಮಾಡಿ ಆಗ ತಾನೆ ಜನಿಸಿದ ಕೂಸುಗಳನ್ನು ಆರೈಕೆ ಮಾಡಿ, ಆಕೂಸುಗಳಿಗೆ ಬಿಸಿನೀರಿನಿಂದ ಎರೆದು ಬಟ್ಟೆ ಹಾಕಿ ಜೋಗುಳ ಹಾಡಿ ಕೂಸನ್ನು ಮಲಗಿಸಿಯೇ ಮನೆಗೆ ಬರುತ್ತಿದ್ದಳು ಈ ಮಹಾತಾಯಿ. ಇಂತಹ ಒಂದು ಕಾಯಕವನ್ನು ತನ್ನ ಜೀವಿತದುದ್ದಕ್ಕೂ ಪರಿಪಾಲಿಸಿಯೇ ಕೊಂಡಂತಹ ಉದಾತ್ತ ಜೀವಿ ಉಡಚಾದ್ರಿ ತಾಯಿ. ‘ಬೇ ಎಮ್ಮ ನಿಂದ ನಿನಗ ಸಾಲವಲ್ದು ನಿನ್ನ ಮನಿ ಮಠ ಬಿಟ್ಟು ಆ ಬಿಕ್ಷುಕ ಹೆಣ್ಣುಮಕ್ಕಳು, ಊರಿನ ಹೆಣ್ಣುಮಕ್ಕಳ ಬಾಣಂತನ ಮಾಡೋದು ಯಾಕ ಬೇಕ? ಬೇ’ ಅಂತ ಯಾರಾದರೂ ಅಂದರೆ ಆ ತಾಯಿ ಸ್ವಲ್ಪೂ ಸಿಟ್ಟಿಗೆ ಬರುತ್ತಿರಲಿಲ್ಲ. ಕರ್ಮ ಬಳಸಬೇಕು-ಧರ್ಮ ಗಳಿಸಬೇಕು ಅನ್ನುತ್ತಿದ್ದಳು ಆ ಮುದುಕಿ. ಹಾಗೆಯೇ ‘ಅಲ್ಲಬೇ ಎಮ್ಮ ನೀ ಗಳಿಸಿದ ಹೊಲ ೧೨೦ ಎಕರೆ ಹೊಲದಾಗ ಬಹಳಷ್ಟು ಜಮೀನು ಅರಕೇರಿ ಡ್ಯಾಂ ಕಟ್ಟುದರಾಗ ಮುಳುಗಿ ಹೋತು. ಹಾಗನ ಮೂರು-ನಾಕು ಕೋಟಿ ದುಡ್ಡು ಬಂದ್ರು ನಿನಗ ಇರಾಕ ಮನಿ ಇಲ್ಲ. ನಿನ್ನ ಮಗನ ಕಿಸೆದಾಗ ೧೦ ಪೈಸೆ ದುಡ್ಡಿಲ್ಲ ಅಂತ ಅಂದ್ರೆ ಬದುಕಿರುವ ತನಕ ಬಳಸತಿನಿ. ಸಾಯೋತನಕ ಗಳಸತೀನಿ. ಹಣವನ್ನು ನಾವು ಗಳಿಸಿದ್ದೇವೆ ಹೊರತು ಹಣ ನಮ್ಮನ್ನು ಗಳಸಿಲ್ಲ. ಹಣವನ್ನು ಇಟಗೊಂಡು ಕುಳಿತರೇ ಏನಾದೀತು? ದೀನರಿಗೆ, ದಲಿತರಿಗೆ, ಬಡವರಿಗೆ, ಜಂಗಮರಿಗೆ ದಾನ ಮಾಡಬೇಕು ಅನ್ನುತ್ತಿದ್ದಳು. ಹೀಗೆ ಬದುಕಿನುದ್ದಕ್ಕೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತ. ಅಬಲೆಯರಿಗೆ, ಗರ್ಭಿಣಿ ಸ್ತ್ರೀಯರಿಗೆ ಜಂಗಮರಿಗೆ, ಸಾಧು ಸಂತರಿಗೆ, ಬಡವರಿಗೆ ದಲಿತರಿಗೆ, ಸಹಾಯ ಮಾಡುತ್ತಲೇ ಬದುಕಿದ ಮಹಿಳೆ ಈ ಉಡಚಮ್ಮ ಅಜ್ಜಿ. ಯಾವ ಅಕ್ಷರ ಕಲಿಯದೇ ಹೋದರು ಈಡೀ ಸಮಾಜವನ್ನು ತಿದ್ದುವಂತಹ ಪರಿಪಾಠ ಹೊಂದಿದ್ದಳು. ಸ್ವ್ವಾತಂತ್ರ್ಯ ಪೂರ್ವದಲ್ಲಿಯೇ ಗಾಂಧೀಜಿಯ ಹೆಸರನ್ನು ಹಾಗೂ ಕರೆಯನ್ನು ಕೇಳಿದ್ದ ಈ ತಾಯಿ ತನ್ನ ಬದುಕಿನುದ್ದಕ್ಕೂ ಸತ್ಯವನ್ನೇ ಪರಿಪಾಲಿಸುತ್ತ ಅದರಂತೆ ಬದುಕಿದ ಮಹಾ ಚೇತನದ ಚೈತನ್ಯ ಮೂರ್ತಿ ಈ ತಾಯಿ. ಬಡವ-ಬಲ್ಲಿದರಿಗೆ ದಾನ ಧರ್ಮಗಳನ್ನು ಮಾಡುತ್ತ. ೧೧೧ ವರ್ಷ ಬದುಕಿ ಅನ್ಯರಿಗೆ ದಾರಿ ದೀಪವಾದ ಉದಾರ ಹೃದಯಿ ಉಡಚಮ್ಮ ತಾಯಿ ಇಂತಹ ತಾಯಿಯನ್ನು ಪಡೆದ ನಾವೇ ಧನ್ಯರು- ಮಾನ್ಯರು ಅಲ್ಲವೇ?

ಎಸ್. ಎಮ್. ಕಂಬಾಳಿಮಠ
ವಿಶ್ರಾಂತ ಪ್ರಾಧ್ಯಾಪಕರು
ಸಾಹಿತಿಗಳು
ಕೊಪ್ಪಳ
ಮೋ : ೯೪೮೧೮೬೩೬೫೮

Please follow and like us:
error