ವೈಭವ ಜೀವನ ಬಿಟ್ಟು ಸಮಾಜ ಸುಧಾರಣೆಗಾಗಿ ಶ್ರಮಿಸಿದ ಸಂತರು ಸೇವಾಲಾಲ : ಹೆಚ್. ವಿಶ್ವನಾಥರೆಡ್ಡಿ


ಕೊಪ್ಪಳ ಫೆ.  : ವೈಭವ ಜೀವನವನ್ನು ಬಿಟ್ಟು ಸಮಾಜ ಸುಧಾರಣೆಗಾಗಿ ಶ್ರಮಿಸಿ ಮಹಾನ್ ಸಂತರಾದವರು ಸೇವಾಲಾಲ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಭಾರತ ದೇಶವು ಸಾದು, ಸಂತರ, ಶರಣರ ಪ್ರದೇಶವಾಗಿದೆ. ಸಾದು ಸಂತರು, ಶರಣರು, ಮಹನೀಯರುಗಳು ಕೇವಲ ಯಾವುದೇ ಒಂದು ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಅವರೆಲ್ಲರೂ ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದು, ಮನುಕುಲದ ಆಸ್ತಿಗಳಾಗಿದ್ದಾರೆ. ಅಂತಹವರಲ್ಲಿ ಸಂತ ಸೇವಾಲಾಲರು ಕೂಡ ಒಬ್ಬರಾಗಿದ್ದಾರೆ. ಸೇವಾಲಾಲರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರು ಸಹ ವೈಭವ ಜೀವನವನ್ನು ಬಿಟ್ಟು ಸಮಾಜ ಸುಧಾರಣೆಗಾಗಿ ಶ್ರಮಿಸಿದವರು. ಇಂತಹ ಮಹನಿಯರ ಬಗ್ಗೆ ಅರಿತುಕೊಳ್ಳಲು ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ಮಹನಿಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಸಂತ ಸೇವಾಲಾಲರು ಸಾದು ಪುರುಷರಾಗಿದ್ದಾರೆ. ಭಕ್ತಿ-ಭಾವದ ಮುಖಾಂತರವಾಗಿ ಆಧ್ಯಾತ್ಮವನ್ನು ಹೊಂದಿದವರು. ಜೀವನದ ಬಗ್ಗೆ ಜನರಿಗೆ ಉಪದೇಶಗಳನ್ನು ನೀಡಿದ್ದಾರೆ. ಸೇವಾಲಾಲರು ಶಿಕ್ಷಣದತ್ತ ಜನರ ಗಮನವನ್ನು ಸೆಳೆಯುವಂತೆ ಮಾಡಿದ್ದು, ಎಲ್ಲರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ತಾಲೂಕಿನ ಬಹದ್ದೂರಬಂಡಿ ಗ್ರಾಮವು ಐತಿಹಾಸಿಕ ಇತಿಹಾಸವನ್ನು ಹೊಂದಿದ್ದು, ಇದರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಇದರಿಂದ ಬಹದ್ದೂರಬಂಡಿಯಲ್ಲಿ ಉದ್ಯಾನವನ ಹಾಗೂ ಸಂತ ಸೇವಾಲಾಲರ ದೇವಸ್ಥಾನವನ್ನು ನಿರ್ಮಿಸಲಾಗುವುದು. ಕೊಪ್ಪಳ ನಗರದಲ್ಲಿ ಬಂಜಾರ ಸಮುದಾಯ ಭವನವನ್ನು ಸಹ ನಿರ್ಮಿಸಬೇಕು ಎಂಬ ಸಮಾಜದ ಬೇಡಿಕೆಯಾಗಿದ್ದು, ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಂಜಾರ ಸಮಾಜವು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದ್ದು, ಸರ್ಕಾರದಿಂದ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗಿದೆ. ಬಂಜಾರ ಸಮಾಜವು ಕೃಷಿ ಕ್ಷೇತ್ರದಲ್ಲಿ ದುಡಿಯುವಂತಹ ಒಂದು ಹಿಂದುಳಿದ ಜನಾಂಗವಾಗಿದ್ದು, ಸರ್ಕಾರವು ಸಣ್ಣ-ಸಣ್ಣ ಸಮುದಾಯಗಳ ಅಭಿವೃದ್ಧಿಗಾಗಿಯು ಸಹ ಸಾಕಷ್ಟು ಹಣವನ್ನು ಬಜೆಟ್‌ನಲ್ಲಿ ನೀಡಿದೆ ಎಂದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕರಾದ ಡಾ. ಹರಿಲಾಲ್ ಪವಾರ ಅವರು ಸಂತ ಸೇವಾಲಾಲ್‌ರವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ ಹಾಗೂ ಗುರುರಾಜ ಹಲಗೇರಿ, ಮುಖಂಡರಾದ ಶೇಕು ಚೌಹಾಣ, ಶಿವಾನಂದ ನಾಯಕ್, ಶ್ರೀನಿವಾಸ ನಾಯಕ್, ಭರತ ನಾಯಕ್, ಪಿ. ಲಕ್ಷ್ಮಣ ನಾಯಕ್, ಡಾ. ಗಣಪತಿ ನಾಯಕ್, ಪಂಪಣ್ಣ ನಾಯಕ್, ಶಿವಣ್ಣ ನಾಯಕ್, ಹನುಮಂತ ರಾಥೋಢ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನಾ ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವಸಲ್ಲಿಸಲಾಯಿತು. ಕಾರ್ಯಕ್ರಮದ ನಂತರ ಸಂತ ಸೇವಾಲಾಲ್‌ರವರ ಭಾವಚಿತ್ರದೊಂದಿಗೆ ಮೆರವಣಿಗೆಯು ಸಾಹಿತ್ಯ ಭವನದಿಂದ ಪ್ರಾರಂಭಗೊಂಡು, ಜವಾಹರ ರಸ್ತೆ ಮಾರ್ಗವಾಗಿ ಗಡಿಯಾರ ಕಂಬದ ಮೂಲಕ ಬಹದ್ದೂರಬಂಡಿ ಗ್ರಾಮದವರೆಗೆ ಅದ್ದೂರಿಯಾಗಿ ಜರುಗಿತು

Please follow and like us:
error