ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಕೊಪ್ಪಳ ಜಿಲ್ಲೆಯ ಶೌಚಾಲಯ ಕ್ರಾಂತಿ :

ಕೀನ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯ ಪ್ರಗತಿಗೆ ಪ್ರಶಂಸೆ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ವಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಜನಸಮುದಾಯ ಜಾಗೃತಿಗೆ ಕೈಗೊಂಡ ಹೊಸ ಬಗೆಯ ತಂತ್ರಗಳು ಹಾಗೂ ಎದುರಿಸಲಾದ ಸವಾಲುಗಳ ಕುರಿತಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಜು. 11 ರಂದು ಕೀನ್ಯಾ ದೇಶದ ನಾಕೂರನ ಲೊಗ್‍ಬೊರೋ ವಿಶ್ವವಿದ್ಯಾಲಯದಲ್ಲಿ ಜರುಗಿದ 41 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ವಿಚಾರಗಳಿಗೆ ವಿದೇಶಿ ಪ್ರತಿನಿಧಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆ ಕುರಿತಂತೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಲವು ಬಗೆಯ ತಂತ್ರಗಳನ್ನು ಅನುಸರಿಸಿ, ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕೊಪ್ಪಳ ಜಿಲ್ಲೆಯನ್ನು ಇಡೀ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ. ಸ್ವಚ್ಛತೆ ಮತ್ತು ಆರೋಗ್ಯ ಕುರಿತಂತೆ ಕೀನ್ಯಾ ದೇಶದಲ್ಲಿ ಜು. 09 ರಿಂದ 13 ರವರೆಗೆ ನಡೆದಿರುವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಯಶಸ್ವಿ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಯ ಕ್ರಾಂತಿ ಕುರಿತು ವಿಶೇಷ ಉಪನ್ಯಾಸ ನೀಡಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಭಾರತ ದೇಶದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿ, ಕೀನ್ಯಾಕ್ಕೆ ತೆರಳಿದ್ದಾರೆ.
ಇಂಗ್ಲೇಂಡ್ ಮೂಲದ ಲೊಗ್‍ಬೊರೊ ವಿಶ್ವವಿದ್ಯಾಲಯ ಪ್ರತಿ ವರ್ಷ ಇಂತಹ ಸಮ್ಮೇಳನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತದೆ. ಈ ಬಾರಿ ಜು. 09 ರಿಂದ 13 ರವರೆಗೆ ಐದು ದಿನಗಳ ಕಾಲ ಕೀನ್ಯಾ ದೇಶದಲ್ಲಿ ಏರ್ಪಡಿಸಿದ್ದು, ಸುಮಾರು 40 ದೇಶಗಳಿಂದ 400 ವಿವಿಧ ತಜ್ಞರು, ವಿಷಯ ಪರಿಣಿತರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಈ ಸಮ್ಮೇಳನದಲ್ಲಿ ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಆಡಳಿತ ವರ್ಗವು ಸಾರ್ವಜನಿಕರ ಸಹಭಾಗಿತ್ವದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ಹೇಗೆ ಜಾಗೃತಿ ಮೂಡಿಸುವಲ್ಲಿ ಯಶಸ್ಸು ಕಂಡಿದೆ, ಇದಕ್ಕೆ ಎದುರಾದ ಸವಾಲುಗಳು ಯಾವುವು, ಕೈಗೊಂಡ ಕ್ರಮಗಳೇನು ಎನ್ನುವುದರ ಕುರಿತು ಕೊಪ್ಪಳ ಸಿಇಒ ವೆಂಕಟ್‍ರಾಜಾ ಅವರು ವಿಶೇಷ ಉಪನ್ಯಾಸ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿನ ಸಾಧನೆಯ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿಷಯ ವೆಂಕಟ್ ರಾಜಾ ಅವರು ಸಮ್ಮೇಳನದಲ್ಲಿ ವಿಷಯ ಮಂಡಿಸಿದರು.
ಶೌಚಾಲಯದ ನಿರ್ಮಾಣ ಹಾಗೂ ಅದರ ಮಹತ್ವ ಕುರಿತಂತೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಹಾಗೂ ಅನುಸರಿಸಿದ ತಂತ್ರಗಾರಿಕೆ ಎಲ್ಲ ಹಂತಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹ ಜನಜಾಗೃತಿಗೆ ನೀಡಿದ ಬೆಂಬಲ ಹಾಗೂ ಹಿಂದುಳಿದ ಪ್ರದೇಶವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಬೇರೂರಿದ್ದ ಬಯಲು ಶೌಚ ಪದ್ಧತಿಗೆ ಇತಿಶ್ರೀ ಹಾಡಲು ಜನರ ಮನಸ್ಸು ಪರಿವರ್ತಿಸಲು ಕೈಗೊಂಡ ಹಲವು ಬಗೆಯ ಕ್ರಮಗಳ ಕುರಿತು ಹಾಗೂ ಈ ಸಾಧನೆಯ ಹಾದಿಯಲ್ಲಿ ಎದುರಾದ ಸವಾಲುಗಳು ಮತ್ತು ಕೈಗೊಂಡ ಪರಿಹಾರ ಕ್ರಮಗಳ ಕುರಿತು ವೆಂಕಟ್ ರಾಜಾ ಅವರು ಸಮ್ಮೇಳನದಲ್ಲಿ ಸಮಗ್ರವಾಗಿ ವಿವರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನವೊಲಿಸಿ, ಶೌಚಾಲಯ ನಿರ್ಮಿಸಲು ಪ್ರೇರಣೆ ನೀಡುವುದಕ್ಕೆ ಹಲವು ಜನಪ್ರತಿನಿಧಿಗಳು, ನೌಕರರು, ಅಧಿಕಾರಿಗಳು ಅನೇಕ ಆಂದೋಲನಗಳನ್ನೇ ಕೈಗೊಳ್ಳಬೇಕಾಯಿತು. ಈ ಪೈಕಿ ಶಾಲಾ ಮಕ್ಕಳಿಂದ ಪಾಲಕರಿಗೆ ಪತ್ರ ಚಳುವಳಿ, ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ದಾಖಲೆ ಕೈಗೊಂಡಿದ್ದು, ಮಿಷನ್ 200 ಹೆಸರಿನಲ್ಲಿ 200 ಗಂಟೆಗಳಲ್ಲಿ 20 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಕಠಿಣ ಸವಾಲನ್ನು ಹಾಕಿಕೊಂಡು, ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೈಗೊಂಡಿದ್ದು, ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮ, ಶೌಚಾಲಯಕ್ಕಾಗಿ ಉಪವಾಸ ಕುಳಿತು, ಕೊನೆಗೆ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಹಠ ಸಾಧಿಸಿ, ಪ್ರಧಾನಮಂತ್ರಿಗಳಿಂದ ಪ್ರಶಂಸೆ ಪಡೆದಿದ್ದು, ಕೊಪ್ಪಳ ಜಿಲ್ಲೆಯ ಹೆಸರು, ಇಡೀ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದ್ದು ಅಲ್ಲದೆ, ಇತ್ತೀಚೆಗೆ ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು, ಈ ಎಲ್ಲ ಘಟನಾವಳಿಗಳನ್ನು ವಿದೇಶಿ ಪ್ರತಿನಿಧಿಗಳ ಸಮ್ಮುಖದಲ್ಲಿ ಹಂಚಿಕೊಂಡರು.
ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಆದ ಪ್ರಗತಿಯ ಸಮಗ್ರ ಮಾಹಿತಿಯನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಸಮ್ಮೇಳನದ ಆಯೋಜಕರು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳಿಗೆ ನೀಡಲಾಯಿತು. ಕೊಪ್ಪಳ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಲು ಕೈಗೊಂಡ ಕ್ರಮಗಳ ಕುರಿತು ಮಂಡಿಸಿದ ವಿಷಯಗಳನ್ನು ಆಲಿಸಿದ ಹಲವು ದೇಶಗಳ ಪ್ರತಿನಿಧಿಗಳು, ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ, ಭಾರತ ದೇಶ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಕೈಗೊಳ್ಳುತ್ತಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಸಂತಸ ಹಂಚಿಕೊಂಡಿದ್ದಾರೆ.

Please follow and like us:
error

Related posts