ವಿಶ್ಚ ರತ್ನ ಬಾಬಾಸಾಹೇಬ ಅಂಬೇಡ್ಕರ-ಹಾಲೇಶ ಕಂದಾರಿ

ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾನ್ ಮಾನವತಾವಾದಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಜನಾಂಗದ ನಾಯಕರು ಮಾತ್ರವಲ್ಲ., ಅಗ್ರಗಣ್ಯ ರಾಷ್ಟ್ರ ನಾಯಕರೂ ಹೌದು. “ಭಾರತ ಸ್ವಾತಂತ್ರ್ಯವಾದರಷ್ಟೇ ಸಾಲದು; ಧಾರ್ಮಿಕ,ರಾಜಕೀಯ, ಸಾಮಾಜಿಕ,ಆರ್ಥಿಕ ವಿಷಯಗಳಲ್ಲಿ ಭರತಖಂಡದಲ್ಲಿ ಜನಿಸಿದವರೆಲ್ಲ ಸಮಾನ ಹಕ್ಕುಳ್ಳವರಾಗಬೇಕು” ಎಂಬ ಧೃಢಸಂಕಲ್ಪದಿಂದ ಹೋರಾಟ ನಡೆಸಿದ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ ರವರು ಸರ್ವರ ವಿಕಾಸಕ್ಕಾಗಿ ಶ್ರಮಿಸಿದರು ಎಂದು ಭೂ ನ್ಯಾಯ ಮಂಡಳಿಯ ಮಾಜಿ‌ ಸದಸ್ಯರಾದ ಹಾಲೇಶ ಕಂದಾರಿ ಮಾತನಾಡಿದರು.

ಅವರು ಕೊಪ್ಪಳ ತಾಲೂಕಿನ‌ ಶಿವಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರವರ 128ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಬುದ್ದ ವಿಚಾರವಾದಿ ಶೋಷಣೆಯ ವಿರುದ್ದ ಸತತ ಹೋರಾಟ ನಡೆಸಿದ ಆಧುನಿಕ ಭಾರತದ ನಿರ್ಮಾಪಕರಲ್ಲೋಬ್ಬರಾದ ಬಾಬಾ ಸಾಹೇಬರು ಸಮಾನತೆ ಮತ್ತು ಭಾತೃತ್ವದ ನೆಲೆಗಟ್ಟಿನ ಮೇಲೆ ಆದರ್ಶ ಸಮಾಜದ ನಿರ್ಮಾಣ ಸಾಧ್ಯವೆಂದು ನಂಬಿ ಶೋಷಿತರ ಸರ್ವಾಂಗೀಣ ಪ್ರಗತಿಗಾಗಿ ಕ್ರಾಂತಿಕಾರಕ ಚಳುವಳಿಯನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು‌ ಹೇಳಿದರು. ಅಲ್ಲದೆ ಅಂಬೇಡ್ಕರ ಒಬ್ಬ ಜಗತ್ತಿನ ಶ್ರೇಷ್ಟ ವಿದ್ವಾಂಸರೂ, ವಿಚಾರವೇತ್ತರೂ,ಪ್ರೌಢ ಲೇಖಕರೂ, ಕಾನೂನು ಪಂಡಿತರೂ ಹಾಗೂ ಸಂವಿಧಾನ ತಜ್ಞರೂ ಆಗಿದ್ದರಿಂದ ಅವರು ಹುಟ್ಟಿದ ದಿನ ಏಪ್ರೀಲ್ 14ನ್ನು ವಿಶ್ವಸಂಸ್ಥೆಯು “ವಿಶ್ವ ಜ್ಞಾನದ ದಿನವನ್ನಾಗಿ ಆಚರಣೆ ಮಾಡಬೇಕೆಂದು ಘೋಷಿಸಿ, ಆಚರಿಸುತ್ತಿರುವದು ಅವರಿಗೆ ನೀಡುತ್ತಿರುವ ಶ್ರೇಷ್ಠಗೌರವ ಎಂದು ಮಾತನಾಡಿದರು.

ಮುಖಂಡರಾದ ರಾಘವೇಂದ್ರ ನರಗುಂದ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ರಾಜಕೀಯ ಕ್ಷೀತಿಜದಲ್ಲಿ ಅನೇಕ ಉದ್ದಾಮ ವ್ಯಕ್ತಿಗಳು,ಪ್ರತಿಭಾನ್ವಿತ ಮುಖಂಡರು,ರಾಜಕಾರಣಿಗಳು,ಮುತ್ಸದ್ದಿಗಳು ದೇಶದ ವಿಮೋಚನೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದವರದಲ್ಲಿ ಡಾ.ಭೀಮರಾಮ ರಾಮಜೀ ಅಂಬೇಡ್ಕರ ಅವರ ಹೆಸರು ಸ್ಥಿರಸ್ಥಾಯಿಯಾಗಿ ಉಳಿದಿದೆ.ಜಗತ್ತಿಗೆ ಮಾದರಿಯಾದ ಶ್ರೇಷ್ಟ ಸಂವಿಧಾನವನ್ನು ರಚಿಸಿ ಎಲ್ಲರೂ ಶಾಂತಿಯುತ ಜೀವನವನ್ನು ಕಲ್ಪಿಸಿದ್ದಾರೆ.ಬಾಬಾ ಸಾಹೇಬರ ಕನಸಿನಂತೆ ಶಿಕ್ಷಣ,ಸಂಘಟನೆ,ಹೋರಾಟ ತತ್ವಗಳನ್ನು ಅಳವಡಿಕೆ ಮಾಡಿಕೊಂಡು ಸ್ವಾಬಿಮಾನ ಜೀವನವನ್ನು ಸಾಗಿಸಬೇಕೆಂದು ಹೇಳಿದರು. ಅವರು ರಿಸರ್ವ ಬ್ಯಾಂಕ ಸ್ಥಾಪನೆ, ದೊಡ್ಡ ದೊಡ್ಡ ಆಣೆಕಟ್ಟುಗಳ ನಿರ್ಮಾಣದಲ್ಲಿ ಅವರ ಕೊಡುಗೆ ಬಹಳಷ್ಟಿದೆ.ಅಲ್ಲದೆ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಲಿಲ್ಲ ಎಂಬ ಕಾರಣಕ್ಕೆ ತನ್ನ ಕಾನೂನು ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದ ಲಿಂಗ ಸಮಾನತೆ ರೂವಾರಿ ಭೀಮಜೀ ಆಗಿದ್ದರು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಂಜುನಾಥ ಶಿವಪುರ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟೇಶ ದಾಸರ್, ಮುಖಂಡರಾದ ಶರಣಯ್ಯ ಹೀರೆಮಠ, ಗೋಣೆಪ್ಪ ಶೆಲ್ಯೂಡಿ,ಅಂಬೇಡ್ಕರ ಯುವಕ ಸಂಘದ ಅಧ್ಯಕ್ಷರಾದ ಹುಚ್ಚಿರಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಹನುಮೇಶ ಮಲ್ಲಣ್ಣನವರ್,ಮರಿಯಪ್ಪ ನಿಂಗಾಪುರ,ಗಾಳೆಪ್ಪ ಪಾನಶಾಫ್, ಮೈಲಪ್ಪ‌ ಶೆಲ್ಯೂಡಿ, ಕನಕಪ್ಪ,ಸೋಮಪ್ಪ ಟುಕ್ಕಾ, ಬಸವರಾಜ ಬಡಗಿ,ಕಾಂತೇಶ ಶಿವಪುರ, ರಾಮಪ್ಪ‌ಕವಲೂರ, ಸಂತೋಷ,ಶಿವಪ್ಪ ಹೊನ್ನುಂಚಿ, ಪರಶುರಾಮ್ ಮಾಸ್ಟರ ಮುಂತಾದವರು ಭಾಗವಹಿಸಿದ್ದರು. ಮಂಜುನಾಥ ಉಪ್ಪಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Please follow and like us:
error