ವಿಮಾನಯಾನ ನಿಲ್ದಾಣಕ್ಕೆ ಟನಕನಕಲ್ ಬಳಿ ೫೦೦ ಎಕರೆ ಭೂಮಿ ಸ್ವಾಧೀನ..!

ಸಂಸದ ಸಂಗಣ್ಣ ಕರಡಿ ಅವರಿಂದ ಮುಖ್ಯ ಮಂತ್ರಿಗಳಿಗೆ ಪತ್ರ ಎರಡನೇ ಹಂತದಲ್ಲಿ ಘೋಷಣೆಯಾಗಿದ್ದ ಉಡಾನ್ ಯೋಜನೆ ಅನುಷ್ಠಾನಕ್ಕೆ ಮುಂದುವರೆದ ಪ್ರಯತ್ನ

ಕೊಪ್ಪಳ : ಪ್ರಾದೇಶಿಕ ವಿಮಾನಯಾನ ಯೋಜನೆ ಆರಂಭಿಸಿರುವ ಕೇಂದ್ರ ಸರ್ಕಾರ, ಸಾಮಾನ್ಯರು ವಿಮಾನದಲ್ಲಿ ಪ್ರಯಾಣಕ್ಕೆ ಅನುಕೂಲವಾಗಲು ಕೊಪ್ಪಳ ಜಿಲ್ಲೆಗೆ ಮಂಜೂರಿಯಾಗಿದ್ದ ಎರಡನೇ ಹಂತದಲ್ಲಿ ಉಡಾನ್ ಯೋಜನೆಯ ಅನುಷ್ಠಾನಕ್ಕೆ ಮತ್ತೇ ಸಂಸದ ಸಂಗಣ್ಣ ಕರಡಿ ಅವರು ಪ್ರಯತ್ನವನ್ನು ಮುಂದುವರೆಸಿದ್ದಾರೆ.
ವಿಮಾನ ನಿಲ್ದಾಣ ಕೊರತೆಯಿಂದ ಉಡಾನ ಯೋಜನೆ ಅಡಿಯಲ್ಲಿ ವಿಮಾನ ಯಾನ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಪರ್ಯಾಯ ಕ್ರಮಕ್ಕೆ ಮುಂದಾಗಿರುವ ಸಂಸದರು ಮುಖ್ಯ ಮಂತ್ರಿಗಳಿಗೆ ಪತ್ರವನ್ನು ಬರೆದಿರುವರು. ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಇದಕ್ಕಾಗಿ ಅಗತ್ಯ ಜಮೀನನ್ನು ಭೂಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚನೆಯನ್ನು ನೀಡಲಾಗಿದೆ.
ಜಿಲ್ಲೆಗೆ ಉಡಾನ್ ಯೋಜನೆ ಘೋಷಣೆಯಾಗಿ ೨ ವರ್ಷ ಕಳೆದಿದ್ದು, ವಿಮಾನ ನಿಲ್ದಾಣ ನೀಡಲು ಎಂಎಸ್ಪಿಎಲ್(ಬಲ್ಡೋಟ್) ಕಂಪನಿ ಒಪ್ಪದ ಕಾರಣ ಜಿಲ್ಲೆಯಲ್ಲಿ ಈ ಮಹತ್ವದ ಯೋಜನೆ ನನೆಗುದಿಗೆ ಬಿದಿತ್ತು, ಕುರಿತು ಸಂಸದರು, ಮತ್ತು ಜಿಲ್ಲಾಡಳಿತವಷ್ಟೇ ಅಲ್ಲದೆ, ಸರ್ಕಾರದ ಹಂತದಲ್ಲೂ ಸಭೆಗಳು ನಡೆದಿದ್ದವು.
ಸರ್ಕಾರದ ಮಟ್ಟದಲ್ಲಿಯೂ ಎಷ್ಟೇ ಒತ್ತಡ ಹಾಕಿದರೂ ಸಹ ಎಂಎಸ್ಪಿಎಲ್ ಕಂಪನಿಯವರು ವಿಮಾನ ನಿಲ್ದಾಣದ ಸ್ಥಳ ನೀಡಲು ಒಪ್ಪದ ಕಾರಣ ಇಂದಿಗೂ ಈ ಯೋಜನೆ ಕಾರ್ಯಗತವಾಗುತ್ತಿಲ್ಲ, ಇದು ಜಿಲ್ಲೆಯ ಜನರಲ್ಲಿ ನಿರಾಶೆಯನ್ನು ಮೂಡಿಸಿತ್ತು, ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಅತ್ಯಂತ ಮಹತ್ವದ ಉಡಾನ್ ಯೋಜನೆ ಅನುಷ್ಠಾನದ ಪ್ರಯತ್ನದಲ್ಲಿ ಸಂಸದರು ಇವಾಗ ಹೊಸ ಯೋಚನೆಯೊಂದಿಗೆ ಸಿಎಂ ಅವರಿಗೆ ಬರೆದಿರುವ ಪತ್ರದಿಂದ ಯೋಜನೆ ಸಾಕಾರದತ್ತ ಆಶೆಭಾವನೆ ವ್ಯಕ್ತವಾಗುತ್ತಿದೆ.
ವಿಮಾನ ನಿಲ್ದಾಣ ಕೊರತೆಯಿಂದ ಉಡಾನ ಯೋಜನೆ ಅಡಿಯಲ್ಲಿ ವಿಮಾನ ಯಾನ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕೊಪ್ಪಳ ತಾಲ್ಲೂಕಿನ ಟನಕನಕಲ್ ಗ್ರಾಮದಿಂದ ಹಟ್ಟಿ ಕ್ರಾಸ್ ಎಡ ಬದಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ೫೦೦ ಎಕರೆ ಭೂಮಿಯನ್ನು ಕರ್ನಾಟಕ ಅಭಿವೃದ್ಧಿ ನಿಗಮದ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡು ವಿಮಾನ ಸೇವೆಯನ್ನು ಪ್ರಾರಂಬಿಸಬೇಕೆಂದು ಕೋರಿ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಮುಖ್ಯ ಮಂತ್ರಿಗಳಿಗೆ ಬರೆದಿರುವ ಪತ್ರಕ್ಕೆ ಸಿಎಂ ಯಡಿಯೂರಪ್ಪ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯ ಮಂತ್ರಿಗಳ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಹೆಚ್.ಆರ್.ರಾಜಪ್ಪ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಇವರಿಗೆ ಮಾ.೩, ೨೦೨೦ ರಂದು ಪತ್ರವನ್ನು ಬರೆದಿದ್ದು, ಸಂಸದರ ಈ ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಕೊಪ್ಪಳಕ್ಕೆ ಉಡಾನ್ ಯೋಜನೆ ಘೋಷಣೆಯಾದಾಗ ಬಾಗಲಕೋಟಿ ಸೇರಿ ಇತರ ಜಿಲ್ಲೆಯವರೆಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಅಲ್ಲಿನ ಜನಪ್ರತಿನಿಧಿಗಳು ಸಹ ಬೆಂಬಲಿಸಿದ್ದರು. ಆದಷ್ಟು ಬೇಗನೆ ಯೋಜನೆ ಅನುಷ್ಠಾನಗೊಳಿಸುವಂತೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳೊಡಗೂಡಿ ಸರ್ಕಾರಕ್ಕೆ ಒತ್ತಾಯಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

Please follow and like us:
error