ವಿಧಾನಸಭೆ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿ : ಎಂ. ಕನಗವಲ್ಲಿ

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಕ್ರಮ : ಎಂ. ಕನಗವಲ್ಲಿ


ಕೊಪ್ಪಳ ಮಾ. ೨೭  : ಕರ್ನಾಟಕ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ವಿವಿಧ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಚುನಾವಣಾ ವೇಳಾಪಟ್ಟಿಯನ್ವಯ ಚುನಾವಣಾ ಅಧಿಸೂಚನೆಯನ್ನು ಏಪ್ರಿಲ್ ೧೭ ರಂದು ಹೊರಡಿಸಲಾಗುವುದು. ಏ. ೨೪ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಏ. ೨೫ ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಏ. ೨೭ ಕೊನೆಯ ದಿನವಾಗಿದೆ. ಮತದಾನ ಮೇ. ೧೨ ರಂದು ಜರುಗಲಿದ್ದು, ಮತಗಳ ಎಣಿಕೆ ಮೇ. ೧೫ ರಂದು ನಡೆಯಲಿದೆ. ಚುನಾವಣೆ ಪ್ರಕ್ರಿಯೆಯನ್ನು ಮೇ. ೧೮ ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಅಧಿಕಾರಿಗಳು ಅಲ್ಲದೆ ಗ್ರಾಮ ಪಂಚಾಯತಿಗಳ ಪಿಡಿಒ/ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಚೇರಿಗಳ ಸ್ಥಳಗಳು, ಖಾಸಗಿ ಸ್ಥಳಗಳು, ಬಸ್‌ಸ್ಟ್ಯಾಂಡ್, ಬಸ್ ತಂಗುದಾಣಗಳು ಹೀಗೆ ಎಲ್ಲೆಡೆಗಳಲ್ಲಿ ಇರುವ ಜಾಹೀರಾತು ಫಲಕಗಳಲ್ಲಿನ ಫ್ಲೆಕ್ಸ್ ಮಾಹಿತಿಯನ್ನು, ಕೂಡಲೆ ತೆಗೆದುಹಾಕಬೇಕು. ಯಾವುದೇ ಇಲಾಖೆಗೆ ಸಂಬಂಧಿಸಿದ್ದರೂ, ಎಲ್ಲ ಜಾಹೀರಾತುಗಳ ಮಾಹಿತಿಯನ್ನು, ಸರ್ಕಾರದ ಯೋಜನೆಗಳ ಕುರಿತು ಜಾಹೀರಾತು ಫಲಕಗಳಲ್ಲಿನ ಮಾಹಿತಿಯನ್ನು ಕೂಡ ತೆಗೆಸಬೇಕು. ನೀತಿ ಸಂಹಿತೆ ಜಾರಿಯಾದ ೨೪ ಗಂಟೆಗಳ ಒಳಗಾಗಿ ಜಿಲ್ಲೆಯಲ್ಲಿ ಎಲ್ಲ ಜಾಹೀರಾತುಗಳು ತೆರವುಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿಗಳ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು. ಜನಪ್ರತಿನಿಧಿಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ಸಂಬಂಧಪಟ್ಟ ಇಲಾಖೆಗಳು ಹಿಂಪಡೆಯಬೇಕು. ಇಂತಹ ಎಲ್ಲ ವಾಹನಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸುಪರ್ದಿಗೆ ವಹಿಸಿ, ವರದಿ ಮಾಡಿಕೊಳ್ಳಬೇಕು. ಜಿಲ್ಲೆಯ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಯಾವುದೇ ಇಲಾಖೆಗಳು ವಯಕ್ತಿಕವಾಗಿ ಫಲಾನುಭವಿಗಳಿಗೆ ನೀಡುವ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ವಿತರಿಸುವಂತಿಲ್ಲ. ಸರ್ಕಾರಿ ಯೋಜನೆಗಳ ಕಾಮಗಾರಿಗಳು ಈಗಾಗಲೆ ಪ್ರಾರಂಭಗೊಂಡಿದ್ದಲ್ಲಿ, ಪ್ರಗತಿಯಲ್ಲಿದ್ದಲ್ಲಿ, ಅಂತಹವುಗಳನ್ನು ಮುಂದುವರೆಸಬಹುದಾಗಿದ್ದು, ಇದುವರೆಗೂ ಭೌತಿಕವಾಗಿ ಆರಂಭವಾಗದೆ ಇರುವ ಕಾಮಗಾರಿಗಳನ್ನು ನೀತಿ ಸಂಹಿತೆ ಅವಧಿಯಲ್ಲಿ ಪ್ರಾರಂಭಿಸುವಂತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜಾರಿಯಲ್ಲಿರುವ ಕಾಮಗಾರಿಗಳ ಸಮಗ್ರ ವಿವರವನ್ನು ೪೮ ಗಂಟೆಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಅಧಿಕಾರಿಗಳು ತಮಗೆ ವಹಿಸಲಾಗುವ ಕಾರ್ಯವನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ರೀತಿಯಿಂದ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:
error

Related posts