ವಿಜೃಂಭಣೆಯಿಂದ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಆಚರಣೆ : ಸಿ.ಎಸ್ ಚಂದ್ರಮೌಳಿ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯ ಹುಲಿಗೆಮ್ಮ ದೇವಿ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಹೇಳಿದರು.
ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಆಚರಣೆ ಕುರಿತು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯಾನಿರ್ವಹಣಾಧಿಕಾರಿ ಕಛೇರಿಯಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧಕ್ಷತೆ ವಹಿಸಿ ಅವರು ಮಾತಾನಾಡಿದರು.
ಈ ಬಾರಿಯ ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು. ಈ ಬಾರಿ ವಿಶೇಷವಾಗಿ ಸೆಪ್ಟೆಂಬರ್. ೨೫ ರಂದು ಚಂಡಿಕಾ ಹೋಮ ಜರುಗಲಿದೆ. ಉಳಿದಂತೆ ಸೆ. ೨೧ ರಂದು ಪ್ರತಿಪದ ಘಟಸ್ಥಾಪನ ಶರನ್ನವರಾತ್ರಿ ಆರಂಭ, ೨೨ ರಂದು ದ್ವಿತೀಯ, ೨೩ ರಂದು ತೃತೀಯ, ೨೪ ರಂದು ಚತುರ್ಥಿ, ೨೫ ರಂದು ಲಲಿತಾ ಪಂಚಮಿ ಅಂಗವಾಗಿ ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಸಂಜೆ ೦೭-೦೦ ಗಂಟೆಗೆ ದೇವಿಗೆ ಶಾರ್ಧೂಲ ವಾಹನ ಸೇವೆ ಅಲಂಕಾರ. ೨೬ ರಂದು ಷ್ರಷ್ಠೀ, ಸಂಜೆ ೦೭-೦೦ ಗಂಟೆಗೆ ದೇವಿಗೆ ಸಿಂಹವಾಹನ ಸೇವೆ ಅಲಂಕಾರ. ೨೭ ರಂದು ಸಪ್ತಮಿ, ಸಂಜೆ ೦೭-೦೦ ಗಂಟೆಗೆ ದೇವಿಗೆ ಮಯೂರ ವಾಹನ ಸೇವೆ. ೨೮ ರಂದು ಅಷ್ಟಮಿ (ದುರ್ಗಾಷ್ಟಮೀ ಸರಸ್ವತಿ ಪೂಜೆ), ಸಂಜೆ ೦೭-೦೦ ಗಂಟೆಗೆ ದೇವಿಗೆ ಗಜವಾಹನ ಸೇವೆ ಅಲಂಕಾರ. ೨೯ ರಂದು ನವಮಿ (ಖಂಡಾ ಪೂಜಾ ಘಟವಿಸರ್ಜನೆ), ಸಂಜೆ ೦೭-೦೦ ಗಂಟೆಗೆ ದೇವಿಗೆ ಗಜವಾಹನ ಸೇವೆ ಅಲಂಕಾರ. ಹಾಗೂ ಸೆ. ೩೦ ರಂದು ದಶಮಿ, ಸಂಜೆ ೦೫-೦೦ ಗಂಟೆಗೆ ಶಮೀವೃಕ್ಷಕ್ಕೆ ತೆರಳುವುದು, ಶಮೀ ಪೂಜೆ, ತೊಟ್ಟಿಲ ಸೇವಾ, ಮಹಾಮಂಗಳಾರತಿ, ಮಂತ್ರ ಪುಷ್ಪಗಳೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.
ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ನಿಮಿತ್ಯ ೧೦ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಪೊಲೀಸ್ ಭದ್ರತೆ, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಭಕ್ತರಿಗೆ ಅನುಕೂಲವಾಗುವಂತೆ ಇತರೆ ವ್ಯವಸ್ಥೆಗಳನ್ನು ಒದಗಿಸಲಾಗುವುದು. ದಸರಾ ಮಹೋತ್ಸವದ ಈ ಕಾರ್ಯಕ್ರಮಗಳನ್ನು ವಿಜ್ರಂಭಣೆಯಿಂದ ಹಾಗೂ ಯಶಸ್ವಿಯಾಗಿ ಜರುಗಿಸಲು ಭಕ್ತಾದಿಗಳನ್ನೊಡಗೂಡಿ, ಎಲ್ಲರೂ ಸಹಕರಿಸುವಂತೆ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯಾನಿರ್ವಹಣಾಧಿಕಾರಿ ಸಿ.ಎಸ್ ಚಂದ್ರಮೌಳಿ ಅವರು ಮನವಿ ಮಾಡಿದರು.
ಸಭೆಯಲ್ಲಿ ಗಣ್ಯರಾದ ರಮೇಶ ವೈದ್ಯ, ದತ್ತೂರಾವ್ ದೇಸಾಯಿ, ವಿಜಯಕುಮಾರ, ಅನಿಲ ಪೂಜಾರ, ಬಾಳಪ್ಪ ಪೂಜಾರ, ಬಾಳನಗೌಡ್ರ, ಬಾಳೆಪ್ಪ, ಹುಸೇನಪೀರಾ, ಸುರೇಶ ಕುಮಾರ, ನಿಂಗಪ್ಪ ಟಿ., ಅನಿಲ ಕುಮಾರ ದೇಸಾಯಿ, ಕೃಷ್ಣಪ್ಪ ಕಟ್ಟಿ, ಪ್ರಭುರಾಜ ಪಾಟೀಲ್, ಮಹೇಶ ಹಾಗೂ ವಾರ್ತಾ ಇಲಾಖೆಯ ಎಂ. ಅವಿನಾಶ ಸೇರಿದಂತೆ ಹುಲಿಗಿ ಗ್ರಾಮಸ್ಥರು ಉಪಸ್ಥಿತರಿದ್ದರು.

Please follow and like us:
error