ವಾಲ್ಮೀಕಿ ಮೀಸಲಾತಿ ಹೆಚ್ಚಳ: ಶ್ರೀರಾಮುಲು ಭರವಸೆ

ರಾಜ್ಯದಲ್ಲಿ ೭೦ ಲಕ್ಷದಷ್ಟಿರುವ ನಾಯಕ ಸಮುದಾಯ | ಪ್ರಧಾನಿ ಮೋದಿಗೆ ಮನವರಿಕೆ
ವಾಲ್ಮೀಕಿ ಮೀಸಲಾತಿ ಹೆಚ್ಚಳ: ಶ್ರೀರಾಮುಲು ಭರವಸೆ

ಶಿವಪುರ (ಕೊಪ್ಪಳ): ರಾಜ್ಯದ ಪರಿಶಿಷ್ಟ ಪಂಗಡಗಳ ಪೈಕಿ ಅತ್ಯಧಿಕ ಸಂಖ್ಯೆಯಲ್ಲಿರುವ ವಾಲ್ಮೀಕಿ (ನಾಯಕ) ಸಮುದಾಯದ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ. ೩.೫ರಿಂದ ಶೇ.೭.೫ಕ್ಕೆ ಶೀಘ್ರ ಹೆಚ್ಚಿಸಬೇಕೆನ್ನುವ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ ಎಂದು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಹೇಳಿದರು.
ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಬಿಜೆಪಿ ನವಶಕ್ತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಗಣತಿಯಲ್ಲಿ ವಾಲ್ಮೀಕಿ ಸಮುದಾಯದ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಅಂಶ ದಾಖಲಾಗಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ತಂದಿದ್ದೇನೆ. ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಮೀಸಲಾತಿ ಪ್ರಮಾಣ ಹೆಚ್ಚಳ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ, ನಮ್ಮ ಸಮುದಾಯಕ್ಕೆ ಇನ್ನಷ್ಟು ಹೆಚ್ಚಿನ ಅವಕಾಶಗಳು ದಕ್ಕಲಿವೆ. ಇದು ನಮ್ಮ ಹಕ್ಕು ಕೂಡಾ ಎಂದು ಶ್ರೀರಾಮುಲು ಹೇಳಿದರು.
ಈಗ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ನಡೆಸಿದ್ದಾರೆ. ಆದರೆ, ಅವರನ್ನು ನಂಬಬೇಡಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಮ್ಮ ಸಮಾಜವನ್ನು ಕಡೆಗಣಿಸಲಾಗಿದೆ. ಆದ್ದರಿಂದ, ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಿಜೆಪಿಯನ್ನು ತಾವು ಬೆಂಬಲಿಸಬೇಕು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಬೇಕು ಎಂದು ಶ್ರೀರಾಮುಲು ಮನವಿ ಮಾಡಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಹೈದರಾಬಾದ್ ಕರ್ನಾಟಕ ನೀರಾವರಿಯಿಂದ ವಂಚಿತವಾಗಿದೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕೇಂದ್ರ ಸರ್ಕಾರದ ಜನಹಿತ ಕಾರ್ಯಕ್ರಮಗಳನ್ನೂ ರಾಜ್ಯ ಸರ್ಕಾರ ಬೆಂಬಲಿಸಿಲ್ಲ. ಇಂತಹ ಸರ್ಕಾರವನ್ನು ಕಿತ್ತೊಗೆದು, ರೈತಪರ-ಜನಪರ ನಾಯಕರಾಗಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿಸುವಂತೆ ಆಶೀರ್ವದಿಸಿ ಎಂದು ಕೋರಿಕೊಂಡರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ೩,೫೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ತಡೆಯುವ ಒಂದೇ ಒಂದು ಯೋಜನೆಯನ್ನೂ ಸಿದ್ದರಾಮಯ್ಯ ಹಮ್ಮಿಕೊಳ್ಳಲಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಅವರು ಕಿಡಿಕಾರಿದರು.
ವಾಲ್ಮೀಕಿ ದೇವಸ್ಥಾನದ ಲೋಕಾರ್ಪಣೆ ನಂತರ ನಡೆದ ಕಾರ್ಯಕ್ರಮದಲ್ಲಿ ನಾಯಕ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶಿವಪುರ ಕಾರ್ಯಕ್ರಮದ ನಂತರ, ಶ್ರೀರಾಮುಲು ಮತ್ತು ಕರಡಿ ಸಂಗಣ್ಣ ಅವರು ಅಳವಂಡಿಯಲ್ಲಿ ಹಮ್ಮಿಕೊಂಡಿರುವ ಬಿಜೆಪಿ ನವಶಕ್ತಿ ಸಮಾವೇಶಕ್ಕೆ ತೆರಳಿದರು.

Please follow and like us:
error