ವಾಲ್ಮೀಕಿ ನಾಯಕ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

ಕೊಪ್ಪಳ, ಅ. ೨೪: ಕರ್ನಾಟಕದಲ್ಲಿ ಅರ್ಧ ಕೋಟಿ ಜನಸಂಖ್ಯೆ ಹೊಂದಿರುವ ಮುಗ್ಧ ಸಮುದಾಯ ವಾಲ್ಮೀಕಿ ನಾಯಕ ಸಮುದಾಯ ಸಂಘಟನೆಯಿಂದ ಹಿಂದೆ ಬಿದ್ದಿರುವ ಕಾರಣ ಹಲವಾರು ಸೌಲಭ್ಯಗಳಿಂದ ಸಮುದಾಯ ನಿರಂತರವಾಗಿ ವಂಚನೆಗೆ ಅಸಮಾನ ಹಂಚಿಕೆಗೆ ಒಳಗಾಗಿದೆ ಆದ್ದರಿಂದ ಪ್ರಸ್ತುತ ಕೆಲವು ಪ್ರಮುಖ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕೆಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಮಿತಿ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಮತ್ತು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಪಿ. ಮೂಲಕ ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ. ಅಕ್ಟೋಬರ್ ೨೪ ರಂದು ರಾಜ್ಯದಾದ್ಯಂತ ಸರಕಾರಿ ಕಾರ್ಯಕ್ರಮವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ, ಆದರೆ ಇದು ಸಮುದಾಯಕ್ಕೆ ನಿಜವಾದ ಶಕ್ತಿ ನೀಡಲು ವಿಫಲವಾಗಿದೆ. ಸಮುದಾಯದ ಏಳ್ಗೆಗೆ ಪ್ರಮುಖವಾದ ನಿರ್ಣಯಗಳನ್ನು ತೆಗೆದುಕೊಂಡು ಘನ ಸರಕಾರ ಸಮುದಾಯದ ಹಿತಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಮುದಾಯಕ್ಕೆ ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. ೭.೫ ರಷ್ಟು ಮೀಸಲಾತಿ ನೀಡುವದು ಸೇರಿದಂತೆ, ಸರಕಾರ ಸಮುದಾಯಕ್ಕೆ ನೀಡಿರುವ ಅನುದಾನವನ್ನು ಪ್ರತ್ಯೇಕವಾಗಿರಿಸಿ ಅದಕ್ಕೆ ವಾಲ್ಮೀಕಿ ಕಲ್ಯಾಣ ಇಲಾಖೆ ಎಂಬ ಹೆಸರಿನಿಂದ ಪ್ರತ್ಯೇಕ ಸಚಿವ ಸ್ಥಾನ ಸೃಷ್ಠಿಸುವದು. ಅದರ ಮೂಲಕ ಸಮಾಜ ಕಲ್ಯಾಣದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವದು.
ಕೊಪ್ಪಳ ಜಿಲ್ಲೆ ಮತ್ತು ತಾಲೂಕಗಳನ್ನು ಸೇರಿದಂತೆ ರಾಜ್ಯದಲ್ಲಿ ಇನ್ನೂ ಬಾಕಿ ಇರುವ ಪ್ರತ್ಯೇಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಪ್ರತ್ಯೇಕ ಕಚೇರಿ ಸ್ಥಾಪನೆ ಮಾಡಬೇಕು. ಕೊಪ್ಪಳ ಜಿಲ್ಲೆ ಮತ್ತು ತಾಲೂಕಗಳನ್ನು ಸೇರಿದಂತೆ ರಾಜ್ಯದಲ್ಲಿ ಇನ್ನೂ ಬಾಕಿ ಇರುವ ಪ್ರತ್ಯೇಕ ಪರಿಶಿಷ್ಟ ಪಂಗಡ ಇಲಾಖಾ ಕಛೇರಿ ತೆರೆಯಬೇಕು.
ಪರಿಶಿಷ್ಟ ಪಂಗಡಕ್ಕೆ ಹೊಸದಾಗಿ ಯಾವುದಾದರು ಜಾತಿಯನ್ನು ಸೇರಿಸುವ ಮುನ್ನ ಸಮುದಾಯವನ್ನು ಸರಿಯಾಗಿ ಪರಿಗಣಿಸಬೇಕು ಹಾಗೂ ಸೂಕ್ತ ಮೀಸಲನ್ನು ಹೆಚ್ಚಿಸಿಕೊಂಡು ಸೇರಿಸಬೇಕು, ಶೀಘ್ರ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಮನವಿಗೆ ಸ್ಪಂದಿಸದಿದ್ದರೆ ಉಗ್ರವಾದ ಪ್ರತಿಭಟನೆ ಮತ್ತು ರಾಜಕೀಯ ವೈರುಧ್ಯವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿರುವ ಅವರು, ವಾಲ್ಮೀಕಿ ಸಮುದಾಯದಿಂದ ಆಯ್ಕೆಯಾಗಿರುವ ಶಾಸಕರು ತುರ್ತಾಗಿ ಕಾರ್ಯಪ್ರವೃತ್ತರಾಗದಿದ್ದಲ್ಲಿ ಅವರ ವಿರುದ್ಧವೂ ಹೋರಾಟ ರೂಪಿಸಲಾಗುವದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸೇನೆ ಬಸವರಾಜ ದೇಸಾಯಿ, ಧರ್ಮಣ್ಣ ಹಟ್ಟಿ, ರಾಘು ವಾಲ್ಮೀಕಿ, ಹನುಮಂತ ಡಂಬ್ರಳ್ಳಿ ಇತರರು ಇದ್ದರು.