ವಂಚನೆಗೊಳಗಾಗುವ ಗ್ರಾಹಕರು ದೂರು ಸಲ್ಲಿಸಿ : ಏಕತಾ ಹೆಚ್.ಡಿ.

koppal_consumer_forum_consumer_day ವ್ಯಾಪಾರದಲ್ಲಿ ಮೋಸ, ವೈದ್ಯರಿಂದ ಅನ್ಯಾಯ ಹೀಗೆ ಯಾವುದೇ ವ್ಯವಹಾರಗಳಲ್ಲಿ ವಂಚನೆ ಹಾಗೂ ಮೋಸಕ್ಕೆ ಒಳಗಾಗುವ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಅವರು ಕರೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಗಳ ವತಿಯಿಂದ ಸೋಮವಾರದಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ, ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮೊದಲು ಗ್ರಾಹಕರು, ಆ ವಸ್ತು ಅಥವಾ ಸಾಮಗ್ರಿಯ ಗುಣಮಟ್ಟ ಉತ್ತಮವಾಗಿದೆಯೇ, ಕೊಂಡುಕೊಳ್ಳಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಐಎಸ್‌ಐ ಮಾರ್ಕ್ ನಂತಹ ಗುಣಮಟ್ಟ ಖಾತರಿಗೊಳಿಸುವ ಚಿಹ್ನೆಗಳನ್ನು ನೋಡಿ ಖರೀದಿಸಬೇಕು. ಮಾರಾಟಗಾರರು ಗರಿಷ್ಠ ಮಾರಾಟ ಬೆಲೆ (ಎಂ.ಆರ್.ಪಿ.) ಗಿಂತ ಹೆಚ್ಚು ಬೆಲೆ ಪಡೆದರೆ ಕೂಡಲೇ ದೂರು ದಾಖಲಿಸಿ. ವೈದ್ಯರಿಂದ ಹಾಗೂ ಇನ್ನಾವುದೇ ರೀತಿಯಲ್ಲಿ ತಮಗೆ ಅನ್ಯಾಯವಾದರೆ ೨ವರ್ಷಗಳ ಅವಧಿಯೊಳಗೆ ಪಕ್ಕಾ ದಾಖಲೆಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಿ. ಭಾರತ ಒಂದು ಅಭಿವೃದ್ದಿಯ ವ್ಯವಸ್ಥೆಯಾಗಿದ್ದು, ಆನ್‌ಲೈನ್‌ನಲ್ಲಿ ನಗದು ರಹಿತ ವ್ಯವಹಾರಗಳಿಗೆ ಇತ್ತೀಚೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಸರಿಯಾದ ಮಾಹಿತಿ ಹೊಂದಿದಲ್ಲಿ, ಇದು ಹಣಕಾಸಿನ ವ್ಯವಹಾರಗಳಿಗೆ ಅತ್ಯಂತ ಸುಲಭ ಮಾರ್ಗವಾಗಲಿದೆ. ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾರತವನ್ನು ಡಿಜಿಟಲ್ ಇಂಡಿಯಾ ವನ್ನಾಗಿಸಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ಸಹಾಯಕ ನೊಂದಣಾಧಿಕಾರಿ ಪಿ.ಎಸ್. ಅಮರದೀಪ ಅವರು ವಿಶೇಷ ಉಪನ್ಯಾಸ ನೀಡಿ, ಮಹಿಳೆಯರು ಟೈಲರಿಂಗ್, ಡಿಸೈನಿಂಗ್, ಕ್ರಾಫ್ಟ್ ವಿವಿಧ ವಸ್ತುಗಳನ್ನು ತಯಾರಿಸಲು ತಮ್ಮ ಮನೆಯಲ್ಲಿ ಕುಳಿತುಕೊಂಡು ತರಬೇತಿಯನ್ನು ಪಡೆಯಬಹುದು. ಕೃಷಿ, ತೋಟಗಾರಿಕೆ ಪದ್ಧತಿಗಳು ಹಾಗೂ ಬೆಳೆಗಳಿಗೆ ಮಾರುಕಟ್ಟೆಯ ಅಂದಿನ ಬೆಲೆಗಳ ಕುರಿತು ರೈತರು ಆನ್‌ಲೈನ್ ಮೂಲಕ ತಿಳಿದುಕೊಳ್ಳಬೇಕು. ಕುರಿಸಾಕಾಣಿಕೆ, ಮೇಕೆಸಾಕಾಣಿಕೆ, ಪಶುಪಾಲನೆ ಮುಂತಾದವುಗಳ ಪಾಲನೆ, ಪೋಷಣೆಗಳ, ರೋಗಗಳ ತಡೆಗಟ್ಟುವಿಕೆಯ ಕ್ರಮಗಳನ್ನು ಇಂಟರ್‌ನೆಟ್ ವ್ಯವಸ್ಥೆಯ ಮುಖಾಂತರ ಮಾಹಿತಿ ಪಡೆಯಬಹುದು. ತಾಂತ್ರಿಕ ಜಗತ್ತು ಕಟ್ಟುವದನ್ನು ಗ್ರಾಹಕರು ನಂಬಬಹುದು ಎಂಬ ಪ್ರಸಕ್ತ ಸಾಲಿನ ಘೋಷವಾಕ್ಯದ ಕುರಿತು ವಿವರಣೆ ನೀಡಿದರು.
ಸಮಾರಂಭದಲ್ಲಿ ಕೊಪ್ಪಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೆಶಕರಾದ ಸಿ.ಡಿ. ಗೀತಾ, ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯೆ ಸುಜಾತ ಅಕ್ಕಸಾಲಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ಮನೋಜ ಡೊಳ್ಳಿ, ಸಾವಿತ್ರಿ ಮುಜುಂದಾರ್ ಉಪಸ್ಥಿತರಿದ್ದರು. ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ಹಾಗೂ ಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

Please follow and like us:
error

Related posts

Leave a Comment