ಲೋಕಸಭಾ ಸಾರ್ವತ್ರಿಕ ಚುನಾವಣೆ : ಮದ್ಯ ಮಾರಾಟ ನಿಷೇಧ

ಕೊಪ್ಪಳ : ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ನಿಮಿತ್ಯ ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಹಾಗೂ ಒಣದಿನಗಳೆಂದು (ಡ್ರೈಡೆ) ಘೋಷಿಸಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಏಪ್ರಿಲ್. 23 ರಂದು ಮತದಾನ ನಡೆಯಲಿದ್ದು, ಚುನಾವಣೆಯು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತದಾನ ಅಂತ್ಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಮದ್ಯಪಾನ, ಮದ್ಯ ಮಾರಾಟ ನಿಷೇಧಿಸುವಂತೆ ಭಾರತ ಚುನಾವಣಾ ಆಯೋಗದಿಂದ ನಿರ್ದೇಶನ ಬಂದಿದ್ದು, ಮತದಾನದ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಏ. 21ರ ಸಂಜೆ 6 ಗಂಟೆಯಿಂದ 23ರ ಮಧ್ಯರಾತ್ರಿ 12 ಗಂಟೆಯವರೆಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135(ಸಿ) ಹಾಗೂ ಅಬಕಾರಿ ಸನ್ನಸುಗಳು (ಸಾಮಾನ್ಯ ಷರತ್ತುಗಳು) ನಿಯಮ 1967ರ ಅಧಿನಿಯಮ 10(ಬಿ) ಪ್ರಕಾರ ಜಿಲ್ಲೆಯಾದ್ಯಂತ ಮದ್ಯಪಾನ, ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ಅಲ್ಲದೇ ನಿಷೇಧಿತ ಅವಧಿಯಲ್ಲಿ ಎಲ್ಲಾ ಬಗೆಯ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಯಾವುದೇ ತರಹದ ಬಾರ್ ಆಂಡ್ ರೆಸ್ಟೋರೆಂಟ್ ಕ್ಲಬ್ ಮತ್ತು ಹೋಟಲ್, ಡಾಬಾಗಳಲ್ಲಿಯೂ ಸಹ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿದೆ. ಈ ಸಂಬಂಧವಾಗಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ. ಈ ಆದೇಶವನ್ನು ಜಾರಿ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Please follow and like us:
error