ಲೋಕಶಾಂತಿಗಾಗಿ ಸಂಸದ ಕರಡಿ ಸಂಗಣ್ಣರಿಂದ ಶತ ಚಂಡಿಕಾ ಯಾಗ

ಕೊಪ್ಪಳ: ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಕಾವು ಹಿಂಸಾಚಾರಕ್ಕೆ ತಿರುಗುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಶಾಂತಿ ಹಾಗೂ ರೈತರ ಕಲ್ಯಾಣ, ಯಡಿಯೂರಪ್ಪ ಸರ್ಕಾರ ಸುರಕ್ಷಿತವಾಗಿ ಅವಧಿ ಪೂರ್ಣಗೊಳಿಸಲಿ ಎಂದು ಕೊಪ್ಪಳದ ಸಂಸದ ಕರಡಿ ಸಂಗಣ್ಣ ಶತ ಚಂಡಿಕಾ ಯಾಗ ಮಾಡಿಸಿದ್ದಾರೆ.
ಕೊಪ್ಪಳದ ಪೌರಾಣಿಕ ಪ್ರಸಿದ್ಧ ದೇವಸ್ಥಾನ ಹುಲಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಸಂಸದ ಸಂಗಣ್ಣ ಕರಡಿ ಅವರು ಮತ್ತು ತಮ್ಮ ಕುಟುಂಬ ಸಮೇತರಾಗಿ ಶತಚಂಡಿಕಾ ಯಾಗ ಮಾಡಿಸಿದರು. ಪೌರತ್ವ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನೆಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು ನೋವು ಸಂಭವಿಸುತ್ತಿವೆ. ಈ ಕಾರಣಕ್ಕೆ ಮತ್ತು ಲೋಕ ಕಲ್ಯಾಣಕ್ಕಾಗಿ ಮಾಡಿಸುವ ಶತಚಂಡಿಕಾ ಯಾಗವನ್ನು ಸಂಸದರು ಕುಟುಂಬ ಸಮೇತ ಮಾಡಿಸಿದರು. ಈ ವಿಶೇಷ ಯಾಗವನ್ನು ಶೃಂಗೇರಿಯ ಕೃಷ್ಣಮೂರ್ತಿ ಗಣಪಾಟಿ ಮತ್ತು ಉಡುಪಿಯ ಪ್ರವೀಣ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ೧೦ಕ್ಕೂ ಹೆಚ್ಚು ಬಡ್ಜಿಗಳು ಹೋಮ ನಡೆಸಿದರು. ಶುಕ್ರವಾರ ಬೆಳಗ್ಗೆ ೮ ಗಂಟೆಯಿಂದ ಆರಂಭವಾದ ಹೋಮ ಮಧ್ಯಾಹ್ನ ಒಂದು ಗಂಟೆವರೆಗೆ ನಡೆದು ಪೂರ್ಣಾಹುತಿ ಸಲ್ಲಿಸುವ ಮೂಲಕ ಕೊನೆಗೊಂಡಿತು.
ಹೋಮದ ಬಳಿಕ ಆಗಮಿಸಿದ್ದ ನೂರಾರು ಕಾರ್ಯಕರ್ತರು ಪ್ರಸಾದ ಸ್ವೀಕರಿಸಿದರು. ಈ ವೇಳೆ ಮಸ್ಕಿ ಅರ್ನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಶಾಸಕ ಹಾಲಪ್ಪ ಆಚಾರ್, ಬಸವನಗೌಡ ತುರ್ವಿಹಾಳ, ಸಂತೋಷ್ ಕೆಲೋಜಿ, ಅಮರೇಶ್ ಕರಡಿ, ಗವಿಸಿದ್ದಪ್ಪ ಕರಡಿ, ರಮೇಶ್ ವೈದ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Please follow and like us:
error