fbpx

ಲೈಂಗಿಕ ದೌರ್ಜನ್ಯ ಪ್ರತಿರೋಧಿಸುವ ಮನೋಭಾವ ಬೆಳೆಸಿಕೊಳ್ಳಿ-ವಾಣಿ ಪೆರಿಯೋಡಿ

ಕೊಪ್ಪಳ : ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಮರ್ಯಾದೆಗಂಜಿ ಎಷ್ಟೋ ಜನ ಇದನ್ನು ಅನಿವಾರ್ಯ ಎನ್ನುವಂತೆ ಸಹಿಸಿಕೊಳ್ಳುತ್ತಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದವರೇ ಅಪರಾಧಿಗಳು ಎನ್ನುವಂತೆ ಸಮಾಜವೂ ಬಿಂಬಿಸುತ್ತೆ. ದೌರ್ಜನ್ಯ ಮಾಡಿದವರ ವಿರುದ್ದ ಮಾತನಾಡುವ ಬದಲಿಗೆ ಪೀಡಿತ, ಕಿರುಕುಳಕ್ಕೆ ಒಳಗಾದವರನ್ನೇ ಸಮಾಜ ಹೆದರಿಸಿ ಮರ್ಯಾದೆಯ ಹೆಸರಿನಲ್ಲಿ ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತೆ. ಇಂತಹ ದೌರ್ಜನ್ಯದ ವಿರುದ್ದ ಪ್ರತಿಭಟಿಸುವ ಧ್ವನಿ ಎತ್ತುವ ಕೆಲಸವಾಗಬೇಕಿದೆ. ಅಂತಹ ಮನೋಭಾವನೆಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಹೋರಾಟಗಾರ್ತಿ ವಾಣಿ ಪೆರಿಯೋಡಿ ಹೇಳಿದರು. ಅವರು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಜೀವಯಾನ ಬಳಗ ಕೊಪ್ಪಳವತಿಯಿಂದ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವಿನ ಪಯಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದೌರ್ಜನ್ಯಕ್ಕೊಳಗಾದವರು ತಮ್ಮ ಆಪ್ತರೊಂದಿ, ಗೆಳೆಯ,ಗೆಳತಿಯರೊಂದಿಗಾದರೂ ಇದರ ಬಗ್ಗೆ ಹೇಳಿಕೊಳ್ಳಬೇಕು. ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು ಆಗಲಾದರೂ ಅವರ ವಿರುದ್ದ ಧ್ವನಿ ಎತ್ತುವ ಮನಸ್ಥಿತಿ ಬೆಳೆಯುತ್ತೆ. ಕೇವಲ ಕಾನೂನಿನ ಮೂಲಕ ಮಾತ್ರವಲ್ಲ ಅದರ ವಿರುದ್ದ ಸರಳವಾದ ರೀತಿಯಲ್ಲೂ ಪ್ರತಿಭಟನೆ ನಡೆಸಬೇಕು ಹೀಗಾದಾಗ ಮಾತ್ರ ಅವರಿಗೆ ಪಾಠ ಕಲಿಸಬಹುದು. ಸಮಾಜದ ಮನಸ್ಥಿತಿ ಬದಲಾಯಿಸಬಹುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಅರಿವಿನ ಪಯಣ ಪುಸ್ತಕ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಮೂಡಿಸುವ “ನೀಲಿ ರಿಬ್ಬನ್” ಏಕವ್ಯಕ್ತಿ ನಾಟಕ ಪ್ರದರ್ಶನ ಮಾಡಲಾಯಿತು.
18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ಕುರಿತು ಅರಿವು ನೀಡಲಾಯಿತು. ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು.ಕಾರ್ಯಕ್ರಮದಲ್ಲಿ ಜ್ಯೋತಿ ಗೊಂಡಬಾಳ, ಅಶ್ವಿನಿ ಆರೇರ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸದಾಶಿವ ಪಾಟೀಲ್ ವಹಿಸಿಕೊಂಡಿದ್ದರು. ವಿಸ್ತಾರ್ ಸಂಸ್ಥೆಯ ಆಶಾ ವೇದಿಕೆಯ ಮೇಲಿದ್ದರು. ಸರೋಜಾ ಬಾಕಳೆ ಸ್ವಾಗತ ಮತ್ತು ನಿರೂಪಣೆ ಮಾಡಿದರು. ಕೆವಿಎಸ್ ತಂಡದವರು ಮಹಿಳಾ ಜಾಗೃತಿಯ ಗೀತೆಗಳನ್ನು ಹಾಡುವ ಮೂಲಕ ಎಲ್ಲರಲ್ಲಿ ಸ್ಪೂರ್ತಿ ತುಂಬಿದರು. ವಂದನಾರ್ಪಣೆಯನ್ನು ಜೀವಯಾನ ಬಳಗದ ಎಚ್.ವಿ.ರಾಜಾಬಕ್ಷಿ ಮಾಡಿದರು.

Please follow and like us:
error
error: Content is protected !!