ಲಿಂಗೈಕ್ಯ ಸಿದ್ದಗಂಗಾ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ನುಡಿನಮನ ಸಲ್ಲಿಸಿಯೇ ಜಾತ್ರೆಗೆ ಚಾಲನೆ

ಕೊಪ್ಪಳ: ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದರಿಂದ ನಾಡೇ ಅನಾಥಪ್ರಜ್ಞೆಯಿಂದ ಬಳಲುವಂತೆ ಆಗಿದೆ. ಅವರು ಮತ್ತೊಮ್ಮೆ ಹುಟ್ಟಿ ಬರಲಿಯೆಂದು ಇಡೀ ಜಗತ್ತೆ ಕಾಯುತ್ತಿದೆ. ಅವರ ಬರುವಿಕೆಗಾಗಿ ದೇವರನ್ನು ಪ್ರಾರ್ಥಿಸುತ್ತಾ ನುಡಿ ನಮನ ಸಲ್ಲಿಸಿದ ಬಳಿಕವೇ ಜ. ೨೨ ರಂದು ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ನೆರದ ಲಕ್ಷಾಂತರ ಭಕ್ತರೆಲ್ಲರೂ ಸೇರಿ ಒಂದು ನಿಮಿಷ ಮೌನಾಚರಣೆ ಅರ್ಪಿಸಿ ಭಗವಂತನಲ್ಲಿ ಪ್ರಾರ್ಥಿಸಿದ ಬಳಿಕವೇ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ರಥೋತ್ಸವದ ಬಳಿಕ ನಡೆಯುವ ಅನುಭಾವಿಗಳ ಅಮೃತ ಚಿಂತನಾಗೋಷ್ಠಿ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಶಿವಕುಮಾರಸ್ವಾಮಿಗಳಿಗೆ ನುಡಿನಮನ ಸಲ್ಲಿಸಿದ ನಂತರವೇ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಯುತ್ತವೆ.

ಇದಲ್ಲದೆ ಕೈಲಾಸಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳ ಪೈಕಿ ಮನರಂಜನೆಯ ಕಾರ್ಯಕ್ರಮಗಳಾದ ಹಾಸ್ಯ ಕಾರ್ಯಕ್ರಮ ಮತ್ತು ಜಾದು ಪ್ರದರ್ಶನವನ್ನು ರದ್ಧು ಪಡಿಸಲಾಗಿದೆ. ಗುರುಗಳ ಅಗಲಿಕೆಯ ಅನುತಾಪವನ್ನು ಕೇಳಿ ಗುರುಗಳಾಗಿದ್ದ ಗವಿಮಠ ಪೀಠದ ೧೦ ನೇಯ ಶ್ರೀ ಚನ್ನಬಸವ ಮಹಾಸ್ವಾಮಿಗಳಿಗಾಗಿಯೇ ಸಿದ್ಧಪಡಿಸಿದ್ದ ಸಮಾಧಿಯಲ್ಲಿಯೇ ತಾವೇ ಅನುಷ್ಟಾನ ಗೈಯುತ್ತ ಗವಿಮಠದ ೧೧ ನೇಯ ಪೀಠಾಧಿಪತಿಗಳಾಗಿದ್ದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾದರು. ಹೀಗೆ ಸಜೀವ ಸಮಾಧಿ ಹೊಂದಿದ ಪೂಜ್ಯರನ್ನು ಗುರುಗಳಾದ ಚನ್ನಬಸವ ಮಹಾಸ್ವಾಮಿಗಳೇ ಮುಂದಿನ ಕಾರ್ಯಕ್ರಮವನ್ನು ನೆರವೇರಿಸಿದರು.

ಅಂದಿನಿಂದ ಇಂದಿನವರೆಗೂ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಡೆಯುತ್ತಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವವೂ ಶ್ರೀಗಳು ಲಿಂಗೈಕ್ಯವಾದ ಪುಣ್ಯಾರಾಧನೆ ನಿಮಿತ್ತವೇ ನಡೆಯುತ್ತಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾದ ದಿನವೇ ಸಿದ್ದಗಂಗಾ ಡಾ. ಶ್ರೀ ಶಿವಕುಮಾರಮಹಾಸ್ವಾಮಿಗಳು ಈಗ ಲಿಂಗೈಕ್ಯರಾಗಿದ್ದಾರೆ. ಹೀಗಾಗಿ ರಥೋತ್ಸವ ಮತ್ತು ಜಾತ್ರೆಯ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ನಡೆಯುತ್ತದೆ ಎಂದು ಭಕ್ತಾಧಿಗಳಿಗೆ ಗವಿಮಠದ ಪ್ರಕಟಣೆ ತಿಳಿಸಿದೆ.

Please follow and like us:
error