ಲಿಂಗಾಯತ ಧರ್ಮದ ಚರ್ಚೆಗೆ ಪ್ರತ್ಯೇಕ ವೇದಿಕೆ ನಿರ್ಮಿಸಿ: ಸಂಗಣ್ಣ ಕರಡಿ

ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ | ಗಮನ ಸೆಳೆದ 1,108 ಕುಂಭ ಮೆರವಣಿಗೆ ಕೊಪ್ಪಳ: ಲಿಂಗಾಯತ ಧರ್ಮ ಬೇಡಿಕೆ ಕುರಿತು ಆಡಳಿತಾರೂಢ ಪಕ್ಷದ ಮಂತ್ರಿಗಳು ಪ್ರತ್ಯೇಕ ವೇದಿಕೆಯಲ್ಲಿ ಚರ್ಚಿಸಲಿ. ಈ ವೇದಿಕೆ ಅದಕ್ಕೆ ಅಪ್ರಸ್ತುತ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ಕಿತ್ತೂರ ಚನ್ನಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ವೇದಿಕೆ ದುರ್ಬಳಕೆ ಮಾಡಿಕೊಂಡ ಸಚಿವ ಬಸವರಾಜ ರಾಯರಡ್ಡಿಯವರ ಕ್ರಮವನ್ನು ನವಿರಾಗಿಯೇ ಚುಚ್ಚಿದರು. ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಲಿಂಗಾಯತ ಧರ್ಮದ ಕುರಿತು ಮಾತನಾಡಿದ್ದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಸಂಗಣ್ಣ ಕರಡಿ, ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆ. ರಾಜ್ಯ ಸರ್ಕಾರ ಚನ್ನಮ್ಮನ ಹೆಸರಿನಲ್ಲಿ ಸಂಶೋಧನಾ ಪೀಠ ಮತ್ತು ಅಧ್ಯಯನ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಿರುವುದು ಸ್ವಾಗತಾರ್ಹ. ಇಂತಹ ದಿಟ್ಟ ಮಹಿಳೆಯ ದಿನಾಚರಣೆ ಆಚರಿಸುವುದರಿಂದ ಭವಿಷ್ಯದ ಪೀಳಿಗೆಗೆ ಆಕೆಯ ತ್ಯಾಗ ಮತ್ತು ಬಲಿದಾನ ಪ್ರೇರಣೆ ನೀಡುತ್ತದೆ. ಹೀಗಾಗಿ, ವೇದಿಕೆಯಲ್ಲಿ ಬೇರೆ ವಿಷಯಗಳು ಚರ್ಚೆಯಾಗುವುದು ಬೇಡ. ಧರ್ಮ ನಿರ್ಣಯ ಕುರಿತು ರಾಜ್ಯ ಸರ್ಕಾರದ ಸಚಿವರು ಪ್ರತ್ಯೇಕ ವೇದಿಕೆ ನಿರ್ಮಿಸಿ ಚರ್ಚಿಸಲಿ ಎಂದು ಹೇಳಿದರು. ಧರ್ಮ, ಮಠಗಳಿಗಿಂತ ಹೆಚ್ಚಾಗಿ ಸಮುದಾಯದ ಅಭಿವೃದ್ಧಿಗೆ ಬೇಕಾಗಿರುವುದು ಶಿಕ್ಷಣ. ಶಿಕ್ಷಣದಿಂದ ಮಾತ್ರ ನಮ್ಮ ಸಮುದಾಯ, ನಮ್ಮ ನಾಡು, ನಮ್ಮ ದೇಶ ಉದ್ಧಾರವಾಗುತ್ತದೆ. ಹಾಗಾಗಿ ಮೊದಲು ನಾವು ಶಿಕ್ಷಣವಂತರಾಗಬೇಕು. ನಮ್ಮೆಲ್ಲ ಸಮಸ್ಯೆ ಗೊಂದಲಗಳಿಗೆ ಶಿಕ್ಷಣದ ಕೊರತೆಯೇ ಕಾರಣವಾಗಿದೆ ಎಂದು ಸಂಸದರು ಹೇಳಿದರು.

Please follow and like us:
error