ರೋಟಾ ವೈರಸ್ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಅಗತ್ಯ : ಡಾ. ಲಿಂಗರಾಜ್

ಕೊಪ್ಪಳ ಜು. 2: ರೋಟಾ ವೈರಸ್ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಲಿಂಗರಾಜ್ ಅವರು ಹೇಳಿದರು.  
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ವತಿಯಿಂದ ರೋಟಾ ವೈರಸ್ ಲಸಿಕೆಯ ಪರಿಚಯ ಕುರಿತು ನಗರದ ಹಳೇಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರದಂದು (ಜುಲೈ.26) ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಮಾಧ್ಯಮ ಮಿತ್ರರ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  
ರೋಟಾ ವೈರಸ್ ಲಸಿಕೆ ನವಜಾತ ಮಕ್ಕಳ ಆರೋಗ್ಯ ರಕ್ಷಣೆ ಮಾಡುವಂತಹ ಲಸಿಕೆಯಾಗಿದೆ.  ಈ ಲಸಿಕೆಯನ್ನು ಮಗು ಹುಟ್ಟಿದ ಆರು ವಾರಗಳಿಂದ 14ನೇ ವಾರದವರೆಗೂ ಮಗುವಿಗೆ ಹಾಕಬೇಕು.  ಇದರಿಂದ ಮಗುವಿನ ಬೆಳವಣಿಗೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ.  ರೋಟಾ ವೈರಸ್‌ನಿಂದಾಗುವ ಅತಿಸಾರ ಭೇಧಿಯ ವಿರುದ್ಧ ಮಕ್ಕಳ ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರವು ರೋಟಾ ವೈರಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಈ ನಿಟ್ಟಿನಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ.  ಸದ್ಯ ರೋಟಾ ವೈರಸ್ ಲಸಿಕೆ ಭಾರತದ ಹನ್ನೊಂದು ರಾಜ್ಯದಲ್ಲಿ ಜಾರಿಯಲ್ಲಿದೆ.  ರೋಟಾ ವೈರಸ್ ಲಸಿಕೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಆರೋಗ್ಯ ಮೇಲ್ವಿಚಾರಕರಿಗೆ ಈ ಕುರಿತು ತರಬೇತಿಗಳನ್ನು ನೀಡಲಾಗುತ್ತಿದೆ.  ಪ್ರಪಂಚದಾದ್ಯಂತ 94 ದೇಶದಲ್ಲಿ  ರೋಟಾ ವೈರಸ್ ಲಸಿಕೆ ಜಾರಿಯಲ್ಲಿದೆ.  ಈ ಲಸಿಕೆ ನಮ್ಮ ದೇಶದಲ್ಲಿಯೂ ಜಾರಿಯಲ್ಲಿದ್ದು, ಆರಂಭದಲ್ಲಿ ವಿದೇಶಗಳು ತಯಾರಿಸಿದ ರೋಟಾ ವೈರಸ್ ಲಸಿಕೆಯನ್ನು ತೆರೆಸಿಕೊಳ್ಳಲಾಗುತ್ತಿತ್ತು.  ಈಗ ನಮ್ಮ ರಾಷ್ಟçದಲ್ಲಿಯೇ ಈ ಲಸಿಕೆಯನ್ನು ತಯಾರಿಸಲಾಗುತ್ತಿದೆ.  ರೋಟಾ ವೈರಸ್‌ನಿಂದಾಗಿ ಪ್ರತಿ ವರ್ಷ 79 ಸಾವಿರ ಮಕ್ಕಳು ಸಾವಿಗಿಡಾಗುತ್ತಾರೆ.  ರೋಟಾ ವೈರಸ್ ಲಸಿಕೆ ನೀಡುವುದರಿಂದ ಮಕ್ಕಳ ಸಾವಿನ ಪ್ರಮಾಣ ಕುಂಠಿತಗೊಳ್ಳುವುದು.  ರೋಟಾ ವೈರಸ್ ಲಸಿಕೆ ಹಾಕುವುದರಿಂದ ಮಗುವಿಗೆ ಮುಂದೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.  ಒಂದೂವರೇ ತಿಂಗಳ ಮಗುವಿಗೆ 2.5 ಎಂಎಲ್ ಡೋಸ್ ಹಾಕಬೇಕು.  ಒಂದು ಮಗುವಿಗೆ ಉಪಯೋಗ ಮಾಡಿದ ಸಿರಂಜ್ ಮತ್ತೆ ಬೇರೆ ಮಗುವಿಗೆ ಉಪಯೋಗ ಮಾಡುವುದಿಲ್ಲ.  ಹೆಚ್.ಐ.ವಿ ಮತ್ತು ಅಪೌಷ್ಠಿಕ ದಿಂದ ಬಳಲುತ್ತಿರುವ ಮಗುವಿಗೂ ಕೂಡ ಈ ರೋಟಾ ಲಸಿಕೆಯನ್ನು ಹಾಕಬಹುದು.  ಇದರಿಂದ ಆ ಮಗು ಆರೋಗ್ಯವಂತವಾಗುತ್ತದೆ.   ಆದ್ದರಿಂದ ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಲಿಂಗರಾಜ್ ಅವರು ಹೇಳಿದರು.  
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಮಹೇಶ ಎಂ.ಜಿ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ. ಅವಿನಾಶ ಸೇರಿದಂತೆ ಮಾಧ್ಯಮ ಮಿತ್ರರರು ಈ ತರಬೇತಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.  

Please follow and like us:
error