ರೈಲುಗಳ ಹೆಚ್ಚಳದಿಂದ ಜನ ಸಾಮನ್ಯರಿಗೆ ಮತ್ತು ಸರಕು ಸಾಗಣೆಗೆ ತುಂಬಾ ಅನುಕೂಲ : ಸಂಗಣ್ಣ ಕರಡಿ

ಕೊಪ್ಪಳ ಜ. 25 ೆ): ನಮ್ಮ ಜಿಲ್ಲೆಯಲ್ಲಿ ರೈಲುಗಳ ಹೆಚ್ಚಳದಿಂದ ಜನಸಾಮಾನ್ಯರಿಗೂ ಮತ್ತು ಸರಕು ಸಾಗಣೆಗೆ ಹಾಗೂ ಎಲ್ಲಾ ರೀತಿಯಿಂದಲೂ ತುಂಬಾ ಅನುಕೂಲವಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
ನೈರುತ್ಯ ರೇಲ್ವೆ ವತಿಯಿಂದ ಕುಷ್ಟಗಿ ರೈಲು ನಿಲ್ದಾಣದಲ್ಲಿ ಶುಕ್ರವಾರದಂದು ಆಯೋಜಿಸಲಾದ ಕೊಪ್ಪಳ ಜಿಲ್ಲೆಯ ಕುಷ್ಟಗಿ ರೈಲು ನಿಲ್ದಾಣದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗದಗ-ವಾಡಿ ನೂತನ ರೈಲ್ವೆ ಯೋಜನೆಯೂ ಸುಮಾರು ರೂ.2841 ಕೋಟಿಯದ್ದಾಗಿದ್ದು, 257 ಕಿಮೀ ವಿಸ್ತೀರ್ಣ ಹೊಂದಿದೆ. ಈ ಯೋಜನೆಗೆ ರಾಜ್ಯ ಸರಕಾರ 50% ಕೇಂದ್ರ ಸರಕಾರ 50% ರಷ್ಟು ವೆಚ್ಚವನ್ನು ಹಂಚಿಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ 3764 ಎಕರೆ ಜಮೀನು ಬೇಕಾಗುತ್ತದೆ, ಈಗಾಗಲೇ 1364 ಎಕರೆ ಜಮೀನನ್ನು ಸರಕಾರ ಸ್ವಾಧಿನಪಡಿಸಿಕೊಂಡಿದೆ, ತಳಕಲ್ ದಿಂದ ಕುಷ್ಟಗಿಗೆ ಸುಮಾರು 2.2 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ ಈ ನಿಲ್ದಾಣದಲ್ಲಿ ಕಾನ್ ಕೋರ್ಸ್, ಲಿಪ್ಟ್, ಮೆಟ್ಟಿಲು, ನೀರಿನ ನಲ್ಲಿಗಳು, ನೀರಿನ ಡಿಸ್ಪೆನ್ಸರ್ ಗಳು, ಬೆಂಚ್ ಗಳು, ಮಹಿಳೆಯರ ಮತ್ತು ಪುರುಷರ ನಿರೀಕ್ಷಣಾ ಕೊಠಡಿಗಳು, ದಿವ್ಯಾಂಗ ಜನರಿಗಾಗಿ ಪ್ರತ್ಯೇಕ ಶೌಚಾಲಯ, ಪಾವತಿಸಿ ಉಪಯೋಗಿಸುವ ಶೌಚಾಲಯ, ಉಪಹಾರ ಗೃಹ, ಕಾರ್ ಮತ್ತು ದ್ವಿಚಕ್ರ ವಾಹನ ಪಾರ್ಕಿಂಗ್ ನೊಂದಿಗೆ ಸರ್ಕ್ಯೂಲೇಟಿಂಗ್ ಪ್ರದೇಶ, 2 ಪ್ಲಾರ್ಟ್ ಪಾರ್ಮ್ ಗಳಿದ್ದು ಅವುಗಳನ್ನು ಸಂಪರ್ಕಿಸುವ ಸಭ್ ವೇಯನ್ನು ಸಹ ನಿರ್ಮಿಸಲಾಗುವುದು. ಜೊತೆಗೆ ಹಲವಾರು ತರದ ಸೌಲಭ್ಯಗಳು ಇರಲಿವೆ ಎಂದು ಸಂಸದ ಸಂಗಣ್ಣ ಕರಡಿ ಅವರು ಮಾಹಿತಿ ವಿವರಿಸಿದರು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಮಾತನಾಡಿ, ವರ್ಷದ ಹಿಂದೆ ತಳಕಲ್‍ನಲ್ಲಿ ಗದಗ-ವಾಡಿ ರೈಲ್ವೆ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಸರ್ಕಾರದ ಕಾರ್ಯವನ್ನು ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳು ಸೇರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸರಕಾರಗಳು ಯಾವುದೇ ಕೆಲಸ ಮಾಡಿದರೂ ಅದು ಜನಸಾಮಾನ್ಯರ ಹಿತಕ್ಕಾಗಿ ಮಾಡುತ್ತಿರುತ್ತವೆ. ಹಾಗಾಗಿ ರೈತರು ತ್ಯಾಗಮನೋಭಾವನೆಯಿಂದ ಜಮೀನನ್ನು ಬಿಟ್ಟು ಕೊಡಲು ಮುಂದಾಗಬೇಕು. ಸರಕಾರ ನಿಗದಿ ಪಡಿಸಿದ ಹಣವನ್ನು ರೈತರಿಗೆ ಬೇಗನೇ ತಲುಪಿಸಲು ಆಗದಿದ್ದರೆ ಮುಂದಿನ ದಿನಮಾನಗಳಲ್ಲಿ ನಿಗದಿಪಡಿಸಿದ ಹಣಕ್ಕೆ ಬಡ್ಡಿಯನ್ನು ಹಾಕಿ ಹಣ ನೀಡಲಾಗುವುದು. ರೈತರು ಯಾವುದೇ ರೀತಿಯ ಭಯ ಪಡಬಾರದು. ಯೋಜನೆಯನ್ನು ಐದು ಹಂತಗಳಲ್ಲಿ ವಿಂಗಡಿಸಲಾಗಿದ್ದು, ತಳಕಲ್ ದಿಂದ ಕುಷ್ಟಗಿ ನಡುವಿನ ಮೊದಲ ಹಂತ ಮತ್ತು ಶಹಾಪುರದಿಂದ ವಾಡಿ ನಡುವಿವ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೆ ರಾಜ್ಯ ಸರ್ಕಾರ ಭೂಮಿಯನ್ನು ಒದಗಿಸಿರುವ ಕಡೆಗಳಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದರು.
ಜಿ.ಪಂ.ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ ಅವರು ಮಾತನಾಡಿ ಇಂತಹ ರೈಲ್ವೆ ಯೋಜನೆಗಳು ನಮ್ಮ ಜಿಲ್ಲೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ, ಇನ್ನೂ ಹೆಚ್ಚಿನ ರೀತಿಯಲ್ಲಿ ನಮ್ಮ ಜಿಲ್ಲೆ ಅಭಿವೃದ್ಧಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಹನಮೇಶ, ಮಹೇಶ ಹಾಗೂ ಹನಮಂತಗೌಡ, ಕುಷ್ಟಗಿ ತಾ.ಪಂ. ಅಧ್ಯಕ್ಷೆ ಮಹಾಂತಮ್ಮ, ನೈರುತ್ಯ ರೈಲ್ವೆ ಇಲಾಖೆಯ ಮಹಾಪ್ರಬಂಧಕ ಅಜೆಯಕುಮಾರ ಸಿಂಗ್, ವಿಭಾಗಿಯ ವ್ಯವಸ್ಥಾಪಕ ರಾಜೇಶ್ ಮೋಹನ್, ಮುಖ್ಯ ಎಂಜಿನೀಯರ್ ರಾಮಗೋಪಾಲ್ ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು

Please follow and like us:
error