ರೈತರ ಸ್ವಾಭಿಮಾನಿ ಬದುಕಿಗೆ ನೀರಾವರಿ ಅತ್ಯವಶ್ಯ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೧೭ ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ನೀರಲಗಿ, ಮತ್ತೂರು, ಹನುಕುಂಟಿ, ತಿಗರಿ, ಬೆಟಗೇರಿ, ಮೋರನಹಾಳ, ಭೈರಾಪುರ, ಬೋಚನಹಳ್ಳಿ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೨ ಕೋಟಿ ೬೦ ಲಕ್ಷದ ರಸ್ತೆ ಕಾಮಗಾರಿ, ಚರಂಡಿ, ಸಮುದಾಯ ಭವನ ನಿರ್ಮಾಣ ಕಾಮಗಾರಿ ಹಾಗು ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ೨೦೧೮-೧೯ರಲ್ಲಿ ಕಲ್ಯಾಣ ಕರ್ನಾಟಕ ಯೋಜನೆಯಡಿಯಲ್ಲಿ ೧೫೦ ಶಾಲಾ ಕೊಠಡಿಗಳ ನಿರ್ಮಾಣ ಮಾಡಿದ್ದು ಗ್ರಾಮಿಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಾಗಿದೆ. ಪೂಜ್ಯ ಅಭಿನವ ಶ್ರೀಗಳ ನೇತೃತ್ವದಲ್ಲಿ ೨೫ ಕಿ.ಮೀ. ಹಿರೇಹಳ್ಳ ಸ್ವಚ್ಛ ಮಾಡಿ ೯ ಬ್ರಿಡ್ಜ-ಕಂ-ಬ್ಯಾರೇಜ್ ಕಾಮಗಾರಿಗಳಿಗೆ ಈಗಾಗಲೆ ರೂ.೩೬ ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ರೂ.೪೩ ಕೋಟಿಯ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡರೆ ೨೮ ಹಳ್ಳಿಗಳಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಹೆಚ್ಚು ಅನುಕೂಲವಾಗುತ್ತದೆ. ತುಂಗಾಭದ್ರ ನದಿ ತೀರದ ೩೩ ಹಳ್ಳಿಗಳಿಗೂ ಏತನೀರಾವರಿ ಯೋಜನೆ ಸೌಲಭ್ಯವನ್ನು ಕಲ್ಪಿಸಲಾಗುವುದು. ಕೊಪ್ಪಳ ನಗರದಲ್ಲಿ ರೂ.೧೧೬ ಕೋಟಿಯ ಒಂಬತ್ತು ಅಂತಸ್ತಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಕಟ್ಟಢ ಕಾಮಗಾರಿಯು ಭರದಿಂದ ಸಾಗಿದ್ದು ಇದರಲ್ಲಿ ಎಂಟು ಮಲ್ಟಿಸ್ಪೆಷಲ್ ಆಪರೇಷನ್ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಇದರಿಂದ ಜನರಿಗೆ ಬೇರೆ ನಗರಗಳಿಗೆ ಹೋಗುವ ತೊಂದರೆ ತಪ್ಪುತ್ತದೆ. ನಗರದಲ್ಲೇ ಬ್ಲಡ್ ಬ್ಯಾಂಕಿನ ಸೌಲಭ್ಯ ಇರುವುದರಿಂದ ಕ್ಷೇತ್ರದ ಜನತೆಗೆ ಹೊರ ಊರಿಗೆ ಹೋಗುವ ತೊಂದರೆ ಸಂಪೂರ್ಣವಾಗಿ ತಪ್ಪಿ ಇಲ್ಲೇ ಆರೋಗ್ಯ ಸೌಲಭ್ಯಗಳು ಲಭಿಸುವಂತಾಗಿದೆ. ಇದೇ ಸಂದರ್ಭದಲ್ಲಿ ಹನುಕುಂಟಿಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಗೆ ಒಂದು ಸ್ಮಾರ್ಟ್ ಕ್ಲಾಸ್ ಹಾಗೂ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಶ್ವಾಸನೆ ನೀಡಿದರು. ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಜನರು ಗುಣಮಟ್ಟದ ಕಾಮಗಾರಿಗೆ ಕೈ ಜೋಡಿಸಬೇಕೆಂದು ಗ್ರಾಮಸ್ಥರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ.ಅಧ್ಯಕ್ಷ ಲಕ್ಷ್ಮವ್ವ, ಎ.ಪಿ.ಎಂ.ಸಿ. ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಎ.ಪಿ.ಎಂ.ಸಿ. ಸದಸ್ಯ ನಾಗರಾಜ ಚಳ್ಳುಳ್ಳಿ, ತಾ.ಪಂ.ಸದಸ್ಯ ಸುನಿತಾ ಚಿಂಚಲಿ, ಮುಖಂಡರುಗಳಾದ ಭರಮಪ್ಪ ನಗರ, ಪ್ರಸನ್ನ ಗಡಾದ, ಕೃಷ್ಣಾರಡ್ಡಿ ಗಲಿಬಿ, ಅಡಿವೆಪ್ಪ ರಾಠಿ, ಕೇಶವರಡ್ಡಿ ಮಾಡಿನೂರ, ಭರಮಪ್ಪ ಕಂಬಳಿ, ಗಾಳೆಪ್ಪ ಪೂಜಾರ, ವಿರುಪಾಕ್ಷಪ್ಪ ನವೋದಯ, ಹನುಮೇಶ ಹೊಸಳ್ಳಿ, ರಾಜಶೇಖರ ಕಡ್ಲಿ, ಭೀಮಶೆಪ್ಪ ಬೋಚನಹಳ್ಳಿ, ನಗರಸಭಾ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ತಾಲೂಕು ದಂಡಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕರು, ಲೋಕೋಪಯೋಗಿ ಅಭಿಯಂತರರು, ಪ್ರಾಚಾರ್ಯ ಮಂಜುನಾಥ ಬೇಳೂರ, ಶಿಕ್ಷಕರಾದ ಸಂಗನಗೌಡ ಪಾಟೀಲ್, ಬಸವರಾಜ ಹನಸಿ ಇನ್ನೂ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error