ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸಲಾಗುವುದು : ಆರ್.ಶಂಕರ್

ಕೊಪ್ಪಳ, .: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಒಂದು ಜಿಲ್ಲೆ ಒಂದು ಬೆಳೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರಾದ ಆರ್.ಶಂಕರ್ ಅವರು ಹೇಳಿದರು.
ಸೋಮವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ(ಜಿ.ಪಂ.), ಜಿಲ್ಲಾ ಕೈಗಾರಿಕೆ ಇಲಾಖೆ, ಕೊಪ್ಪಳ ಹಾಗೂ ಕೆಪೆಕ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯಡಿ ಪ್ರಧಾನಮಂತ್ರಿಗಳ ಕಿರು ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಒಂದು ಜಿಲ್ಲೆ ಒಂದು ಬೆಳೆ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಬೆಳೆ-ಸೀಬೆ

(ಪೇರಲ) ಕುರಿತು ಹಮ್ಮಿಕೊಂಡಿದ್ದ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆಯ ವತಿಯಿಂದ ಕೊಪ್ಪಳ ಜಿಲ್ಲೆಗೆ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಪೇರಲ ಬೆಳೆ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಪೇರಲ ಬೆಳೆಯುವ ಕ್ಷೇತ್ರವನ್ನು ಆಧರಿಸಿ ಬೆಳೆಯನ್ನು ನಿರ್ಧರಿಸಲಾಗಿದೆ. ಹಾಗೆಯೇ ರೈತರು ಬೆಳೆದ ಬೆಳೆಗೆ ಉತ್ತಮ ವೇದಿಕೆ, ಮಾರುಕಟ್ಟೆ

ಒದಗಿಸುವುದು ಇಲಾಖೆಯ ಉದ್ದೇಶವಾಗಿದೆ. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಆಯ್ಕೆಯಾದ ಬೆಳೆಗೆ ಸಾಮಾನ್ಯ ಮೂಲಭೂತ ಸೌಕರ್ಯ, ಬ್ರಾಂಡಿAಗ್, ಸಂಸ್ಕರಣೆ ಮತ್ತು ರಫ್ತು ಮಾರುಕಟ್ಟೆ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ. ರೈತರು ಈ ತರಬೇತಿ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಆಯ್ಕೆಯಾದ ಬೆಳೆ ಮಾತ್ರವಲ್ಲದೆ, ಕ್ರಮಬದ್ಧವಾಗಿ ಬೆಳೆಯುವ ಇತರೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳನ್ನು ಕೂಡ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು. ಯಾವುದೇ ಬೆಳೆಯನ್ನು ಬೆಳೆಯುವುದರೊಂದಿಗೆ ಅದರ ಮೌಲ್ಯವರ್ಧನೆಗೂ ಯೋಜನೆ ರೂಪಿಸಬೇಕು. ಹೊಸ ತಳಿ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ರೈತರು ನೇರ ಮಾರುಕಟ್ಟೆಯ ಲಾಭವನ್ನು ಪಡೆಯಬೇಕು ಎಂದು ಅವರು ಹೇಳಿದರು.
ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ಸಂಬAಧಿಸಿದ ಮಾಹಿತಿಯನ್ನು ಒದಗಿಸಲು ರಾಜ್ಯದಲ್ಲಿ ಒಟ್ಟು 715 ಕೃಷಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ರೈತರು ತಮಗೆ ಬೇಕಾದ ಬೆಳೆ, ಬ್ಯಾಂಕ್ ಸಹಾಯ, ಸರ್ಕಾರದ ಸೌಲಭ್ಯ, ಸಬ್ಸಿಡಿ ಮುಂತಾದ ವಿಷಯಗಳ ಕುರಿತು ಮಾಹಿತಿ ಪಡೆಯಬಹುದು. ಯಾವುದೇ ರಾಸಾಯನಿಕಗಳನ್ನು ಬಳಸದೇ ಸಾವಯವ ಪದ್ಧತಿ ಮೂಲಕ ಬೆಳೆ ಬೆಳೆಯಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಉತ್ತಮ ಇಳುವರಿಯನ್ನೂ ಪಡೆಯಬಹುದು. ಅಲ್ಲದೇ ಸಾವಯವ ಪದ್ಧತಿ ಮೂಲಕ ರಾಜ್ಯವನ್ನು ವಿಷಮುಕ್ತವನ್ನಾಗಿ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲೆಯ ಬಸಾಪುರ ಕೈಗಾರಿಕಾ ವಲಯದಲ್ಲಿ ಪೇರಲ ಬೆಳೆಯ ಸಂಸ್ಕರಣೆ ಕ್ಲಸ್ಟರ್‌ನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳು ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ಸಿಗುವ ಸಬ್ಸಿಡಿ, ಸೌಲಭ್ಯಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಪಡೆಯಬಹುದು. ಬ್ಯಾಂಕ್ ನಿಂದ ಸಹಾಯಧನ ಪಡೆಯಲು ತೊಂದರೆ ಉಂಟಾದಲ್ಲಿ ಅಥವಾ ಬ್ಯಾಂಕ್ ಅಧಿಕಾರಿಗಳಿಂದ ಸಮಸ್ಯೆಯಾದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿದಲ್ಲಿ ಅಗತ್ಯ ಸಹಾಯ ಮಾಡಲಾಗುವುದು. ರೈತರು ಸರ್ಕಾರ ನೀಡುವ ಸಹಾಯಧನ, ಸಬ್ಸಿಡಿಗಳನ್ನು ಅವಲಂಬಿಸಿ ಕೃಷಿ ಮಾಡುವ ಬದಲು ಸ್ವಹಿತಾಸಕ್ತಿಯಿಂದ ಕೃಷಿಗೆ ಮುಂದಾಗಬೇಕು. ನಮ್ಮ ಆಸಕ್ತಿಯೇ ಅರ್ಧ ಯಶಸ್ಸನ್ನು ತಂದುಕೊಡುತ್ತದೆ. ಉಳಿದಂತೆ ಸೂಕ್ತ ಕ್ರಮಗಳನ್ನು ಅನುಸರಿಸಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಬೆಳೆಯನ್ನು ಸಂಸ್ಕರಿಸುವ, ಉತ್ತಮ ಮಾರುಕಟ್ಟೆ ಒದಗಿಸುವ ತಂತ್ರವೂ ತಿಳಿದಿರಬೇಕು ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಜಿಲ್ಲೆಯ 4 ತಾಲ್ಲೂಕುಗಳಲ್ಲಿ 700 ಹೆಕ್ಟೆರ್ ಪ್ರದೇಶದಲ್ಲಿ ಪೇರಲ ಬೆಳೆಯನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು ಮೂರು ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇತರೆ ಬೆಳೆಗಳಿಗಿಂತ ಪೇರಲ ಬೆಳೆ ಕೃಷಿಯು ಕಡಿಮೆ ವೆಚ್ಚದ್ದಾಗಿದೆ. ಪೇರಲ ಬೆಳೆಗೆ ರೋಗಗಳು ಬಾಧಿಸುವುದು ಕಡಿಮೆ ಹಾಗೂ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ. ಕ್ರಮಾನುಸಾರ ಪೇರಲ ಬೆಳೆದಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು. ಪೇರಲ ಬೆಳೆಯಲ್ಲಿ ಅಲಹಾಬಾದ್ ಸಫೇದ್, ಬನಾರಸಿ, ನಾಸಿಕ್ ಸೀಬೆ, ಲಕ್ನೋ 49 ಅರ್ಕಾಕಿರಣ್ ಪ್ರಮುಖ ತಳಿಗಳಾಗಿವೆ. ಹೆಚ್ಚಿನ ಇಳುವರಿ ಪಡೆದು ರೈತರು ಉದ್ಯಮಿಗಳಾಗಬಹುದು. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ಸೌಲಭ್ಯವಿದೆ. ಮಾತ್ರವಲ್ಲದೆ, ತೋಟಗಾರಿಕೆ ಇಲಾಖೆಯಿಂದ ಪ್ರತಿ ಸೋಮವಾರ ಯೋಜನಾ ವರದಿ ತಯಾರಿಕೆ ತಯಾರಿಸಲು ಸಮಾಲೋಚನೆಯನ್ನು ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ರೈತರೊಂದಿಗೆ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದ ಅವರು, ಸರ್ಕಾರದಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ರೈತರಿಗೆ ಭರವಸೆ ನೀಡಿದರು.
ನಂತರ ಪೇರಲ ಬೆಳೆಗೆ ಸಂಬAಧಿಸಿದAತೆ ಕೊಪ್ಪಳ ಪೇರಲ ಲಾಂಛನವನ್ನು, ಪೇರಲ ಬೆಳೆ ಕುರಿತು ತಾಂತ್ರಿಕ ಕೈಪಿಡಿಯನ್ನು, ಕೊಪ್ಪಳ ಪೇರಲ ಬಾಕ್ಸ್ನ್ನು ಸಚಿವರು ಬಿಡುಗಡೆಗೊಳಿಸಿದರು.

ಕಾರ್ಯಾಗಾರದಲ್ಲಿ ರೈತರಿಗೆ ಕೃಷಿ ವಿಜ್ಞಾನಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಪೇರಲ ಬೆಳೆ ಬೆಳೆಯುವ ಕ್ರಮ, ಬಾಧಿಸುವ ರೋಗಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ನಿರ್ವಹಣಾ ಕ್ರಮಗಳು, ಬೆಳೆ ಬಂದ ನಂತರ ಪೇರಲ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ಕಲ್ಪಿಸುವಿಕೆ ಮುಂತಾದ ವಿಷಯಗಳ ಕುರಿತು ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಶರಣು ಭೀಮಣ್ಣ ತಳ್ಳಿಕೇರಿ, ಜಿಲ್ಲಾ ಪಂಚಾಯತನ ಸದಸ್ಯರಾದ ಅಮರೇಶ ಕರಡಿ, ಕಲಬುರಗಿ ವಿಭಾಗದ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಮಂಜುನಾಥ ನಾರಾಯಣಪುರ, ಜಂಟಿ ಕೃಷಿ ನಿರ್ದೇಶಕರಾದ ಶಿವಕುಮಾರ, ಕೆಪೆಕ್ ಸಂಸ್ಥೆಯ ಉಪ ನಿರ್ದೇಶಕರಾದ ವೆಂಕಟೇಶ ಕೃಷ್ಣ, ಧಾರವಾಡ ಹಾಗೂ ರಾಯಚೂರು ಕೃಷಿ ವಿಶ್ವ ವಿದ್ಯಾಲಯಗಳ ಕೃಷಿ ವಿಜ್ಞಾನಿಗಳು, ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ರೈತರು ಉಪಸ್ಥಿತರಿದ್ದರು.
Please follow and like us:
error