ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ಗಮನ ಸೆಳೆದ ಕೊಪ್ಪಳ ಜಿಲ್ಲೆಯ ಅಧಿಕಾರಿ, ವಿದ್ಯಾರ್ಥಿಗಳು

ಕಡಿಮೆ ವೆಚ್ಚದಲ್ಲಿ ಮೂತ್ರಾಲಯ ತಯಾರಿಕೆ

: ಕೇಂದ್ರ ಸರ್ಕಾರದಿಂದ ನವದೆಹಲಿಯಲ್ಲಿ ನಡೆದ ಸ್ವಚ್ಛತಾ ಆಂದೋಲನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಲಾದ ಕಡಿಮೆ ವೆಚ್ಚದ ಮೂತ್ರಾಲಯ (ಲೊ ಕಾಸ್ಟ್ ಯೂರಿನಲ್) ರಾಷ್ಟ್ರ ಮಟ್ಟದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕೊಪ್ಪಳ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಾದ ಮುಜಾಮಿಲ್ ಹಾಗೂ ಸಂತೋಷ ಭಾಗವಹಿಸಿ ಪ್ರಶಂಸೆ ಪಡೆದುಕೊಂಡರು.
ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರ ಕನಸಿನ ಯೋಜನೆಯಾದ ಕಡಿಮೆ ವೆಚ್ಚದ ಮೂತ್ರಾಲಯ (ಲೊ ಕಾಸ್ಟ್ ಯುರಿನಲ್) ಜಿಲ್ಲೆಯಾದ್ಯಾಂತ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಮರುಬಳಕೆ ಮಾಡಬಹುದಾದ ನೀರಿನ ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಬಳಸಿ ಅತೀ ಕಡಿಮೆ ವೆಚ್ಚದಲ್ಲಿ ಮೂತ್ರಾಲಯಗಳನ್ನು ನಿರ್ಮಾಣ ಮಾಡುವುದೇ ಇದರ ಗುರಿ. ಮೂತ್ರಾಲಯಗಳ ತಯಾರಿಕೆಯಲ್ಲಿ ಒಟ್ಟು 3 ವಿಧಗಳಿದ್ದು, 2 ಫಿಟ್, 4 ಫಿಟ್ ಮತ್ತು 6 ಫಿಟ್‍ಗಳಿರುತ್ತವೆ. ಕೊಪ್ಪಳ ಜಿಲ್ಲೆಯಲ್ಲಿರುವ 1017 ಸರ್ಕಾರಿ ಶಾಲೆಗಳಲ್ಲಿ ಈ ಕಡಿಮೆ ವೆಚ್ಚದ ಮೂತ್ರಾಲಯಗಳನ್ನು ನಿರ್ಮಿಸಿ ಎಲ್ಲಾ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ. ಎರಡು ಸೆಟ್ ಯೂರಿನಲ್‍ಗೆ 3500 ರೂ., ನಾಲ್ಕರ ಸೆಟ್‍ಗೆ 5 ಸಾವಿರ, ಆರು ಯೂರಿನಲ್‍ಗಳ ಸೆಟ್‍ಗೆ 06 ಸಾವಿರ ರೂ. ಮಾತ್ರ ವೆಚ್ಚವಾಗುತ್ತದೆ.
ಪ್ರತಿ ಶಾಲೆಗಳಲ್ಲಿ ಕಡಿಮೆ ವೆಚ್ಚದ ಮೂತ್ರಾಲಯಗಳನ್ನು ಅಳವಡಿಸುವ ಗುರಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳೊಡನೆ ಸಭೆ ನಡೆಸಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಇದನ್ನು ಅಳವಡಿಸಲು ಸೂಚನೆ ನೀಡಲಾಗಿತ್ತು. ನಂತರ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಕ್ರಿಯಾಯೋಜನೆ ಮಾಡಲಾಗಿದೆ. ಅದರಂತೆ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಕೊಪ್ಪಳ ಜಿಲ್ಲೆಯ 1017 ಶಾಲೆಗಳಲ್ಲಿ ಕಡಿಮೆ ವೆಚ್ಚದ ಮಾದರಿಯ ಮೂತ್ರಾಲಯ ಅಳವಡಿಸುವುದರ ಮೂಲಕ ವಿನೂತನ ಪ್ರಯತ್ನ ಮಾಡಿ ಯಶಸ್ವಿಯಾಗಿದೆ.
ಕೊಪ್ಪಳ ಜಿಲ್ಲೆಯ ಶಾಲೆಗಳಲ್ಲಿ ಕಡಿಮೆ ವೆಚ್ಚದ ಈ ಮೂತ್ರಾಲಯ ಮಾದರಿ ಅಳವಡಿಕೆಯನ್ನು ರಾಷ್ಟ್ರ ಮಟ್ಟದ ಸ್ವಚ್ಛತಾ ಆಂದೋಲನಕ್ಕೆ ವಿವರ ಸಲ್ಲಿಸಲಾಗಿತ್ತು. ಇದೊಂದು ವಿಶೇಷ ಸಾಧನೆ ಎಂದು ಗುರುತಿಸಿ ಕೇಂದ್ರ ಸರ್ಕಾರ ನವದೆಹಲಿಯಲ್ಲಿ ನಡೆದ ಸ್ವಚ್ಛತಾ ಆಂದೋಲನದಲ್ಲಿ ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿತ್ತು. ಈ ಕಾರ್ಯಕ್ರಮದ ಮೂಲಕ ಕಡಿಮೆ ವೆಚ್ಚದ ಮೂತ್ರಾಲಯ ಯೋಜನೆಯನ್ನು ಇಡೀ ದೇಶಕ್ಕೆ ಪರಿಚಯಿಸಲಾಗುವಂತೆ ಮಾಡಿದ್ದು ವಿಶೇಷ ಸಂಗತಿ. ಅದರಲ್ಲೂ ದೇಶಾದ್ಯಂತ ಸುಮಾರು 3000 ದಷ್ಟು ಹೊಸ ಯೋಜನಾ ಮಾದರಿಗಳ ನೊಂದಣಿಯಲ್ಲಿ ಕೊನೆಯ 57ರ ಪಟ್ಟಿಯಲ್ಲಿಯೂ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿ ಸ್ಥಾನ ಪಡೆದುಕೊಂಡು ಕರ್ನಾಟಕದ 4 ನೊಂದಣಿಯಲ್ಲಿ ಕೊಪ್ಪಳ ಜಿಲ್ಲೆಯ ನೊಂದಣಿಯು ಒಂದಾಗಿದೆ. ಇಲ್ಲಿಯವರೆಗೂ ನಮ್ಮ ಜಿಲ್ಲೆಯು ಸ್ವಚ್ಛತಾ ಆಂದೋಲನದಲ್ಲಿ ಸೆಮಿಫೈನಲ್‍ವರೆಗೂ ಪೈಪೋಟಿ ನಡೆಸಿರುವುದು ಗಮನಾರ್ಹ.
ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಪ್ರಯುಕ್ತ ನವದೆಹಲಿಗೆ ಕೊಪ್ಪಳ ಜಿಲ್ಲೆಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಹಾಗೂ ಜಿಲ್ಲೆಯ ಇಬ್ಬರು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊಪ್ಪಳ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮನವಾಡಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಮುಜಾಮಿಲ್ ಹಾಗೂ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಬಹದ್ದೂರಬಂಡಿ ಶಾಲೆಯ ವಿದ್ಯಾರ್ಥಿ ಸಂತೋಷ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳ ಸಮ್ಮುಖದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಬಹದ್ದೂರಬಂಡಿ ಶಾಲೆಯ ವಿದ್ಯಾರ್ಥಿ ಸಂತೋಷ ಕಡಿಮೆ ವೆಚ್ಛದಲ್ಲಿ ಮೂತ್ರಾಲಯದ ಕುರಿತು ಮಾತನಾಡಿ, ಕಡಿಮೆ ವೆಚ್ಚದ ಮೂತ್ರಾಲಯ ತಯಾರಿಕೆಯಲ್ಲಿ ನಾವು ಆಸಕ್ತಿಯಿಂದ ಶಿಕ್ಷಕರ ಜೊತೆಗೂಡಿ, ಪೈಪ್ ಜೋಡಿಸುವುದು, ಕ್ಯಾನ್‍ಗೆ ಬಣ್ಣ ಹಾಕುವುದು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆವು. ಹೀಗಾಗಿ ಇದರ ಬಳಕೆಯಲ್ಲಿಯೂ ಆಸಕ್ತಿ ತೋರಿದ್ದೇವೆ, ಅಲ್ಲದೆ ಇವು ಹಾಳಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದೇವೆ. ಕಡಿಮೆ ವೆಚ್ಚದ ಮೂತ್ರಾಲಯವನ್ನು ಶಾಲೆಯಲ್ಲಿ ಅಳವಡಿಸಿ, ಉಪಯೋಗಿಸುತ್ತಿದ್ದೇವೆ. ನಾವೆಲ್ಲರೂ ಈ ಮೂತ್ರಾಲಯಗಳನ್ನು ಬಳಕೆ ಮಾಡುತ್ತಿದ್ದು, ಈ ಮೊದಲು ಶಾಲೆಯ ಆವರಣದಲ್ಲಿ ಇದ್ದಂತಹ ದುರ್ವಾಸನೆ ಈಗ ಇಲ್ಲ ಎಂಬುದಾಗಿ ಹೇಳಿದರು. ವಿದ್ಯಾರ್ಥಿಗಳು ಕನ್ನಡದಲ್ಲಿ ಹೇಳಿದ ಅಂಶಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಇಂಗ್ಲೀಷ್ ಭಾಷೆಗೆ ವೇದಿಕೆಯಲ್ಲಿ ತರ್ಜುಮೆಗೊಳಿಸಿ ವಿವರಿಸಿದರು.
ಒಟ್ಟಾರೆ, ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ಶಾಲೆಗಳಲ್ಲಿ ಅಳವಡಿಸಿರುವ ಕಡಿಮೆ ವೆಚ್ಚದ ಮೂತ್ರಾಲಯ ರಾಷ್ಟ್ರ ಮಟ್ಟದಲ್ಲಿ, ನವದೆಹಲಿಯಲ್ಲಿ ಜರುಗಿದ ಸ್ವಚ್ಛತಾ ಆಂದೋಲನ ಕಾರ್ಯಗಾರದಲ್ಲಿ ಗಮನ ಸೆಳೆದಿದ್ದು, ನಿಜಕ್ಕೂ ವಿಶೇಷ ಎನ್ನುತ್ತಾರೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು.

Please follow and like us:
error