ರಾಷ್ಟ್ರೀಯ ಮತದಾರರ ದಿನಾಚರಣೆ : ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Koppal News  ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
ಜ. ೨೫ ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದಲ್ಲಿ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷರಾದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮಕ್ಷಮದಲ್ಲಿ ಜಿ.ಪಂ. ಸಭಾಂಗಣದಲ್ಲ್ಲಿ ಗುರುವಾರದಂದು ಆಯೋಜಿಸಲಾಗಿತ್ತು.
ಪ್ರೌಢ ಶಾಲಾ ಮಟ್ಟದ ಸ್ಪರ್ಧೆ : ಭಾರತ ನನ್ನ ಕನಸು ಎಂಬ ವಿಷಯದ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ಪ್ರಭಂದ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಇಂತಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡ ಶಾಲಾ ವಿಭಾಗದ ವಿದ್ಯಾರ್ಥಿನಿ ಶ್ರೀದೇವಿ ಹಡಪದ ಪ್ರಥಮ ಮತ್ತು ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೂಪಾ ಮಲ್ಲಪ್ಪ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮಹಾಂತೇಶ ತಂದೆ ಯಂಕಪ್ಪ ಕನಸಾವಿ ಮತ್ತು ಬಸವರಾಜ ಎಸ್. ದೋಟಿಹಾಳ ಎಂಬ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯುನಿವರ್ಸಿಟಿ ಮಟ್ಟದ ಸ್ಪರ್ಧೆ : ರಸಪ್ರಶ್ನೆ ಸ್ಪರ್ಧೆ ಯುನಿವರ್ಸಿಟಿ ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದವರ ವಿದ್ಯಾರ್ಥಿಗಳ ವಿವರ ಇಂತಿದೆ. ದ್ವಿತೀಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಇಮ್ರಾನ್ ಖಾನ್ ಪ್ರಥಮ ಸ್ಥಾನ ಮತ್ತು ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಅಶ್ವಿನಿ ಪರವಣ್ಣನವರ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಗೂ ವೈಧ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿ ಸುಮಾರು ೧೫೦ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.