ರಾಜ್ಯಮಟ್ಟದಲ್ಲಿ ನಡೆಯುವ ಸಾಹಿತ್ಯ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯವರನ್ನು ಆಹ್ವಾನಿಸುವಂತಾಗಲಿ

 

ಕೊಪ್ಪಳ ನ.೧೭: ರಾಜ್ಯಮಟ್ಟದಲ್ಲಿ ಸಾಧಕ ಸಾಹಿತಿಗಳೊಂದಿಗೆ ಬೆಂಗಳೂರಿನಲ್ಲಿ ಸಂವಾದ ನಡೆಸುವಂತೆ ಪ್ರತಿತಿಂಗಳೂ ಜಿಲ್ಲಾಮಟ್ಟದಲ್ಲಿ ನಡೆಸುವದಕ್ಕೆ ಸರಕಾರ ಮನಸ್ಸು ಮಾಡಬೇಕು. ರಾಜ್ಯಮಟ್ಟದಲ್ಲಿ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಿಲ್ಲಾಮಟ್ಟದಲ್ಲಿಯೂ ಸಾಧನೆ ಮಾಡಿದವರನ್ನು ಗುರುತಿಸಿ ಅಹ್ವಾನಿಸುವಂತಾಬೇಕು ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರು ಕರೆನೀಡಿದ್ದಾರೆ.
ಜಿಲ್ಲೆಯ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ಏರ್ಪಡಿಸಿದ್ದ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲರೊಂದಿಗೆ ನಡೆಸಿದ ಸಾಧಕರೊಂದಿಗೆ ಸಂವಾದ ಗೋಷ್ಠಿಯ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡುತ್ತ ತಿಳಿಸಿದರು.
ಗ್ರಾಮೀಣ ಪ್ರದೇಶದಿಂದ ಬಂದಿರುವ ಪ್ರತಿಭೆ ಎಚ್.ಎಸ್.ಪಾಟೀಲರು ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ವಿಜ್ಞಾನ ಶಿಕ್ಷಕರಾಗಿದ್ದ ಪಾಟೀಲರು ಹಿಂದುಳಿದ ಈ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಶ್ರಮಿಸಿದರು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಗಮನಾರ್ಹವಾದುದು. ಕೊಪ್ಪಳ ಜಿಲ್ಲೆಯ ಇತಿಹಾಸ ಕುರಿತು ‘ಗವಿದೀಪ್ತಿ’, ‘ವಿಮೋಚನೆ’, ‘ಕೊಪ್ಪಳ ಜಿಲ್ಲಾದರ್ಶನ’, ‘ಗವಿಮಠದ ಇತಿಹಾಸ’ ಹಾಗೂ ಗವಿಮಠದ ೧೮ ಸ್ವಾಮಿಗಳನ್ನು ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಕೊಪ್ಪಳ ಸಾಹಿತ್ಯ ಸಮ್ಮೇಳನದ ‘ತಿರುಳ್ಗನ್ನಡ’, ಗಂಗಾವತಿ ಸಾಹಿತ್ಯ ಸಮ್ಮೇಳನದ ‘ಕೊಪಣ ಸಿರಿ’ ಸ್ಮರಣ ಸಂಪುಟಗಳನ್ನು ತರುವಲ್ಲಿ ಅವರ ಪಾತ್ರ ಗಮನಾರ್ಹವೆಂದು ವಿಠ್ಠಪ್ಪ ಗೋರಂಟ್ಲಿ ಅಭಿಪ್ರಾಯಪಟ್ಟರು.
ಸಂವಾದಕರಾಗಿ ಭಾಗವಹಿಸಿದ್ದ ಡಾ.ಕೆ.ಬಿ.ಬ್ಯಾಳಿ, ಡಾ.ಸಿ.ಬಿ.ಚಿಲ್ಕರಾಗಿ, ಡಾ.ಮಹಾಂತೇಶ ಮಲ್ಲನಗೌಡ್ರ ಅವರು ಎಚ್.ಎಸ್.ಪಾಟೀಲರು ಸಾಗಿಬಂದ ವಿವಿಧ ಮಜುಲುಗಳ ಕುರಿತು ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಕೇಳುಗರೂ ಸಂವಾದದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ಸಂವಾದ ಗೋಷ್ಠಿಯಲ್ಲಿ ಪಾಟೀಲರು ಕೇಳುಗರ ಎಲ್ಲ ಪ್ರಶ್ನೆಗಳಿಗೂ ಶಾಂತಚಿತ್ತದಿಂದ ಉತ್ತರಿಸಿದರು. ಅತಿಥಿಗಳಾಗಿ ಡಿ.ಎಂ.ಬಡಿಗೇರ, ಎಚ್.ವೈ.ಈಟಿ ಹಾಗೂ ಶಾಂತಾದೇವಿ ಹಿರೇಮಠ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಿರುಳ್ಗನ್ನಡ ಆಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅವರು ಎಚ್.ಎಸ್.ಪಾಟೀಲ ಅವರ ಜೀವನದ ವಿವಿಧ ಘಟನಾವಳಿಗಳನ್ನು, ಅವರು ರೈತಪರ ಹೋರಾಟ, ಹೈ.ಕ. ಹೋರಾಟ, ಸಾಹಿತ್ಯ ಸಮ್ಮೇಳನಗಳ ಸಂಘಟನೆ, ಅನೇಕ ಸಾಹಿತ್ಯ ಕಾರ್ಯಕ್ರಮಗಳ ರೂವಾರಿಗಳಾಗಿದ್ದಾರೆ. ಮೂರು ತಿಂಗಳು ಸಂಚರಿಸಿ ಕಲಾವಿದರು ಹಾಗೂ ಜನರನ್ನು ಕಂಡು ಮಾಹಿತಿ ಸಂಗ್ರಹಿಸಿ ‘ರೆಹಮಾನವ್ವ ಕಲ್ಮನಿ’ ಕುರಿತು ಪುಸ್ತಕ ಬರೆದದ್ದು ಚರಿತ್ರಾರ್ಹ ಸಂಗತಿ ಎಂದರು. ತಿರುಳ್ಗನ್ನಡ ಆಹಿತಿಗಳ ಸಹಕಾರ ಸಂಘದ ಉಪಾಧ್ಯಕ್ಷ ಬಸವರಾಜ ಆಕಳವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನಸೂಯಾ ಜಾಗೀರದಾರ ಪ್ರಾರ್ಥಿಸಿದರು. ಬಿ.ಪಿ.ಮರೇಗೌಡ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ವೈ,ಬಿ.ಜೂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Please follow and like us:
error