You are here
Home > Koppal News > ರಾಜ್ಯದ ಮೊಟ್ಟ ಮೊದಲ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರಕ್ಕೆ 03 ಕೋಟಿ 

ರಾಜ್ಯದ ಮೊಟ್ಟ ಮೊದಲ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರಕ್ಕೆ 03 ಕೋಟಿ 


ಕೊಪ್ಪಳ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 03 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ. ಮಂಜು ಅವರು ಹೇಳಿದರು.

  ಕೊಪ್ಪಳ ತಾಲೂಕಿನ ಮುನಿರಾಬಾದಿನ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ದೇಶಿ ತಳಿಗಳಿಂದ ಗುಣಮಟ್ಟದ ಹಾಲು ಉತ್ಪಾದನೆಯ ಜೊತೆಗೆ ಜನರ ಆರೋಗ್ಯ ಸುಧಾರಣೆ ಸಾಧ್ಯ , ದೇಶಿ ತಳಿ ದನಗಳ ಸಂರಕ್ಷಣೆ ಹಾಗೂ ದೇಶಿ ತಳಿ ದನಗಳ ಉತ್ಪಾದಕತೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಅಮೃತ ಮಹಲ್, ಹಳ್ಳಿಕಾರ್, ದೇವಣಿ, ಖಿಲಾರ್, ಮಲ್ನಾಡ್‍ಗಿಡ್ಡ, ಕೃಷ್ಣಾ ವ್ಯಾಲಿಯಂತಹ ದೇಶಿ ತಳಿಯ ದನಗಳನ್ನು ಹೆಚ್ಚು, ಬಳಕೆಗೆ ತರುವಂತೆ ಮಾಡಲು ಪಶುಸಂಗೋಪನೆ ಇಲಾಖೆ ಉದ್ದೇಶಿಸಿದೆ.  ಇದಕ್ಕಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮುನಿರಾಬಾದಿನಲ್ಲಿ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಕಟ್ಟಡ ಹಾಗೂ ಅಗತ್ಯ ಉಪಕರಣಗಳ ಖರೀದಿಗೆ 03 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.  ಬರುವ 06 ತಿಂಗಳ ಒಳಗಾಗಿ ಈ ಕೇಂದ್ರ ಪ್ರಾರಂಭಗೊಂಡು, ಲೋಕಾರ್ಪಣೆಯಾಗಲಿದೆ.  ದೇಶಿ ಹೋರಿಗಳಿಂದ ವೀರ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಗೆ, ಆಯಾ ಪ್ರದೇಶದ ಭೌಗೋಳಿಕ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ದೇಶೀಯ ತಳಿಗಳ ದನಗಳನ್ನು ಆಯಾ ಭಾಗಕ್ಕೆ ಪೂರೈಕೆಯಾಗುವ ರೀತಿಯಲ್ಲಿ ವೀರ್ಯ ಸಂಸ್ಕರಣಾ ಕೇಂದ್ರ ಕಾರ್ಯ ನಿರ್ವಹಿಸಲಿದೆ.  ಇದಕ್ಕಾಗಿ 6. 55 ಕೋಟಿ ರೂ. ಅನುದಾನವನ್ನು 2017-18 ನೇ ಸಾಲಿಗೆ ಒದಗಿಸಲಾಗುವುದು.  ರಾಜ್ಯದಲ್ಲಿ ಈ ಹಿಂದೆ ದಿನವೊಂದಕ್ಕೆ 59 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿತ್ತು.  ಇಲಾಖೆ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಇದೀಗ 72 ಲಕ್ಷ ಲೀ. ಹಾಲು ಸುಮಾರು 9 ಲಕ್ಷ ರೈತರಿಂದ ನಿತ್ಯ ಸಂಗ್ರಹವಾಗುತ್ತಿದೆ.  ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನ 04 ರೂ. ಗಳಿಂದ 05 ರೂ. ಗೆ ಹೆಚ್ಚಿಸಲಾಗಿದ್ದು, ನಿತ್ಯ 3. 5 ಕೋಟಿ ರೂ. ಪ್ರೋತ್ಸಾಹಧನ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.  ರೈತರು ಕೃಷಿಯ ಜೊತೆಗೆ ಹೈನುಗಾರಿಕೆ, ರೇಷ್ಮೆಯಂತಹ ಉಪ ಕಸುಬನ್ನು ಹೆಚ್ಚು, ಹೆಚ್ಚು, ಅಳವಡಿಸಿಕೊಂಡರೆ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ತಾ.ಪಂ. ಉಪಾಧ್ಯಕ್ಷೆ ಶಂಕ್ರಮ್ಮ ಅಮರೇಶ ಉಪಲಾಪುರ, ಜಿ.ಪಂ. ಸದಸ್ಯೆ ಬೀನಾಗೌಸ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಿರ್ದೇಸಕ ಡಾ. ಕೆ.ಎಂ. ಮಹಮ್ಮದ್ ಜಫರುಲ್ಲಾ ಖಾನ್, ಕೆಎಲ್‍ಡಿಎ ಅಪರ ನಿರ್ದೇಶಕ ಡಾ. ಎಂ.ಟಿ. ಮಂಜುನಾಥ್ ಉಪಸ್ಥಿತರಿದ್ದರು.  

Leave a Reply

Top