ರಾಜ್ಯಕ್ಕೆ ಹಸಿರು ಹೊದಿಕೆ ಹೊದಿಸಲು ಹಸಿರು ಕರ್ನಾಟಕ ಆಂದೋಲನ- ಎಸ್. ಶಂಕರ್

ಕರ್ನಾಟಕ ರಾಜ್ಯಕ್ಕೆ ಹಸಿರು ಹೊದಿಕೆ ಹೊದಿಸಲು ಹಸಿರು ಕರ್ನಾಟಕ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಯೋಜಿಸಿದ್ದು, ಈ ಬೃಹತ್ ಆಂದೋಲನದಲ್ಲಿ ಎಲ್ಲರೂ ಭಾಗವಹಿಸಿ, ಗಿಡಗಳನ್ನು ನೆಟ್ಟು ಪೋಷಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಮನವಿ ಮಾಡಿದರು.
ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯಕ್ಕೆ ಹಸಿರು ಹೊದಿಕೆ ಹೊದಿಸಲು ಹಸಿರು ಕರ್ನಾಟಕ ಎನ್ನುವ ಮಹತ್ವಕಾಂಕ್ಷಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಿದೆ. ಆ. 15 ರಿಂದ 17 ರವರೆಗೆ ಮೂರು ದಿನಗಳ ಕಾಲ ಗಿಡ ನೆಡುವ ಬೃಹತ್ ಆಂದೋಲನ ಇದಾಗಿದ್ದು, ಎಲ್ಲ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಅಧಿಕಾರಿ, ಸಿಬ್ಬಂದಿಗಳು, ಜನಪ್ರತಿನಿಧಿಗಳು ಈ ಆಂದೋಲನದಲ್ಲಿ ಪಾಲ್ಗೊಂಡು, ಹೆಚ್ಚು, ಹೆಚ್ಚು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಮೂಲಕ, ರಾಜ್ಯವನ್ನು ಹಸಿರು ಕರ್ನಾಟಕವಾಗಿಸುವಂತೆ ಸಚಿವ ಎಸ್. ಶಂಕರ್ ಅವರು ಮನವಿ ಮಾಡಿಕೊಂಡರು.
ಆಗಸ್ಟ್ 15, 1947 ಈ ದಿನ, ಪ್ರತಿಯೊಬ್ಬ ಭಾರತೀಯನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮಹತ್ವದ ದಿನ. ಬ್ರಿಟೀಷರ ಆಳ್ವಿಕೆಯಿಂದ ವಿಮುಕ್ತಿಗೊಂಡು ಸ್ವಾತಂತ್ರ್ಯ ಪಡೆದ ದಿನ. ದಾಸ್ಯದ ಸಂಕೋಲೆಯಿಂದ ಭಾರತಾಂಬೆ ಬಿಡುಗಡೆಗೊಂಡ ದಿನ. ಜಾತಿ, ಮತ, ಬಡವ, ಬಲ್ಲಿದನೆಂಬ ಭೇದವಿಲ್ಲದೆ ಅಗಣಿತ ದೇಶಭಕ್ತರು, ಸ್ವಹಿತವನ್ನು ತ್ಯಜಿಸಿ, ದೇಶಕ್ಕಾಗಿ ತ್ಯಾಗ ಬಲಿದಾನಗೈದ ಪರಿಣಾಮವಾಗಿ, ಶತಮಾನಗಳ ಕಾಲ ದಾಸ್ಯದಲ್ಲಿ ಸಿಲುಕಿದ್ದ ನಮ್ಮ ಭಾರತ ದೇಶ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದವು. ದೇಶದ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ, ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಮಹಾತ್ಮಾ ಗಾಂಧೀಜಿರವರು, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಜವಾಹರಲಾಲ್ ನೆಹರು, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸುಭಾಷ್‍ಚಂದ್ರ ಭೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು, ಲಾಲಬಹದ್ದೂರ್ ಶಾಸ್ತ್ರಿಯವರು ಹೀಗೆ ನಮ್ಮ ಅನೇಕ ರಾಷ್ಟ್ರೀಯ ಮಹಾಪುರುಷರು, ದೇಶ ಪ್ರೇಮಿಗಳು ತಮ್ಮ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿದೆ. ಸ್ವಾತಂತ್ರ್ಯ ಯೋಧರ, ಧೀಮಂತರುಗಳ ಸೇವೆಯನ್ನು ಇಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ರಾಷ್ಟ್ರೀಯ ಮಹಾಪುರುಷರುಗಳ ಹೋರಾಟ, ತ್ಯಾಗ, ಬಲಿದಾನ ಹಾಗೂ ರಾಷ್ಟ್ರಪ್ರೇಮ ಚಿರಸ್ಮರಣೀಯ. ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಂಡು ಅವರಿಗೆ ನಮ್ಮ ನಿಮ್ಮೆಲ್ಲರ ಗೌರವಪೂರ್ವಕ ನಮನ ಹಾಗೂ ಕೃತಜ್ಞತೆಗಳನ್ನು ಈ ಶುಭ ಸಂದರ್ಭದಲ್ಲಿ ಅರ್ಪಿಸೋಣ.
ವರುಣ ದೇವನ ಕೃಪೆಯಿಂದ ಈ ಬಾರಿ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿರುವುದು ಸಂತಸ ತಂದಿದೆ. ಈಗಾಗಲೇ ಕಾಲುವೆಗಳಿಗೆ ನೀರು ಹರಿಸಲಾಗಿದ್ದು ತುಂಗಭದ್ರೆಯನ್ನು ಅವಲಂಬಿಸಿಕೊಂಡಿದ್ದ ರೈತರು ಈ ಬಾರಿ ನೆಮ್ಮದಿ ಕಾಣುವಂತಾಗಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಮಳೆ ಆರಂಭದಲ್ಲಿ ಉತ್ತಮ ನಿರೀಕ್ಷೆ ಮೂಡಿಸಿತ್ತಾದರೂ, ನಂತರದ ದಿನದಲ್ಲಿ ಜಿಲ್ಲೆ ಮಳೆಯ ಕೊರತೆ ಎದುರಿಸುತ್ತಿದೆ. ಬರುವ ದಿನಗಳಲ್ಲಿಯಾದರೂ, ಉತ್ತಮ ಮಳೆಯಾಗುವ ಆಶಾಭಾವನೆ ಹೊಂದಿದ್ದೇವೆ. ಜಿಲ್ಲೆಯ ಎಲ್ಲಾ ಇಲಾಖೆಗಳು ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸ್ವತಂತ್ರ ಭಾರತದ ಆಶೋತ್ತರಗಳನ್ನು ಈಡೇರಿಸುವಂತೆ ಕೋರುತ್ತೇನೆ. ದೇಶ ಕಟ್ಟುವ ಕೆಲಸದಲ್ಲಿ ಮಹಾತ್ಮ ಗಾಂಧೀಜಿರವರು, ಜವಹಾರ್ ಲಾಲ್ ನೆಹರೂರವರು, ವಲ್ಲಭಬಾಯಿ ಪಟೇಲರಂತೆ ಅಪರಿಮಿತ ಸ್ವಾತಂತ್ರ್ಯ ಹೋರಾಟಗಾರರು ಬೆವರು ಮತ್ತು ರಕ್ತಗಳೆರಡನ್ನೂ ಹರಿಸಿದ್ದಾರೆ. ಈ ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯ ಪಾಲೂ ಇದೆ. ಅವರ ತ್ಯಾಗ, ಬಲಿದಾನಗಳ ಅರಿವು ಇಂದು ನಮ್ಮ ಮುನ್ನಡೆಗೆ ದಾರಿದೀಪವಾಗಬೇಕಾಗಿದೆ. ಈ ದೇಶದ ಸರ್ವತೋಮುಖ ಪ್ರಗತಿಗೆ ನಾವು ನೀವೆಲ್ಲಾ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಸಮಾರಂಭದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟ್ ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಐಎಎಸ್ ಪ್ರೊಬೆಷನರಿ ಅಧಿಕಾರಿ ಅಕ್ಷಯ್ ಶ್ರೀಧರ್, ಡಿಎಫ್‍ಒ ಯಶಪಾಲ್ ಕ್ಷೀರಸಾರ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಸ್ವಾತಂತ್ರ್ಯ ಯೋಧರಿಗೆ ಹಾಗೂ ಸನ್ಮಾನಿತರಿಗೆ ಗಿಡಗಳನ್ನು ನೆಡುವ ಮೂಲಕ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದ್ದು, ಈ ಬಾರಿಯ ವಿಶೇಷವಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕದ ದಳದಿಂದ ಆಕರ್ಷಕ ಪಥಸಂಚಲನ ಜರುಗಿತು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರವ ರಕ್ಷೆ ಸ್ವೀಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಜರುಗಿತು. ಜ್ಯೂ. ಎಸ್. ಜಾನಕಿ ಎಂದೇ ಮಾಧ್ಯಮಗಳಲ್ಲಿ ಇತ್ತೀಚೆಗೆ ಖ್ಯಾತಿ ಪಡೆದ ಕೊಪ್ಪಳದ ಗಾಯಕಿ ಗಂಗಮ್ಮ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಹಲವು ಶಾಲಾ ಮಕ್ಕಳಿಂದ ದೇಶಪ್ರೇಮ ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಆಕರ್ಷಕ ಸ್ತಬ್ಧ ಚಿತ್ರಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Please follow and like us:
error

Related posts