ರಂಜಾನ್ ಅವಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಸಭೆ ನಿಷೇಧ


ಕೊಪ್ಪಳ, ಏ.: ಕರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದರ್ಗಾ ಮತ್ತು ಮಸಜೀದ್ ಗಳಲ್ಲಿ ಮುಂಬರುವ ರಂಜಾನ ಹಬ್ಬದ ನಿಮಿತ್ಯ ಪ್ರಾರ್ಥನೆ, ಹಾಗೂ ಸಭೆ ಕೈಗೊಳ್ಳುವುದನ್ನು ಮೇ ೦೩ ರವರೆಗೆ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ಜ್ ಇಲಾಖೆಯ ಕಾರ್ಯದರ್ಶಿಗಳ ನಿರ್ದೇಶನದನ್ವಯ ಮುಂಬರುವ ರಂಜಾನ ಹಬ್ಬದ ಸಮಯದಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ರಂಜಾನ್ ಮಾಸಾಚರಣೆಯಲ್ಲಿ ಮಸೀದಿ ಹಾಗೂ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಪ್ರತಿ ದಿನದ ೫ ಬಾರಿ ನಮಾಜಿನ ಜೊತೆಗೆ ಶುಕ್ರವಾರದ ಮತ್ತು ತರಾವೆ ನಮಾಜ್‌ನ್ನು ಸಹ ಮಸೀದಿ/ದರ್ಗಾಗಳಲ್ಲಿ ಮಾಡಬಾರದು. ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆ ಕುರಿತು ಸಾರ್ವಜನಿಕ ಮಾಹಿತಿ ನೀಡಬಾರದು. ಕಡಿಮೆ ಧ್ವನಿವರ್ಧಕದ ಮೂಲಕ ಅಜಾನ್ ಕೂಗುವದು ಮತ್ತು ಮೌಜ್ಜನ್ ಅಥವಾ ಮಸೀದಿಯ ಪೇಶ್ ಇಮಾಮ್ ಉಪವಾಸದ (ರೋಜಾ) ಕುರಿತು ಆರಂಭ ಮತ್ತು ಮುಕ್ತಾಯಗೊಳ್ಳುವ ಬಗ್ಗೆ ಮಾತ್ರ ಹೇಳಬೇಕು.
ಯಾವುದೇ ರೀತಿಯ ಸಾರ್ವಜನಿಕ ಪ್ರವಚನ ನೀಡಬಾರದು. ಇಫ್ತಿಯಾರ್ ಕೂಟಗಳನ್ನು ಮಾತ್ತು ಸಾಮೂಹಿಕ ಭೋಜನ ಕೂಟ (ಸಹರಿ) ಆಯೋಜಿಸುವಂತಿಲ್ಲ. ಮಸೀದಿ ಮೊಹಲ್ಲಾಗಳಲ್ಲಿ ಯಾವುದೇ ರಿತೀಯ ತಂಪು ಪಾನೀಯ, ಜ್ಯೂಸ್, ಗಂಜಿ, ವಿತರಿಸುವಂತಿಲ್ಲ. ಮಸೀದಿ ಮತ್ತು ದರ್ಗಾದ ಸುತ್ತ ಮುತ್ತ ಯಾವುದೇ ಉಪಹಾರದ ಅಂಗಡಿಗಳನ್ನು ಹಾಕುವದನ್ನು ನಿಷೇಧಿಸಿದೆ.

ಇದಲ್ಲದೇ ರಂಜಾನ್ ಮಾಹೆಯ ನಮಾಜ್ ಹೆಸರಿನಲ್ಲಿ ಗುಂಪು ಸೇರುವಂತಿಲ್ಲ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸರ್ಕಾರವು ನೀಡಿದಂತಹ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾದ ಆಸೀಫ್ ಅಲಿ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ನೂರುದ್ಧೀನ್ ಖಾದ್ರಿ ಅವರು ಮನವಿ ಮಾಡಿದ್ದಾರೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮಕ್ಬೂಲ್ ಪಾಷಾ ತಿಳಿಸಿದ್ದಾರೆ.

Please follow and like us:
error