ಯು.ಟಿ.ಖಾದರ್ ವಿರುದ್ಧ ಈಶ್ವರಪ್ಪ ಗರಂ

-ಚೆಕ್ಡ್ಯಾಮ್ ಕಾಮಗಾರಿ ಅವ್ಯವಹಾರ ಪ್ರಕರಣ; ನಿರ್ದಾಕ್ಷಿಣ್ಯ ಕ್ರಮ: ಈಶ್ವರಪ್ಪ

ಕೊಪ್ಪಳ: ಚೀನಾ ದಾಳಿ ವಿಚಾರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಪ್ರಧಾನ ಮಂತ್ರಿ ಮೋದಿಯವರ ಬಗ್ಗೆ ಟೀಕೆ ಮಾಡುವುದನ್ನು ಬಿಡಲಿ ಎಂದು ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು.
ಕೊಪ್ಪಳದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ, ಪಾಕಿಸ್ತಾನದ ಪರ ಪರೋಕ್ಷವಾಗಿ ಮಾತನಾಡುವ ದೇಶದ್ರೋಹಿಗಳು ದೇಶದ ಪ್ರಧಾನಿಯನ್ನು ಹೊಗಳಬೇಕು. ದೇಶದ ವಿರುದ್ಧ ಬೇರೆ ಯಾರಾದರೂ ಕಾಲು ಕೆರೆದು ಕೆಣಕಿದರೆ ಸುಮ್ಮನಿರಲ್ಲ. ಮೊದಲು ಸೈನ್ಯದಲ್ಲಿ ಯೋಧ ಸತ್ತರೆ, ದಾಳಿ ಮಾಡುವ ಆದೇಶಕ್ಕೆ ಕಾಯಬೇಕಿತ್ತು. ಆದರೆ ಈಗ ಸೈನಿಕರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಪ್ರತ್ಯುತ್ತರಕ್ಕಾಗಿ ಆದೇಶಕ್ಕಾಗಿ ಕಾಯಬೇಕಿಲ್ಲ. ಇದಕ್ಕೆ ಸಾಕ್ಷಿ ಎಂದರೆ ಬಾರ್ಕೋಟ್ ದಾಳಿ. ಅಲ್ಲಿ ಏನಾಯ್ತು. ಭಾರತ ಹೇಗೆ ಪ್ರತ್ಯುತ್ತರ ನೀಡಿತು ಎಂಬುದನ್ನ ಖಾದರ್ ಹಾಗೂ ಅವರ ಪಕ್ಷದ ನಾಯಕಿ ಸೋನಿಯಾಗಾಂಧಿ ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು.
ಭಾರತದ ವಿಚಾರದಲ್ಲಿ ಪಾಕಿಸ್ತಾನ ಬಾಲ ಮುದುರಿಕೊಂಡು ಕೂರಲು 56 ಇಂಚಿನ ಪ್ರಧಾನಿ ಮೋದಿ ಏನು ಮಾಡಿದರು ಎಂಬುದನ್ನ ಎರಡು ಕಣ್ಣಿದ್ದರೆ ಬರೀ ಖಾದರ್ ಮಾತ್ರವಲ್ಲ, ಕಾಂಗ್ರೆಸ್ನ ಎಲ್ಲ ನಾಯಕರು ತಿಳಿದಿಕೊಳ್ಳಬೇಕು ಎಂದು ಕಿಡಿ ಕಾರಿದರು.

ಗುತ್ತಿಗೆದಾರರ, ಅಧಿಕಾರಿಗಳ ವಿರುದ್ಧ ಕ್ರಮ:
ಕೊಪ್ಪಳ ಜಿಲ್ಲೆಯಲ್ಲಿ ಚೆಕ್ ಡ್ಯಾಂ ಕಾಮಗಾರಿಗೆ ಸಂಬಂಧಿಸಿದಂತೆ ಅವ್ಯವಹಾರ ಬೆಳಕಿಗೆ ಬಂದಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ತನಿಖೆ ಇನ್ನೂ ಮುಂದುವರಿದಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದ್ದು, ಇದರಲ್ಲಿ ತಪ್ಪಿತಸ್ಥರು ಯಾರೇ ಇರಲಿ, ಗುತ್ತಿಗೆದಾರರೇ ಇರಲಿ, ಅಧಿಕಾರಿಗಳೇ ಇರಲಿ ನಿರ್ದಾಕ್ಷಿಣ್ಯ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಶಾಸಕ ಹಾಲಪ್ಪ ಆಚಾರ್, ಬಸವರಾಜ ದಢೇಸೂಗುರು, ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಸೇರಿದಂತೆ ಇನ್ನಿತರರು ಇದ್ದರು.

Please follow and like us:
error