ಯಾರ್‍ಯಾರು ನೇತ್ರದಾನ ಮಾಡಬಹುದು….? ನೇತ್ರದಾನ ಮಾಡುವದು ಹೇಗೆ ?

ನೇತ್ರದಾನ ಜಾಗೃತಿಯ ಅರಿವಿಗಾಗಿ ಜಾತ್ರೆಯಲ್ಲಿ ಮಳಿಗೆ
ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಕಾಲೇಜು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ೪೦ಘಿ೬೦ ಅಳತೆಯ ವಿಶೇಷವಾದ ಮಳಿಗೆಯು ಜಾತ್ರೆಯಲ್ಲಿ ಆಗಮಿಸುವ ಜನರಿಗೆ ನೇತ್ರದಾನ ಅರಿವು ಮೂಡಿಸುವ ವಿಶೇಷ ಬಿತ್ತಿ ಪತ್ರಗಳು, ಕರ ಪತ್ರಗಳು, ವೀಡಿಯೊ ಮೂಲಕ ಜನರಲ್ಲಿ ಜಾಗೃತಿಯನ್ನು ಜನೆವರಿ ೨೨, ೨೩ & ೨೪ ರ ದಿನದಂದು ಮಾಡುತ್ತದೆ. ಅಲ್ಲದೇ ಇದೇ ಮಳಿಗೆಯಲ್ಲಿ ನೇತ್ರದಾನ ಮಾಡುವವರಿಗೆ ಒಪ್ಪಿಗೆ ಪತ್ರವನ್ನುಸಹ ನೀಡಲಾಗುವುದು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳ. ಇವರು ನೂತನವಾಗಿ ಪ್ರಾರಂಭಿಸಿರುವ ನೇತ್ರದಾನ ಸಂಗ್ರಹಣಾ ಘಟಕಕ್ಕೆ ನೇರವಾಗಿ ಹೋಗಿ ನೇತ್ರದಾನದ ಒಪ್ಪಿಗೆ ಪತ್ರವನ್ನು ಪಡೆಯಬಹುದು.
ಎಲ್ಲಾ ದಾನಗಳಲ್ಲಿ ಕಣ್ಣಿನ ದಾನ ಅತಿ ಶ್ರೇಷ್ಟವಾಗಿದೆ. ಏಕೆಂದರೆ ಇದು ಅಂಧರ ಬದುಕಿಗೆ ಬೆಳಕನ್ನು ತರುತ್ತದೆ. ನಾವು ಜೀವಂತವಾಗಿರುವಾಗಲೇ ನಮ್ಮ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೂಲಕ ನಮ್ಮ ಕಣ್ಣುಗಳನ್ನು ದಾನ ಮಾಡಬಹುದು ಅಥವಾ ಮರಣಿಸಿದವರ ಹತ್ತಿರದ ಸಂಬಂಧಿಯು ಕೂಡಾ ನೇತ್ರದಾನ ಮಾಡಬಹುದು. ನೇತ್ರದಾನವು ಸಮಾಜದ ಪ್ರಯೋಜನಕ್ಕಾಗಿ ಮಾಡುವ ಕಾರ್ಯವಾಗಿದೆ ಮತ್ತು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಇದನ್ನು ಮರಣಾಂತರ ಮಾಡಲಾಗುತ್ತದೆ. ಆದ್ದರಿಂದ ಕಣ್ಣಿನ ದಾನವನ್ನು ದೊಡ್ಡ ಪ್ರಮಾಣದಲ್ಲಿ ಪೋತ್ಸಾಹಿಸಬೇಕು. ಇದು ಸಾಮಾಜಿಕ ಸೇವೆಗೆ ಅತ್ಯತ್ತಮವಾದ ಒಂದು ಸಾಧನವಾಗಿದೆ. ಒಬ್ಬ ವ್ಯಕ್ತಿಯ ನೇತ್ರದಾನದಿಂದ ಇಬ್ಬರು ಕುರುಡ ಜನರನ್ನು ಶಕ್ತಗೊಳಿಸಬಹುದು.
ಪ್ರಪಂಚದಾದ್ಯಂತ ಸುಮಾರು ಮೂವತ್ತೇಳು ಮಿಲಿಯನ್ (೩೭) ಜನರು ಅಂಧರಿದ್ದರೆ ಮತ್ತು ಭಾರತದಲ್ಲಿ ಸುಮಾರು ೧೫ ಮಿಲಿಯನ್ ಜನ ಅಂಧರಿದ್ದಾರೆ ಅಂಧತ್ವಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಕಾರ್ನಿಯಾ ಸಮಸ್ಯೆಯಿಂದಾಗುವ ಕುರುಡತನವೂ ಒಂದು ಬೇರೆಲ್ಲಾ ಕಾರಣಗಳಿಗೆ ಶಸ್ತ್ರ ಚಿಕಿತ್ಸೆ ಕೃತಕ ಸಾಧನಗಳಿದ್ದೂ ಇಂದಿನವರೆಗೂ ಕಾರ್ನಿಯಾದ ಅಂಧತ್ವ ಚಿಕಿತ್ಸೆ ಕಾರ್ನಿಯಾದ ಕಸಿ ಏಕ ಮಾತ್ರ ಚಿಕಿತ್ಸೆಯಾಗಿದ್ದು ಕೃತಕ ಕಾರ್ನಿಯಾಗಳನ್ನು ಇನ್ನೂ ಅಭಿವೃದ್ದಿಪಡಿಸಲಾಗಿಲ್ಲ. ಆದ್ದರಿಂದ ನೇತ್ರದಾನವೊಂದೇ ಇದಕ್ಕೆ ಪರಿಹಾರ.
ಕಾರ್ನಿಯವು ಕಣ್ಣಿನ ಪ್ರಮುಖ ಭಾಗವಾಗಿದೆ. ಇದು ನಮ್ಮ ಕಣ್ಣಿನ ಕರಿ ಗುಡ್ಡೆಯ ಮೇಲೆ ಅರ್ಧ ಗೋಳಾಕಾರದ ಗಾಜಿನಂತಹ ಒಂದು ಪದರು. ಕಣ್ಣುಗಳು ಸರಿಯಾಗಿ ನೋಡುವಂತಾಗಲು ಕಾರ್ನಿಯವು ಪಾರದರ್ಶಕವಾಗಿರಬೇಕು. ಆದರೆ, ಕಾರ್ನಿಯಾದ ಸೋಂಕು, ಗಾಯಗಳು, ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯ ಕೊರತೆ, ಅಪೌಷ್ಠಿಕತೆ ಮತ್ತು ಜನ್ಮಜಾತ ಅಥವಾ ಅನುವಂಶಿಕ ಕಾರಣಗಳಿಂದಾಗಿ ಇದು ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತದೆ. ನಾವು ದಾನಮಾಡಿದ ಕಣ್ಣುಗಳಿಂದ ತೆಗೆದ ಕಾರ್ನಿಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಕಾರ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಅಂಧರ ಕಣ್ಣಿಗೆ ಕಸಿ (ಕಾರ್ನಿಯಲ್ ಇಂಪ್ಲಾಂಟೇಶನ್) ಮಾಡಲಾಗುತ್ತದೆ.

ಯಾರ್‍ಯಾರು ನೇತ್ರದಾನ ಮಾಡಬಹುದು….?
ಗಂಡು ಹೆಣ್ಣು ಎಂಬ ಬೇಧವಿಲ್ಲದೇ ಯಾವುದೇ ವಯಸ್ಸಿನವರೂ ನೇತ್ರದಾನ ಮಾಡಬಹುದು. ಕನ್ನಡಕ, ಮಧುಮೇಹ, ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಮತ್ತು ಅಸ್ತಮಾ ರೋಗಿಗಳು ಕೂಡ ನೇತ್ರದಾನ ಮಾಡಬಹುದು. ಏಡ್ಸ್, ಹೆಪಾಟೈಟಿಸ್ ಬಿ ಮತ್ತು ಸಿ, ರೇಬಿಸ್, ಎನ್ಸೆಫಲೈಟಿಸ್ನಂತಹ ಸೋಂಕಿನ ಕಾಯಿಲೆಗಳನ್ನು ಹೊಂದಿರುವವರು ಕಣ್ಣುಗಳನ್ನು ದಾನ ಮಾಡುವಂತಿಲ್ಲ.

ನೇತ್ರದಾನ ಮಾಡುವದು ಹೇಗೆ..?
ಹತ್ತಿರದ ಕಣ್ಣಿನ ಬ್ಯಾಂಕ್ ನಲ್ಲಿ ನೇತ್ರದಾನಿಯಾಗಿ ನಿಮ್ಮ ಹೆಸರನ್ನು ನೋಂದಾಯಿಸಿ. ನೇತ್ರದಾನಿ ಕಾರ್ಡನ್ನು ಪಡೆದು ನಿಮ್ಮ ಕುಟುಂಬಕ್ಕೆ ಅಥವಾ ನಿಮ್ಮ ಕಾನೂನು ಸಲಹೆಗಾರರಿಗೆ ನೀವು ಕಣ್ಣಿನ ಬ್ಯಾಂಕ್‌ಗೆ ತಿಳಿಸುವದು ಅವರ ಕರ್ತವ್ಯ.
ಸಾವಿನ ನಂತರ ನೇತ್ರದಾನದ ಪ್ರಕ್ರಿಯೆ:
ವ್ಯಕ್ತಿಯ ಮರಣದ ಆರು ಗಂಟೆಗಳೊಳಗೆ ಕಣ್ಣಿನ ದಾನ ಮಾಡಬಹುದು. ಸಾವು ಸಂಭವಿಸಿದ ಕೂಡಲೇ ಹತ್ತಿರದ ಕಣ್ಣಿನ ಬ್ಯಾಂಕ್ ಅಥವಾ ಸರ್ಕಾರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಕರೆ ಮಾಡಿ ವಿಷಯವನ್ನು ತಿಳಿಸಬೇಕು. ವ್ಯಕ್ತಿ ಸತ್ತಾಗ, ಅವರ ಕಣ್ಣಿನ ಮೇಲೆ ನೀರನ್ನು ಚಿಮುಕಿಸುವ ಮೂಲಕ ಕಣ್ಣಿನ್ನು ತೇವವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನೀರಿನಲ್ಲಿ ನೆನೆಸಿರುವ ಹತ್ತಿಯನ್ನು ಎರಡೂ ಕಣ್ಣುಗಳ ಮೇಲೆ ಇಡಬೇಕು. ಇದರಿಂದ ಕಣ್ಣಿನ ಕಾರ್ನಿಯಾವು ಒಣಗುವದಿಲ್ಲ. ಕಣ್ಣಿನ ಬ್ಯಾಂಕಿನ ಸಿಬ್ಬಂಧಿಯು ಅತಿ ಶೀಘ್ರ ಸಮಯದಲ್ಲಿ ಮೃತರ ಮನೆಗೆ ತಲುಪುತ್ತಾರೆ. ಮತ್ತು ಅದೇ ಸ್ಥಳದಲ್ಲಿ, ಸತ್ತವರ ಮುಖವನ್ನು ವಿಮುಖಗಳಿಸದೆ ಕಣ್ಣುಗಳನ್ನು ೧೦-೧೫ ನಿಮಿಷದೊಳಗೆ ಸಂಗ್ರಹಿಸುತ್ತಾರೆ. ಧರ್ಮ ಮತ್ತು ಆಚರಣೆಗಳನ್ನು ಆಧರಿಸಿ ತಪ್ಪುಗ್ರಹಿಕೆಗಳ ಕಾರಣದಿಂದಾಗಿ ಈ ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳಲು ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ. ಎಲ್ಲಾ ಧರ್ಮಗಳು ಕಣ್ಣಿನ ದಾನವನ್ನು ಅನುಮೋದಿಸುತ್ತವೆ. ಆದ್ದರಿಂದ ನೇತ್ರದಾನ ಮಾಡಲು ಹಿಂಜರಿಯಬೇಡಿ. ನೀವು ಈ ಪ್ರಪಂಚವನ್ನು ಬಿಡುವ ಮೊದಲು ನಿಮ್ಮ ಗುರುತೊಂದನ್ನು ಇಲ್ಲಿ ಬಿಡಿ. ನೀವು ಇನ್ನೊಬ್ಬರ ಲೋಕವನ್ನು ಬೆಳಗಿಸಬಹುದು. ಈ ಜೀವನಕ್ಕೆ ಧನ್ಯವಾದ ಸಲ್ಲಿಸಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ.
 

Please follow and like us:
error