ಮೋದಿ ತಾಕತ್ತು‌ ಜಗತ್ತಿಗೆ ಗೊತ್ತಿದೆ: ಡಿ.ಕೆ.ಸುರೇಶ್ ಲಿಮಿಟ್‌ನಲ್ಲಿ ಮಾತನಾಡಿ; ಸಚಿವ ಸೋಮಶೇಖರ್

ಯಡಿಯೂರಪ್ಪ ನುಡಿದಂತೆ‌ ನಡೆಯುತ್ತಾರೆ.ಕೃಷ್ಣ ಭೈರೇಗೌಡ್ರಿಗೆ ಹಿಂದೆ-ಮುಂದೆ ಏನೂ ಗೊತ್ತಿಲ್ಲ

ಕೊಪ್ಪಳ: ಸಂಸದ ಡಿ.ಕೆ.ಸುರೇಶ್ ಅವರು ಮಾತನಾಡುವಾಗ ತಮ್ಮ ಮಿತಿ ಅರಿತು ಮಾತನಾಡಬೇಕು. ಚೀನಾ ವಸ್ತುಗಳನ್ನು ನಿಷೇಧಿಸುವ‌ ಕುರಿತು ಪ್ರಧಾನಿ ತಾಕತ್ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಸಂಸದ ಡಿ.ಕೆ.ಸುರೇಶ್ ಲಘುವಾಗಿ, ಸವಾಲು ಎಸೆಯುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಕಳೆದ ಮೂರು ತಿಂಗಳಿನಿಂದ ಪ್ರಧಾನಿ ಏನು ಮಾಡ್ತಿದಾರೆ, ಅವರ ತಾಕತ್ತು ಏನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಚೀನಾ ವಸ್ತುಗಳ ಬಗ್ಗೆ ಪ್ರಧಾನಿಯಾಗಿ ಏನು ಮಾಡಬೇಕೊ, ಅದನ್ನ ಮಾಡೇ ಮಾಡ್ತಾರೆ. ಡಿ.ಕೆ.ಸುರೇಶ್ ಮಾತನ್ನ ಚಾಲೇಂಜ್ ಆಗಿ ಸ್ವೀಕಾರ ಮಾಡಬೇಕಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿಯಿಂದ ಎಚ್.ವಿಶ್ಬನಾಥ್‌ಗೆ ಅನ್ಯಾಯ ಎಂಬ ಕೃಷ್ಣ ಭೈರೇಗೌಡ ಹೇಳಿಕೆಗೆ ಸಿಡಿಮಿಡಿಗೊಂಡ ಅವರು, ಕೃಷ್ಣ ಭೈರೇಗೌಡಗೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಏನೂ ಗೊತ್ತಿಲ್ಲದೇ ಏನೇನೋ ಮಾತಾಡ್ತಾರೆ ಎಂದು ಲೇವಡಿ ಮಾಡಿದರು.

 

ರಾಜೀನಾಮೆ ನೀಡಿದ್ದ 17 ಶಾಸಕರ ಪೈಕಿ 10 ಜನರನ್ನು ಮಂತ್ರಿ ಮಾಡಿದ್ದಾರೆ. ವಿಶ್ವನಾಥ ಹೊರತುಪಡಿಸಿ ಎಂ.ಟಿ.ಬಿ.ನಾಗರಾಜ, ಶಂಕರ್ ಅವರಿಗೆ ಎಂಎಲ್‌ಸಿ ಟಿಕೆಟ್ ನಿಗದಿಯಾಗಿದೆ. ಇನ್ನು‌ ಪ್ರತಾಪಗೌಡ, ಮುನಿರತ್ನ ಚುನಾವಣೆಗೆ ಹೋಗ್ತಿದಾರೆ. ಒಬ್ಬರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.

 

ವಿಶ್ವನಾಥ್ ಬಗ್ಗೆ ತಾವು, ಬಿ.ಸಿ.ಪಾಟೀಲ ಸೇರಿ ಸಿಎಂ ಬಳಿ ಮಾತನಾಡಿದ್ದೇವೆ. ಏನೋ ಸಣ್ಣ ಸಮಸ್ಯೆ ಆಗಿದೆ. ಮುಂದಿನ ದಿನಮಾನಗಳಲ್ಲಿ ಸ್ಥಾನ-ಮಾನ ನೀಡುವುದಾಗಿ ಸ್ವತಃ ಸಿಎಂ ಯೆಡಿಯೂರಪ್ಪ ಅವರು ವಿಶ್ವನಾಥ್ ಅವರಿಗೆ ಹೇಳಿದ್ದಾರೆ. ವಿಶ್ವನಾಥ್ ಸಹ ಸಿಎಂ ಮಾತುಗಳನ್ನು ಸ್ವೀಕರಿಸಿದ್ದಾರೆ. ಸಿಎಂ ಯಡಿಯೂರಪ್ಪ ಈವರೆಗೆ ನುಡಿದಂತೆ ನಡೆದಿದ್ದಾರೆ. ಬೇರೆಯವರಿಗೆ ಮೋಸ, ಅನ್ಯಾಯ ಮಾಡುವ ಜಾಯಮಾನ ಯಡಿಯೂರಪ್ಪ ಅವರದ್ದಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Please follow and like us:
error