ಮೋದಿ ಕೇವಲ ಸೊಗಸಾಗಿ ಭಾಷಣ ಮಾಡುವ ಮಾತುಗಾರ-ಇಕ್ಬಾಲ್ ಅನ್ಸಾರಿ

ಪ್ರದಾನ ಮಂತ್ರಿ ನರೇಂದ್ರ ಮೋದಿ ಕೇವಲ ಮಾತುಗಾರ, ಸೊಗಸಾಗಿ ಭಾಷಣ ಮಾಡುವ ಕಲೆಯನ್ನು ರೂಡಿ ಮಾಡಿಕೊಂಡಿರುವ ವ್ಯಕ್ತಿಯಷ್ಟೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಪ್ರಧಾನಿ ಮೋದಿಯನ್ನು ಟೀಕಿಸಿದರು. ಗಂಗಾವತಿ ನಗರದಲ್ಲಿ ಇಂದು ನಡೆದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಶಾಸಕ ಇಕ್ಬಾಲ್  ಅನ್ಸಾರಿ  ಕೇವಲ ಎರಡು ಸಿಲಿಂಡರ್ ನೀಡಿದ ಮಾತ್ರಕ್ಕೆ ಗ್ರಾಮೀಣ ಭಾಗದ ಅದರಲ್ಲೂ ಬಡ ಜನರ ಹೊಟ್ಟೆ ತುಂಬುವುದಿಲ್ಲ. ಜನರಲ್ಲಿ ಆತ್ಮವಿಶ್ವಾಸ ವೃದ್ಧಿಸುವಂತ ಹಾಗೂ ದುಡಿಯಲು ಕೆಲಸ ನೀಡುವಂತ ಕಾರ್ಯವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಬೇಕಿತ್ತು ಎಂದರು. 

ಮೇಕ್ ಇನ್ ಇಂಡಿಯಾ, ಕೌಶಲ ಭಾರತ, ಸ್ವಚ್ಛ ಭಾರತ ಅಭಿಯಾನ್, ನಿರ್ಮಲ ಭಾರತ ಸೇರಿದಂತೆ ಎಲ್ಲವೂ ಕೇವಲ ಬೋಗಸ್. ಮೋದಿ ಅವರ ಅಸಲಿಯತ್ತು ಮುಂದಿನ ಕೆಲವೇ ದಿನಗಳಲ್ಲಿ ಜನರ ಎದುರು ಬಿಚ್ಚಿಕೊಳ್ಳುತ್ತದೆ. ಇಡೀ ವಿಶ್ವ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ವಿಶ್ವಾಸ ಭ್ರಮನಿರಸನದಂತಾಗುತ್ತದೆ  ಎಂದರು.
ನಿಜವಾಗಲೂ ಮೋದಿ ಒಬ್ಬ ಚಾಣಾಕ್ಷ ಆಡಳಿತಗಾರನಾಗಿದ್ದರೆ ಆರಂಭದಿಂದಲೂ ಪ್ರತಿಪಾದಿಸುತ್ತಿದ್ದ ಕಪ್ಪುಹಣ ಏಕೆ ಇದುವರೆಗೂ ತಂದಿಲ್ಲ ಎಂದು ಪ್ರಶ್ನಿಸಿದ ಅನ್ಸಾರಿ, ನೋಟ್ ಅಮಾನ್ಯೀಕರಣ, ಜಿಎಸ್‌ಟಿಯಂತ ಯೋಜನೆ ಜಾರಿ ಮೂಲಕ ಜನರ ಕಷ್ಟಗಳನ್ನು ಶೇ. 100ರಷ್ಟು ಹೆಚ್ಚು ಮಾಡಿದ್ದಾರೆ ಎಂದು ದೂರಿದರು. ಕೋಮುವಾದದಿಂದ ದೇಶದ ಐಕ್ಯತೆ ಹಾಗೂ ವಿವಿಧ ಜಾತಿ, ಧರ್ಮಗಳ ಮಧ್ಯದ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದ್ದು, ಬಿಜೆಪಿ ಕೋಮುವಾದಕ್ಕೆ ಪುಷ್ಠಿ ನೀಡುವ ಮೂಲಕ ಈ ದೇಶದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಟೀಕಿಸಿದರು. ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಸದಾ ಸಮಾಜದಲ್ಲಿ ಶಾಂತಿ ಸಾಮರಸ್ಯ, ಜಾತಿ, ಧರ್ಮಗಳ ಮಧ್ಯ ಸಾಮರಸ್ಯ ಕದಡುವ ಮೂಲಕ ತಮ್ಮ ಅಸ್ತಿತ್ವವನ್ನು ಜೀವಂತವಾಗಿಟ್ಟುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.