(ಮುಟ್ಟು ನನ್ನೊಳಗೊಂದು ಗುಟ್ಟು)
ಸಂತೆಯಲ್ಲಿ ತರಕಾರಿಗಳ ಬಾರಿ ದುಬಾರಿಯ
ಿಂದ ತಲೆನೋವಾಗಿ ಅಜ್ಜಿ ಬಡಬಡಿಸುತ್ತಾ ಹೋಗುತ್ತಿದ್ದವರು ಯಾರೆಂದು ನೋಡುವಷ್ಟರಲ್ಲಿ ಅವಳು ಬೇರೆ ಯಾರು ಅಲ್ಲ ನಮ್ಮನೆ ಪಕ್ಕದ್ಮನೆ ಅಜ್ಜಿ. ಒಂಟಿ ಪಿಶಾಚಿಯಂಗೆ ಬದುಕುತ್ತಿರುವ ಈ ಅಜ್ಜಿ ಇವಳ್ಯಾಕೆ ಹಿಂಗೆ ಬೈತಿದಾಳೆ ಎಂದು ಕೇಳಿದ ತಕ್ಷಣ ಅಜ್ಜಿ ಕಣ್ಣಲ್ಲಿ ನೀರು ದರ ದರ ಎಂದು ಕೆನ್ನೆ ಮೇಲೆ ಜಾರಿ ಬಿದ್ದೇಬಿಡ್ತು. ನನಗೆ ಬಹಳ ಗಾಬರಿ ಆಯಿತು ಯಾಕಜ್ಜಿ ಏನಾಯಿತು ಯಾರೆನೆಂದರು ? ಯಾಕೆ ಕಣ್ಣಲ್ಲಿ ನೀರು. ಎಂದು ವಿಚಾರಿಸಿದೆ, ಅಜ್ಜಿ ಮೆಲ್ಲನೆ ತಲೆಎತ್ತಿ ಅತ್ತಿತ್ತ ನೋಡಿ ನನ್ನ ಮೊಮ್ಮಗಳು ಮೈ ನೆರಿದ್ದಾಳೆ ಎಂದು ಮೆಲ್ಲಕೆ ಯಾರಿಗೂ ಕೇಳಿಸದೆ ನನಗೂ ಸರಿಯಾಗಿ ಕೇಳಿಸದ ಹಾಗೆ ಹೇಳಿದಳು . ನಾನು ಬಹಳ ಖುಷಿ ಪಟ್ಟು ಹೊ… ಹೌದಾ ಬಹಳ ಒಳ್ಳೆಯದಾಯಿತಲ್ಲ ಮತ್ತೀನೇನು ಅಜ್ಜಿ ಯಾವಾಗ ಊಟ ಹಾಕಿಸ್ತೀಯಾ? ಎಂದು ರೇಗಿಸುತ್ತಿದ್ದೆ ಅಷ್ಟರಲ್ಲಿ ಅಜ್ಜಿ ಕಣ್ಣಲ್ಲಿ ಮತ್ತೆ ನೀರು. ನನಗೆ ಯಾಕೆ ಅಂತ ಮತ್ತೆ ಅರ್ಥವೇ ಆಗಲಿಲ್ಲ. ಆಗ ಅಜ್ಜಿಯೇ ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡು ಇದ್ದಕ್ಕಿದಂತೆ ತನ್ನ ಮುಟ್ಟಿನ ಅನುಭವವನ್ನು ಹೇಳಿಕೊಳ್ಳಲು ಶುರುಮಾಡಿಯೇ ಬಿಟ್ಟಳು.
ನಮ್ದು ಚಿಕ್ಕ ಹಳ್ಳಿ ಅಲ್ಲೊಬ್ಬಳು ತುಂಬಾ ಚೂಟಿ ಹುಡುಗಿ ಇದ್ದಳು. ಅವಳ ಹೆಸರು ಪದ್ಮ ಅಂತ. ಅವಳಿಗೆ ಮಾತೆಂದರೆ ಪ್ರಾಣ, ಪ್ರಶ್ನೆಗಳು ಕೇಳೊದರಲ್ಲಿ ಮುಂದು, ಎಲ್ಲಾ ಆಟಗಳನ್ನು ಆಡುತ್ತಿದ್ದಳು, ಕುಂಟಬಿಲ್ಲೆ, ಲಗೋರಿ, ಕಣ್ಣಮುಚ್ಚೆ ಆಟ, ಈಜೋದು, ಮರ ಏರೋದು , ಕ್ಯಾಲಂ ಬೋರ್ಡ್, ಕ್ರಿಕೆಟ್, ಕೊಕೊ ಆಟ, ಆನೆಕಲ್ಲು ಆಟ ಹೀಗೆ ಹೇಳುತ್ತಾ ಹೋದರೆ ಅವಳ ಆಟ ಮುಗಿಯೋದೆ ಇಲ್ಲ. ಆ ಊರಲ್ಲಿ ಚಿಕ್ಕ ಚಿಕ್ಕ ವಸ್ತುಗಳು ಮಾತ್ರ ಸಿಗುತ್ತಿತ್ತು. ಅಂದರೆ, ಪೆಪರಮೆಂಟ್, ಸೊಂಡಿಗೆ, ಬೀಡಿ, ಬಿಸ್ಕೇಟ್ ಇಷ್ಟೇ ಇಲ್ಲಿ ಸಿಗುತ್ತಿದ್ದು. ಇದಕ್ಕಿಂತ ಹೆಚ್ಚಿನ ವಸ್ತುಗಳು ತರಬೇಕೆಂದರೆ 3 ಕಿಮಿ ಇರುವ ಪಕ್ಕದ ಹಳ್ಳಿಗೆ ಹೋಗಬೇಕಿತ್ತು. ಇಂತಹ ಊರಲ್ಲಿ ಈ ಪದ್ಮ ಇದ್ದಳು . ಒಂದು ದಿನ ಪದ್ಮ ಕುಂಟಬಿಲ್ಲೆ ಆಡುವಾಗ, ಅವಳಿಗೆ ಏನೊ ಹೊಟ್ಟೆ ನೋವಾದಂಗೆ ಆಗಿ ಸ್ವಲ್ಪ ನಿಧಾನಕ್ಕೆ ಆಟ ಆಡತೊಡಗಿದಳು. ಆದರೂ ಆ ಹೊಟ್ಟೆ ನೋವು ತಡೆಯೋಕೆ ಆಗದೆ, ಒಂದುಕಡೆ ವಿಶ್ರಾಂತಿ ತೆಗೆದುಕೊಳ್ಳಲು ಕುಳಿತಳು. ಹತ್ತು ನಿಮಿಷ ಆದಮೇಲೆ ಎದ್ದು ಮತ್ತೆ ಆಟ ಆಡೋಕೆ ಹೋಗಬೇಕೆಂದು ಎದ್ದಾಗ, ಅವಳಿಗೆ ಕಂಡಿದ್ದು ರಕ್ತ! ಅವಳಿಗೆ ಭಯ, ಆಶ್ಚರ್ಯ ತಕ್ಷಣ ಜೋರಾಗಿ ಅಳಲು ಶುರು ಮಾಡಿಯೇ ಬಿಟ್ಟಳು. ಆಗ ಅಕ್ಕ ಪಕ್ಕದ ಸ್ನೇಹಿತರೆಲ್ಲಾ ಓಡಿ ಬಂದು ಕೇಳಿದಾಗ, ಅವಳು ಆಗಿರೋದನ್ನ ಹೇಳಿದ ತಕ್ಷಣ , ಹುಡುಗರೆಲ್ಲಾ ದೂರ ಹೋಗಿ ನಿಂತರು, ಹುಡುಗಿಯರು ಏನು ಮಾಡೊಕೆ ಆಗದೆ ಬೆಪ್ಪಾಗಿ ನಿಂತಿದ್ದರು. ಪದ್ಮ ನಿರೀಕ್ಷಿಸಿದಂತೆ ಯಾರೂ ಸಮಾಧಾನ ಮಾಡಲಿಲ್ಲ. ಅವಳಿಗೆ ಇನ್ನೂ ಬೇಸರ ಆಯಿತು. ಅಷ್ಟರಲ್ಲಿ ಅದೆಂಗೆ ಸುದ್ದಿ ಹೋಯಿತೋ ಗೊತ್ತಿಲ್ಲ ಅವರಮ್ಮ ಬಂದು ಅವಳನ್ನ ಕರಕೊಂಡು ಹೋಗಿ ಊರು ಹೊರಗಿರುವ “ಮುಟ್ಟಿನ ಗುಡಿಸಲಿಗೆ” ಬಿಟ್ಟು , ಹೊರಡುವಾಗ, ಇನ್ನು ನೀನು 11 ದಿನ ಹೊರಗೆ ಬರುವ ಹಾಗಿಲ್ಲ. ಯಾರಿಗೂ ಕಾಣಿಸಬಾರದು, ಇನ್ನು ಮೇಲೆ ಯಾರ ಜೊತೆಗೂ ಆಟ ಆಡಬಾರದು, ಎಂದು ಹೇಳಿ, ದಿನಾ ನಾನು ಊಟ ತಂದು ಕೊಡ್ತೀನಿ ಅಂತ ಹೇಳಿ ಇನ್ನೇನು ಹೊರಡಬೇಕು ಅಂತ ಅವರಮ್ಮ ಹೊರಟು ನಿಂತಳು. ಗಾಬರಿಯಾಗಿ ಹೆದರಿಕೊಳ್ಳುತ್ತಾ, ತನ್ನೊಳಗೆ ಏನು ಆಗುತ್ತಿದೆ ಅರ್ಥ ಮಾಡಿಕೊಳ್ಳೊಕೆ ಆಗದೆ, ಅದೇ ಒತ್ತಡದಲ್ಲಿ, ಮೆಲ್ಲಗೆ ಅಮ್ಮನ ಮುಖ ನೋಡುತ್ತಾ, ಕಣ್ಣಂಚಲ್ಲಿ ನೀರು ತಂದುಕೊಂಡು ಅಮ್ಮ ಯಾಕೆ ನನ್ನ ಇಲ್ಲಿ ಬಿಟ್ಟು ಹೋಗ್ತೀಯ? ನಾನು ಸತ್ತು ಹೋಗ್ತೀನಾ? ನನಗೆ ಭಯ ಆಗುತ್ತೆ ಅಮ್ಮ, ಅಮ್ಮ ನಾನು ನಿನ್ನ ಜೊತೆ ಬರ್ತೀನಿ, ನಾನು ಇನ್ನು ಓದಬೇಕು, ಆಟ ಆಡಬೇಕು ನಾನ ಸಾಯೊಲ್ಲ ಅಲ್ಲ ಅಮ್ಮ. ಅಂತ ಮೆಲ್ಲಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದಳು. ತಕ್ಷಣ ಅಮ್ಮ ಕೋಪದಿಂದ ಏ”… ಬಾಯಿ ಮುಚ್ಚು ಇನ್ನು ಮುಂದೆ ನೀನು ಯಾವ ಪ್ರಶ್ನೆಯನ್ನು ಕೇಳುವಂಗಿಲ್ಲ ನೀನು? ನಾವು ಹೇಳಿದಂಗೆ ಕೇಳಿಕೊಂಡು , ಕೊಟ್ಟ ಊರಿಗೆ ಮದುವೆ ಮಾಡಿಕೊಂಡು ಹೋಗಬೇಕಷ್ಟೆ ? ಎಂದು ಹೇಳುತ್ತಿರುವಾಗಲೇ, ಅಮ್ಮನ ಕಣ್ಣಲ್ಲಿ ಕೂಡ ಅಸಾಯಕತೆಯ ಕಣ್ಣೀರು ಬಂದು ಹೋಗಿ, ಕೊನೆಗೆ ಸಮಾಧಾನದಿಂದ ನಾವು ಹೆಣ್ಣುಮಕ್ಕಳಮ್ಮ ನೀನು ಇವತ್ತು ಅಷ್ಟೇ ಅಲ್ಲ ನೀನು ಪ್ರತಿ ತಿಂಗಳು ಹಿಂಗೆ ಆದಾಗ, ಈ ಗುಡಸಲಿಗೆ ಬರುತ್ತೀರಬೇಕು ಎಂದು ಹೇಳಿ ಹೊರಟೇ ಬಿಟ್ಟಳು ಅಮ್ಮ. ಪದ್ಮಗೆ ದಿಕ್ಕೇ ತೋಚದಂಗೆ ತಲೆ ಮೇಲೆ ಕೈಯಿಟ್ಟುಕೊಂಡು ಯೋಚಿಸತೊಡಗಿದಳು ಮತ್ತೆ ಬರುತ್ತಾ ಇದು ಎಂದು. ಆಗಲೂ ಗೊತ್ತಾಗಲಿಲ್ಲ ಅವಳಿಗೆ ಯಾಕೆ ಹೀಗೆ ಕೂಡಿಸಿದಾರೆಂದು.
ಏನು ಮಾಡಬೇಕೆಂದು ಗೊತ್ತಾಗದೆ, ಅಲ್ಲಿ ಇರುವ ಹಳೇ ಬಟ್ಟೆಯನ್ನು ಹಾಕಿಕೊಂಡಳು ಹಸಿವು ಆಗುತ್ತಿತ್ತು ಯಾರನ್ನೂ ಕೇಳುವಂಗಿಲ್ಲ, ಮನೆಗೆ ಹೋಗುವಂಗಿಲ್ಲ, ಹೆಂಗೋ ರಾತ್ರಿ ಕಳೆದಾಯಿತು. ಏನೋ ಒಳಗೆ ಕಚ್ಚಿದಂಗೆ ಆಗಿದಂಗೆ ಅನಿಸಿದರು, ಆಗಾಗ ಹೊಟ್ಟೆ ನೋವು ಬಂದರೂ ಏನೋ ಎಂದು ರಾಥ್ರಿ ಕಳೆದಾಗಿತ್ತು. ಬೆಳಿಗ್ಗೆ ಎದ್ದು ನಿದ್ದೆಗಣ್ಣಲ್ಲಿ ಮುಖ ತೊಳಿಬೇಕು ಎಂದು ಕಾಲಿಡುತ್ತಲೇ ಏನೋ ಉರಿ ಬಂತು ನೋಡಿದ ತಕ್ಷಣ ಅಲ್ಲೇ ಹಾವೂ ಸುಳಿದಾಡಿಕೊಂಡು ಮೆಲ್ಲಗೆ ಪೊದೆಯೊಳಗೆ ಹೋಗಿ ಸೇರಿಕೊಂಡಿತು. ಅದನ್ನು ನೋಡಿದ ತಕ್ಷಣ ಜೋರಾಗಿ ಕಿರುಚಿದಳು ಅವಳ ಧ್ವನಿ ಕೇಳಿಸಕೊಂಡು ಊರಿನ ಬಯಲಿಗೆ ಹೋಗೊ ದಾರಿಹೋಕರು, ಬಂದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು, ವಿಷ ಎಲ್ಲಾ ತೆಗೆದು ಬದುಕಿಸಿದರು. ಆದರೆ ಎಚ್ಚರವಾದ ತಕ್ಷಣ ನಮ್ಮ ಅಮ್ಮನ ಮಾತು ಕೇಳಿ, ಬದುಕಿದ್ದು ಪ್ರಯೋಜನ ಇಲ್ಲವೆಂದನಿಸಿತು. ಯಾಕೆಂದರೆ, ಆ ಬಟ್ಟೆಯಲ್ಲಿ ಚಿಕ್ಕ ಹುಳ ಇತ್ತಂತೆ ಅದು ನನ್ನ ಯೋನಿ ಭಾಗದ ಒಳ ಹೋಗಿ ಅಲ್ಲಿ ಏನೋ ಆಗಿ ್ನಗರ್ಭಕೊಶವನ್ನು ತೆಗೆದುಬಿಟ್ಟರು. ಆ ನತ ದೃಷ್ಟೇ ಬೇರೆ ಯಾರೂ ಅಲ್ಲಮ್ಮ ನಾನೇ ಎಂದು ಅಜ್ಜಿ ಹೇಳಿಬಿಡೋದಾ!
ಹಾಗಾದರೆ ಈ ಮೊಮ್ಮಗಳು ಯಾರು?
ಅವಳು ನನ್ನ ತಂಗಿ ಮೊಮ್ಮಗಳಮ್ಮ. ಎಂದು ಕಣ್ಣಿರು ಒರೆಸಿಕೊಳ್ಳುತ್ತಾ, ನನಗೆ ಮದುವೇನೆ ಆಗಲಿಲ್ಲ. ಅದಕ್ಕೆ ಅಪ್ಪ ಅಮ್ಮ ಸತ್ತ ಮೇಲೆ ಒಬ್ಬಳೇ ಬದುಕುತ್ತಿದ್ದೇನೆ. ಇಂತಹ ಪದ್ದತಿಗಳನ್ನ ಯಾರು ಮಾಡಿದರು? ಯಾಕೆ ಮಾಡಿದರು ? ಈಗಲೂ ಪ್ರಶ್ನೆ ಕಣಮ್ಮ. ಈಗ ನನ್ನ ಜೀವನಕ್ಕೆ ಯಾರು ಜವಬ್ಧಾರಾರು?
ಅದಕ್ಕೆ ನನಗೆ ಆದಂಗೆ ನನ್ನ ಮಗಳಿಗೆ ಆಗಬಾರದೆಂದು ಅವಳಿಗೆ ಒಳ್ಳೆ ಊಟವನ್ನು ಕೊಡಬೇಕು, ಅವಳನ್ನ ಈ ಸಮಯದಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು, ಅವಳಿಗೇನೆ ಆದರೂ ನನ್ನ ಹತ್ತಿರ ಹೇಳಿಕೊ ಅಂತ ಹೇಳಿದೀನಿ. ಮನೆಯಲ್ಲಿ ಇಟ್ಟುಕೊಂಡಿದೀನಿ ಅದಕ್ಕೆ ನಮ್ಮ ಕುಲದವರಿಗೆಲ್ಲಾ ಕ್ವಾಪ ಬಂದೈತೆ. ಬರಲಿ ಬಿಡು, ನನ್ನ ಜೀವನ ಹಿಂಗೆ ಆಗೈತೆ ಅಲ್ಲ ಯಾರಾದರೂ ಬಂದು ನೋಡ್ತರಾ?
ಮನೆಯಲ್ಲಿ ಏನು ಇರಲಿಲ್ಲ, ಅದಕ್ಕೆ ಸಂತೆಗೆ ಬಂದರೆ, ನೋಡು ಇಷ್ಟು ಬೆಲೆ ಹಡೆಚ್ಚಾಗಿದೆ ಹಿಂಗಾದರೆ ನಮ್ಮಂತವರು ಹೆಂಗೆ ಬದುಕೋದವ್ವ ಎಂದು ಕಣ್ಣೀರು ಒರೆಸಿಕೊಳ್ಳುತ್ತಾ ಹೋದರು.
ಈ ತರದ್ದು ವಿಷಯಗಳ ಸಮಸ್ಯೆಯನ್ನು ಪ್ರತಿ ಹೆಣ್ಣುಮಕ್ಕಳು ಬಹಳಷ್ಟು ಅನುಭವಿಸುತ್ತಿದ್ದಾರೆ, ಜೊತೆಗೆ ಅವಮಾನಗಳು ಅನುಭವಿಸುತ್ತಿದ್ದಾರೆ. ಯಾಕೆ ಇಷ್ಟು ಅವಮಾನಗಳು? ನೋವುಗಳು ? ಬರೀ ಹೆಣ್ಣುಮಕ್ಕಳಿಗೇ ಯಾಕೆ ಇದಾವೆ ಈ ಕಟ್ಟುಪಾಡುಗಳು? ಎಂದು ನಮ್ಮೊಳಗೇ ನಾವು ಪ್ರಶ್ನೆಗಳನ್ನು ಹಾಕಿಕೊಂಡರೆ, ಬ್ರಹ್ಮಾಂಡದಷ್ಟು ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಯಾಕೆಂದರೆ, ನಾವು ಊರುಗಳಲ್ಲಿ, ಇದರ ಬಗ್ಗೆ ನಾವೆಷ್ಟು ಮಾತನಾಡುತ್ತೇವೆ? ಎಲ್ಲೂ ಬೇಡ ನಮ್ಮ ನಮ್ಮ ಮನೆಗಳಲ್ಲಿ ಇಡೀ ಕುಟುಂಬ ಕೂತುಕೊಂಡು ಇದರ ಬಗ್ಗೆ ಮಾತನಾಡುತ್ತೇವೆಯಾ? ಇಲ್ಲ. ನಾವು ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲದಕ್ಕೂ ಹಿಂಜರಿಕೆಗಳ ನಡುವಿನಲ್ಲಿ ಸಿಲುಕಿ, ಅವಳ ಯಾವ ಮಾತುಕತೆಗೂ ನೀವು ನಿಲುಕದಂತೆ ಈ ವ್ಯವಸ್ಥೆ ನಮ್ಮನ್ನ ಕಟ್ಟಿಹಾಕಿದೆ. ಅವಳ ಮನದಲ್ಲಾಗುವ ಗೊಂದಲ, ಪ್ರಶ್ನೆ, ಗಾಬರಿ, ಭಯ, ಅಳು, ನೋವು, ಒತ್ತಡ, ಎಲ್ಲವೂ ಅವಳೊಳಗೆ ದೊಟ್ಟ ಸಮಸ್ಯೆಗಳಾಗಿ ಮಾರ್ಪಾಡುತ್ತಾ ಹೋಗುತ್ತಿರುತ್ತದೆ.
ಮೇಲೆ ಹೇಳಿದ ಕತೆ ಬರೀ ಒಂದು ಅಜ್ಜಿದು. ಇವೆಲ್ಲಾ ಅಜ್ಜಿ ಕತೆಗಳಲ್ಲಿ ಮಾತ್ರ ಇರಬಹುದು ಅಂತ ನೀವು ಯೋಚಿಸಿದರೆ, ಮತ್ತೆ ನಾವು ಮುರ್ಖತನದಲ್ಲಿ ಮುಂದುವರೆಯುತ್ತಿದ್ದೇವೆ ಎಂದೇ ಅರ್ಥ. ಈಗಿನ ಕಾಲದಲ್ಲಿ ಬದುಕುತ್ತಿರುವ ಹದಿ ಹರೆಯದ ಮಹಿಳೆಯರು ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಈಗಿನ ಮಕ್ಕಳು ಎಷ್ಟೋ ಜನ ಅವರು ಮುಟ್ಟು ಆಗಿರುವುದನ್ನ ಮನೆಯಲ್ಲಿ ಬೇಗ ಯಾರಲ್ಲಿಯೂ ಹೇಳಿಕೊಳ್ಳುತ್ತಿಲ್ಲ ಯಾಕೆಂದರೆ, ಅವರಿಗೆ ಭಯ ಇದೆ, ನಮ್ಮನ್ನ ಶಾಂಲೆಯಿಂದ ಬಿಡಿಸುತ್ತಾರೆ, ಆಟ ಆಡೋಕೆ ಬಿಡೋಲ್ಲ, ಬೇಗ ಮದುವೆ ಮಾಡುತ್ತಾರೆ ಎಂದು ಯೋಚಿಸಿ, ಅವರಿಗೆ ತಿಳಿಯದ ಹಾಗೆ ಅದನ್ನ ಬ್ಯಾಲೆನ್ಸ್ ಮಾಡುತ್ತಾ ಬಂದಿರುವುದರಿಂದ ಇಂದೂ ಆ ಮಹಿಳೆಯರ ಆರೋಗ್ಯದ ಪರಿಸ್ಥಿತಿ, ಬಹಳ ಕೆಟ್ಟ ಮಟ್ಟದಲ್ಲಿ ಇದೆ. ಇದರ ಪರಿಣಾಮ ಎಷ್ಟಿದೆ ಎಂದರೆ, ಅªರ ಗರ್ಭಕೋಶವನ್ನು ತೆಗೆಯುವಂತದ್ದು, ಗರ್ಭತುದಿಯ ಕ್ಯಾನ್ಸರ್ ಬರುವ ಸಾಧ್ಯತೆಗಳ ಜೊತೆಗೆ ಬೇಗ ಮದುವೆ ಆಗುವುದರಿಂದ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹೆಚ್ಚಿನ ರೀತಿಯಲ್ಲಿ ಪರಿಣಾಮವನ್ನು ಅನುಭವಿಸುತ್ತಿದ್ದಾರೆ.
ಹಾಗಾಗಿ, ವಿಶ್ವಸಂಸ್ಥೆಯು ಒಂದು ಹೆಚ್ಚೆ ಮುಂದೆ ಹೋಗಿ, ಮುಟ್ಟು ನಮಗೆ ಕೀಳರಿಮೆ ಅಲ್ಲ ಹೆಮ್ಮೆ ಪಡುವಂತಹ ವಿಷಯ ಎಂಬ ವಿಷಯವನ್ನು ಸಾರುವುದರ ಮೂಲಕ, 2014 ರಲಿ “ಮೇ 28ಕ್ಕೆ ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ” ಎಂಬ ಘೋಷವಾಕ್ಯವನ್ನು ಹೇಳಿರುತ್ತದೆ. ಹಾಗಾಗಿ ದಿಟ್ಟ ದನಿಯನ್ನು ಎತ್ತುವ ಕಾಲ ಈಗ ಬಂದಾಗಿದೆ. ಈ ಆಚರಣೆಯನ್ನು ಮಾಡಲು ಯಾವುದೇ ಮುಜುಗರ ಬೇಡ ನಮಗೆ. ಯಾಕೆಂದರೆ, ತಾಯಂದಿರ ದಿನಾಚರಣೆ, ಅಪ್ಪಂದಿರ ದಿನಾಚರಣೆ, ಮಕ್ಕಳ ದಿನಾಚರಣೆ, ಮಹಿಳಾ ದಿನಾಚರಣೆ, ಶಿಕ್ಷಕರ ದಿನಾಚರಣೆ ಹೀಗೆ ಏನೆಲ್ಲಾ ಆಚರಣೆಗಳನ್ನು ಆಚರಿಸುತ್ತೇವೆ. ಅದರ ಜೊತೆಗೆ ಈ ಆಚರಣೆ ನಮ್ಮ ಹುಟ್ಟಿಗೆ ಕಾರಣವಾದ ಈ ಮುಟ್ಟು ನಮ್ಮ ಸೃಷ್ಟಿಯ ಗುಟ್ಟು. ಬನ್ನಿ ನಾವು ಈ ಆಚರಣೆಯನ್ನು 28ಕ್ಕೆ ಆನೆಕಲ್ ಬಳಿಯ ಬಂಡಾಪುರದ ಹಳ್ಳಿಯ ಮಹಿಳೆಯರ ಜೊತೆ ಆಚರಿಸುತ್ತೇದ್ದೇವೆ. ಇದಕ್ಕೆ ಸಹಕರಿಸುತ್ತಿರುವವರು ಚಂದಾಪುರದ ವಿಜಯ ರಾಮ್ ಅವರು ಮತ್ತು ಅವರ ಬಳಗ, ಹಾಗೂ ಸುಖಿಭವ ಸಂಸ್ಥೆಯ ಬಳಗ. ನೀವು ಜೋತೆಯಾದರೆ ಈ ಆಚರಣೆಗೆ ಒಂದು ಮಹತ್ವ ಬಂದಂತಾಗುತ್ತದೆ. ಹೆಚ್ಚಾಗಿ ಈ ಆಚರಣೆಯನ್ನು ಯಾವುದೇ ಮುಜುಗರವಿಲ್ಲದೆ ಆಚರಿಸಲು ಜಾಗೃತಿ ಮೂಡಿಸುವಂತಹ ಒಂದು ಒಳ್ಳೆಯ ವಾತಾವರಣ ನಿರ್ಮಿಸಿದಂತಾಗುತ್ತದೆ.
-ಜ್ಯೋತಿ ಹಿಟ್ನಾಳ್