ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸಾಲ ಸೌಲಭ್ಯ : ಹೆಚ್ಚುವರಿ ಅರ್ಜಿ ಆಹ್ವಾನ


ಕೊಪ್ಪಳ ಅ. ೧೬ :  ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕೊಪ್ಪಳ ವತಿಯಿಂದ ಪ್ರಸಕ್ತ ಸಾಲಿನ ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (ಸಿಎಂಇಜಿಪಿ) ಅಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಹೆಚ್ಚುವರಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರವು ಗ್ರಾಮೀಣ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (ಸಿಎಂಇಜಿಪಿ) ನ್ನು ೨೦೧೫ ನೇ ವರ್ಷದಿಂದ ಜಾರಿಗೆ ತಂದಿದ್ದು, ಪ್ರಸಕ್ತ ಸಾಲಿಗೆ ಮುಂದುವರಿಸಿದೆ. ಈ ಯೋಜನೆಯ ಗರಿಷ್ಠ ವೆಚ್ಚ ೧೦.೦೦ ಲಕ್ಷ ರೂ ಗಳು, ಉತ್ಪಾದನೆ ಮತ್ತು ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳು ನೀಡುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.೨೫% (ಗರಿಷ್ಠ ಮೊತ್ತ ರೂ. ೨.೫೦ ಲಕ್ಷ ಮಾತ್ರ) ಮತ್ತು ವಿಶೇಷ ವರ್ಗದ (ಪ.ಜಾತಿ, ಪ.ಪಂಗಡ, ಹಿಂದುಳಿದವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿಸೈನಿಕ, ಮಹಿಳೆ) ಫಲಾನುಭವಿಗಳಿಗೆ ಶೇ.೩೫% (ಗರಿಷ್ಠ ಮೊತ್ತ ರೂ.೩.೫೦ ಲಕ್ಷ) ಸಹಾಯಧನ ಸೌಲಭ್ಯ ಇರುತ್ತದೆ.
ಉದ್ದಿಮೆಯನ್ನು ಪ್ರಾರಂಭ ಮಾಡಲು ಸಾಮಾನ್ಯ ವರ್ಗದವರು ಯೋಜನಾ ವೆಚ್ಚದ ಶೇ.೧೦ ರಷ್ಟು ಮತ್ತು ವಿಶೇಷ ವರ್ಗದವರು ಶೇ.೦೫ ರಷ್ಟು ಸ್ವಂತ ಬಂಡವಾಳ ಹೂಡಬೇಕಾಗುತ್ತದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಫಲಾನುಭವಿಗೆ ೨೧ ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ೩೫ ವರ್ಷ, ವಿಶೇಷ ವರ್ಗದವರಿಗೆ (ಎಸ್.ಸಿ., ಎಸ್.ಟಿ., ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿಸೈನಿಕರು ಮತ್ತು ಮಹಿಳೆಯರು) ಗರಿಷ್ಠ ೪೫ ವರ್ಷ. ಯೋಜನೆಯು ಹೊಸದಾಗಿ ಪ್ರಾರಂಭಿಸುವ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ. ಅಭ್ಯರ್ಥಿಯು ವಿದ್ಯಾರ್ಹತೆ ೮ ನೇ ತರಗತಿ ಪಾಸಾಗಿರಬೇಕು ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಹೊಂದಿರಬೇಕು. ಈ ಯೋಜನೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ನವೆಂಬರ್. ೧೩ ಕೊನೆಯ ದಿನವಾಗಿದ್ದು, ರಾಜ್ಯ ಖಾದಿ ಮಂಡಳಿ ಮುಖಾಂತರ ಈ ಯೋಜನೆಯ ಸೌಲಭ್ಯ ಪಡೆಯಲು ಅಪೇಕ್ಷಿಸುವ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ http://cmegp.kar.nic.in  ನಲ್ಲಿ “ಕೆ.ವಿ.ಐ.ಬಿ. ಎಜೆನ್ಸಿ” ನಮೂದಿಸಿ ಅರ್ಜಿ ಸಲ್ಲಿಸಿ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ ಕೊಪ್ಪಳ ರವರಿಗೆ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲಾತಿಗಳ ಯಥಾ ಪ್ರತಿಯೊಂದಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೫೩೯-೨೩೧೪೭೩, ೯೪೮೦೮೨೫೬೩೧ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error