ಮುಖ್ಯಮಂತ್ರಿ ಸ್ವಾಗತಕ್ಕೆ ಕೊಪ್ಪಳ ಸಜ್ಜು

: ಸಿಂಗಾರಗೊಂಡ ಬೃಹತ್ ವೇದಿಕೆ

A : ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಅಲ್ಲದೆ ಜನಪರ ಯೋಜನೆಗಳ ಫಲಾನುಭವಿಗಳ ಸಮಾವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಸೆ. 22 ರಂದು ಕೊಪ್ಪಳಕ್ಕೆ ಆಗಮಿಸಲಿದ್ದು, ಸಮಾರಂಭಕ್ಕಾಗಿ ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೃಹತ್ ಮೈದಾನದಲ್ಲಿ ವೇದಿಕೆ ಸಜ್ಜುಗೊಂಡಿದೆ.
ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕೊಪ್ಪಳ ಜಿಲ್ಲೆ ಸಜ್ಜುಗೊಂಡಿದ್ದು, ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೃಹತ್ ಮೈದಾನದಲ್ಲಿ ವೇದಿಕೆ ನಿರ್ಮಾಣಗೊಂಡಿದೆ. ಸಮಾರಂಭಕ್ಕೆ ಸುಮಾರು 01 ಲಕ್ಷ ಫಲಾನುಭವಿಗಳು ಹಾಗೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು, ಸಮಾರಂಭಕ್ಕಾಗಿ 700 ಅಡಿ ಉದ್ದ ಹಾಗೂ 400 ಅಡಿ ಅಗಲದ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.ವೇದಿಕೆ ನಿರ್ಮಾಣದ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆಯ ಪರಿಶೀಲನೆಯನ್ನು ಗುರುವಾರದಂದು ಬೆಳಿಗ್ಗೆ ನಡೆಸಿದರು. ವೇದಿಕೆಯ ವ್ಯವಸ್ಥೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಮಂತ್ರಿಗಳು, ಸಾರ್ವಜನಿಕರ ಆಸನ ವ್ಯವಸ್ಥೇ, ಗಣ್ಯರ ಗ್ಯಾಲರಿ, ಮಾಧ್ಯಮ ಗ್ಯಾಲರಿ ಹಾಗೂ ವೇದಿಕೆಯ ನಿರ್ವಹಣೆ ಅಲ್ಲದೆ ಸಾರ್ವಜನಿಕರ ಊಟದ ವ್ಯವಸ್ಥೆಗಾಗಿ ಕೈಗೊಂಡಿರುವ ಕೌಂಟರ್‍ಗಳು ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ವೇದಿಕೆ ನಿರ್ಮಾಣ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ. 22 ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮಾರಂಭದಲ್ಲಿ ಸುಮಾರು 01 ಲಕ್ಷ ಜನ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವರು. ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಕ್ರಮಗಳನ್ನು ಈಗಾಗಲೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಊಟದ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಾವಕಾಶವಾಗಿ ಊಟದ ಕೌಂಟರ್‍ಗೆ ತೆರಳಿ, ಭೋಜನವನ್ನು ಸವಿಯಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಊಟ ಪೂರೈಸುವ ಗುತ್ತಿಗೆದಾರರಿಗೇ ವಹಿಸಲಾಗಿದ್ದು, ಇದರ ಜೊತೆಗೆ ನಗರಸಭೆಯಿಂದ ನೀರಿನ ಟ್ಯಾಂಕರ್‍ಗಳು, ಬೋರ್‍ವೆಲ್ ನೀರು ಹಾಗೂ ಹೈ-ಕ ಅಭಿವೃದ್ಧಿ ಮಂಡಳಿ ಒದಗಿಸಿರುವ ಸುಮಾರು 13 ಟ್ಯಾಂಕರ್‍ಗಳನ್ನೂ ಸಹ ಬಳಸಲಾಗುತ್ತಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪೊಲೀಸ್ ಬಂದೋಬಸ್ತ್ : ಸಮಾರಂಭದಲ್ಲಿ ಸುಮಾರು ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸ್ಥಳದಲ್ಲಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ, ಜನರಿಗೆ ಯಾವುದೇ ಗೊಂದಲ ಉಂಟಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು. ವಾಹನ ಸಂಚಾರ ದಟ್ಟಣೆಯಾಗಿ ಟ್ರಾಫಿಕ್‍ಜಾಮ್ ಆಗದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳ ಸಮಾರಂಭವಾಗಿರುವುದರಿಂದ, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು. ಇದಕ್ಕಾಗಿ ಸುಮಾರು 1500 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಗೃಹರಕ್ಷಕ ದಳ, ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ತಿಳಿಸಿದರು.
ಸಮಾರಂಭ ವೇದಿಕೆ ವ್ಯವಸ್ಥೆ : ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, ವೇದಿಕೆಯೇ 100 ಅಡಿ ಅಗಲ ಹಾಗೂ 60 ಅಡಿ ಉದ್ದ ಹೊಂದಿದ್ದು, 24 ಅಡಿ ಎತ್ತರ ಹೊಂದಿದೆ. ವೇದಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಗಣ್ಯರು ಆಸೀನರಾಗುವ ವೇದಿಕೆ 40 ಅಡಿ ಉದ್ದ, ಹಾಗೂ ರೂಪಕಗಳ ಪ್ರದರ್ಶನಕ್ಕೆ 20 ಅಡಿ ಉದ್ದದ ವೇದಿಕೆಯನ್ನು ಮೇಲೆ ಹಾಗೂ ಕೆಳಗಿನ ಹಂತದಲ್ಲಿ ನಿರ್ಮಿಸಲಾಗಿದೆ. ವೇದಿಕೆಗೆ 12 ಅಡಿ ಎತ್ತರ ಹಾಗೂ 80 ಅಡಿ ಅಗಲದ ಎಲ್‍ಇಡಿ ವಾಲ್ ಅನ್ನು ಅಳವಡಿಸಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ದೃಶ್ಯಗಳನ್ನು ಇದರಲ್ಲಿ ಪ್ರದರ್ಶಿಸಲಾಗುವುದು. 700 ಅಡಿ ಉದ್ದ ಹಾಗೂ 400 ಅಡಿ ಅಗಲದ ಬೃಹತ್ ಪೆಂಡಾಲ್ ಅನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಸುಮಾರು 70 ಸಾವಿರದಷ್ಟು ಆಸನಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ಅದರ ಜೊತೆಗೆ ಸುಮರು 2500 ದಷ್ಟು ಗಣ್ಯರಿಗೆ ಆಸನ ವ್ಯವಸ್ಥೆ, ಮಾಧ್ಯಮದವರಿಗಾಗಿ ಪ್ರತ್ಯೇಕ ಗ್ಯಾಲರಿ ನಿರ್ಮಿಸಲಾಗಿದೆ. ಸಮಾರಂಭಕ್ಕೆ ವಿದ್ಯುತ್ ವ್ಯವಸ್ಥೆಗಾಗಿ ಒಟ್ಟು 05 ಜನರೇಟರ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ 125 ಕೆ.ವಿ. ಸಾಮಥ್ರ್ಯದ 03 ಹಾಗೂ 62 ಕೆ.ವಿ. ಸಾಮಥ್ರ್ಯದ 02 ಬೃಹತ್ ಜನರೇಟರ್‍ಗಳನ್ನು ಬಳಸಲಾಗುತ್ತಿದೆ. ವೇದಿಕೆ ನಿರ್ಮಾಣಕ್ಕಾಗಿ ಬೆಂಗಳೂರು, ಹುಬ್ಬಳ್ಳಿ ಅಲ್ಲದೆ ಸ್ಥಳೀಯರು ಕೂಡ ಕೈಜೋಡಿಸಿದ್ದಾರೆ.
ಕೊಪ್ಪಳ ನಗರ ಸಜ್ಜು : ಸೆ. 22 ರಂದು ಕೊಪ್ಪಳದಲ್ಲಿ ಜರುಗುವ ಸಮಾರಂಭಕ್ಕಾಗಿ ಇಡೀ ನಗರ ಸಿಂಗಾರಗೊಂಡಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವರು, ಶಾಸಕರುಗಳು, ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕೊಪ್ಪಳ ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಾಳಾಗಿದ್ದ ರಸ್ತೆಗಳ ದುರಸ್ತಿ ಕಾರ್ಯವೂ ಕೂಡ ಭರದಿಂದ ಸಾಗಿದೆ. ಅಲ್ಲದೆ ಸ್ವಚ್ಛತಾ ಕಾರ್ಯಕ್ಕೆ ನಗರಸಭೆಯ ಸಿಬ್ಬಂದಿಗಳು ಶ್ರಮ ವಹಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿವೈಎಸ್‍ಪಿಗಳಾದ ಶ್ರೀಕಾಂತ್ ಕಟ್ಟಿಮನಿ, ಸಂದಿಗವಾಡ ಸೇರಿದಂತೆ ಹಲವು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error