fbpx

ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆ : ಜೀವ ಉಳಿಸಿದವರಿಗೆ ಜೀವ ರಕ್ಷಕ ಪ್ರಶಸ್ತಿ

ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸೂಕ್ತ ಸಹಾಯ ಹಾಗೂ ತಕ್ಷಣ ಚಿಕಿತ್ಸೆ ಲಭ್ಯವಾದರೆ ಸಾಕು, ಬಹಳಷ್ಟು ಪ್ರಾಣಗಳನ್ನು ಉಳಿಸಿಕೊಳ್ಳಬಹುದು. ಅಪಘಾತ ಸಂದರ್ಭದಲ್ಲಿ ಮಾನವೀಯತೆ ಮೆರೆದು, ಅಪಘಾತಕ್ಕೊಳಗಾದವರಿಗೆ ನೆರವು ನೀಡಿ, ಚಿಕಿತ್ಸೆ ದೊರಕಿಸಲು ಕಾರಣರಾದ ಮಹನೀಯರನ್ನು ಗುರುತಿಸಿ, ಅಂತಹವರಿಗೆ ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆಯಡಿ ಜೀವ ರಕ್ಷಕ ಪ್ರಶಸ್ತಿಯನ್ನು ಸರ್ಕಾರ ಜಿಲ್ಲಾ ಮಟ್ಟದಲ್ಲಿ ನೀಡಿ ಗೌರವಿಸುತ್ತಿದೆ.
ಕಳೆದ ೨೦೧೬ ರ ಫೆಬ್ರವರಿ ೧೬ ರಂದು ಬೆಂಗಳೂರಿನ ನೆಲಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾಗಿ ಸಾವು ಬದುಕಿನ ಹೋರಾಟದಲ್ಲಿದ್ದರೂ, ತನ್ನ ಕಣ್ಣು ಮತ್ತು ಇತರ ಅಂಗಾಂಗಗಳನ್ನು ಹರೀಶ್ ದಾನ ಮಾಡಿ, ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರಿಂದ ಸರ್ಕಾರ ಈ ಯೋಜನೆಗೆ ಹರೀಶ್ ಹೆಸರಿಡುವ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ.
ರಾಜ್ಯದ ವ್ಯಾಪ್ತಿಯೊಳಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುವ ಗಾಯಾಳುಗಳಿಗೆ ಅವರ ಪೂರ್ವಾಪರ ವಿಚಾರಿಸದೆ ತುರ್ತಾಗಿ ನಗದು ರಹಿತ ಉನ್ನತ ಗುಣಮಟ್ಟದ ಉಚಿತ ವೈಧ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಕ್ಕೆ ತಂದಿರುವ ಯೋಜನೆ ಇದಾಗಿದೆ. ಯಾವುದೇ ವ್ಯಕ್ತಿ ಅಪಘಾತ ಸಂದರ್ಭದಲ್ಲಿ ತುರ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬೇಕು, ಅಪಘಾತಕ್ಕೀಡಾದ ವ್ಯಕ್ತಿಗೆ ಸರ್ಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎನ್ನುವ ಆಶಯದೊಂದಿಗೆ ಸರ್ಕಾರ ಮುಖ್ಯಮಂತ್ರಿ ಸಾಂತ್ವನ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದೆ. ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಅಥವಾ ಉಳಿಸಲು ಮೊದಲ ೪೮ ಗಂಟೆಗಳ ಅವಧಿಗೆ ೨೫ ಸಾವಿರ ರೂ. ಗಳವರೆಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಾರೆ ಅಪಘಾತದ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿದ್ದು, ಸಾರ್ವಜನಿಕರು ಇಂತಹ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವುದು. ಆಂಬುಲೆನ್ಸ್ ಸೇವೆ ಬಳಸಲು ನೆರವಾಗುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ.
ಈ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸುವ ನಾಗರಿಕರಿಗೆ ಜೀವ ರಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಶಸ್ತಿಗಾಗಿ ಒಟ್ಟು ೮ ಅರ್ಜಿಗಳು ಸ್ವೀಕೃತಗೊಂಡಿದ್ದವು. ಇವುಗಳಲ್ಲಿ ಪರೋಪಕಾರ ಹಾಗೂ ಅದರಿಂದ ಗಾಯಾಳುವಿಗಾದ ಸಹಾಯವನ್ನು ಆಧರಿಸಿ, ಕೊಪ್ಪಳ ತಾಲೂಕು ಹಲಗೇರಿಯ ವೀರಭದ್ರಪ್ಪ ಶ್ಯಾನಭೋಗರ, ಗಂಗಾವತಿ ತಾಲೂಕು ಜಬ್ಬಲಗುಡ್ಡದ ಮಾರುತಿ ಯಲ್ಲಪ್ಪ, ಹಾಗೂ ಹೊಸಳ್ಳಿ ಕ್ಯಾಂಪ್‌ನ ರಮೇಶ ನಾಯಕ, ಈ ಮೂರು ಜನರನ್ನು ಜೀವ ರಕ್ಷಕ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಸಮಿತಿಯು ಆಯ್ಕೆ ಮಾಡಿ, ಪ್ರಶಸ್ತಿ ಪ್ರದಾನವನ್ನು ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರ ಪರೋಪಕಾರ ಃ
ಪ್ರಕರಣ-೧ : ಕೊಪ್ಪಳ ತಾಲೂಕಿನ ಹಲಗೇರಿ ಬಳಿ ೨೦೧೭ರ ಮೇ.೧ ರಂದು ಬೆಂಗಳೂರಿನಿಂದ ಕೊಪ್ಪಳ ಮಾರ್ಗವಾಗಿ ಮುಂಡರಗಿ ಹೋಗಬೇಕಿದ್ದ ಖಾಸಗಿ ಗ್ರೀನ್ ಲೈನ್ ಬಸ್ಸಿಗೆ ಹಿಂದಿನ ಇಂಡಿಕೇಟರಿನಲ್ಲಿ ಬೆಂಕಿ ತಗುಲಿದ್ದನ್ನು ನೋಡಿದ ಹಲಗೇರಿ ಗ್ರಾಮದ ದೈಹಿಕ ಶಿಕ್ಷಕ ವೀರಭದ್ರಪ್ಪ ಶ್ಯಾನಭೋಗರ ಅವರು ಹಿಂದಿನಿಂದ ಕೂಗುತ್ತಾ ಓಡಿ ಹೋಗಿ, ಬಸ್ ನಿಲ್ಲಿಸಿ, ಬಸ್ಸ್‌ನಲ್ಲಿ ನಿದ್ರಾವಸ್ಥೆಯಲ್ಲಿರುವ ೮ ಜನ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದರು. ಬಸ್ಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ವೀರಭದ್ರಪ್ಪ ನವರ ಸಮಯಪ್ರಜ್ಞೆ ಹಾಗೂ ಪರೋಪಕಾರಿ ಮನೋಭಾವದಿಂದಾಗಿ ೦೮ ಜನರ ಪ್ರಾಣ ಉಳಿಯಲು ಸಾಧ್ಯವಾಯಿತು.
ಪ್ರಕರಣ-೨ : ಕೊಪ್ಪಳದಿಂದ ಗಂಗಾವತಿಗೆ ಹೋಗುವ ಹೆದ್ದಾರಿಯ ಅಮರೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ೨೦೧೭ರ ಜೂ.೨೦ ರಂದು ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದವರನ್ನು ನೋಡಿದ ಮಾರುತಿ ಯಲ್ಲಪ್ಪ ಎನ್ನುವವರು ತನ್ನ ಸ್ವಂತ ಟಾಟಾ ಮ್ಯಾಜಿಕ್ ವಾಹನದಲ್ಲಿ ಗಾಯಾಳುಗಳನ್ನು ಹಾಕಿಕೊಂಡು ಹೋಗಿ ಗಂಗಾವತಿಯ ಸರಕಾರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರೆದಿದ್ದರು. ಇಬ್ಬರ ಜೀವ ಉಳಿಸುವಲ್ಲಿ ಮಾರುತಿಯವರು ಮಹತ್ವದ ಪಾತ್ರ ವಹಿಸಿದ್ದರು. ಇವರ ಮಾನವೀಯತೆ ಜನರ ಪ್ರಶಂಸೆಗೆ ಪಾತ್ರವಾಯಿತು.
ಪ್ರಕರಣ-೩ : ಗಂಗಾವತಿ ತಾಲೂಕಿನ ಹೊಸಳ್ಳಿಯ ಕಂಪ್ಲಿ ಕ್ರಾಸ್ ಬಳಿ ೨೦೧೭ರ ಮಾ.೧೪ ರಂದು ಟಾಟಾ ಎಸ್ ಮತ್ತು ತಳ್ಳುವ ಗಾಡಿಯ ನಡುವೆ ಅಪಘಾತವಾಗಿ ಟಾಟಾ ಎಸ್ ಬಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ, ಯುವಕರು ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಾಗ, ರಸ್ತೆ ಪಕ್ಕದಲ್ಲಿ ಎಳೆನೀರು ವ್ಯಾಪಾರಿಯಾಗಿದ್ದ ರಮೇಶ್ ನಾಯಕ್ ಎಂಬ ವ್ಯಕ್ತಿ ಕೂಡಲೇ ಅವರನ್ನು ಹತ್ತಿರದ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಿ ಆ ಯುವಕರ ಜೀವ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸುವುದೇ ಮೊದಲ ಆದ್ಯತೆಯಾಗಿರಬೇಕು ಎಂದು ಕಾನೂನು ಹೇಳುತ್ತದೆಯೇ ಹೊರತು, ನೆರವಾದವರಿಗೆ ತೊಂದರೆ ಕೊಡುವಂತಹ ಪರಿಸ್ಥಿತಿ ಈಗ ಇಲ್ಲ. ಅಪಘಾತದ ಗಾಯಾಳುಗಳಿಗೆ ನೆರವಾದವರನ್ನು ಸರ್ಕಾರ ಜೀವ ರಕ್ಷಕ ಪ್ರಶಸ್ತಿಯನ್ನು ನೀಡುವ ಮೂಲಕ ಇಂತಹ ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡುತ್ತಿದೆ. ಇನ್ನಾದರೂ ಯಾವುದೇ ಅಪಘಾತದ ಗಾಯಾಳುಗಳನ್ನು ಕೂಡಲೆ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎನ್ನುವುದೇ ಸರ್ಕಾರದ ಆಶಯವಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು.

Please follow and like us:
error
error: Content is protected !!