ಮೀಸಲಾತಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ

ಕೊಪ್ಪಳ ಜೂ.೬: ಕರ್ನಾಟಕ ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ನಾಯಕ ಸಮುದಾಯ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸತತವಾಗಿ ತುಳಿತಕ್ಕೆ ಒಳಗಾಗುತ್ತ ಬಂದಿರುವುದರಿಂದ, ಸಂವಿಧಾನಬದ್ಧವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಗುರುವಾರ ಪ್ರತಿಭಟನೆ ಮಾಡಲಾಯಿತು.

ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಸುಮಾರು ೬೦ ಲಕ್ಷಕ್ಕೂ ಅಧಿಕವಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ.೮ಕ್ಕಿಂತಲೂ ಅಧಿಕ ಪಾಲನ್ನು ಹೊಂದಿರುವ ಈ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಕನಿಷ್ಟ ಶೇ.೭.೫ಕ್ಕೆ ಹೆಚ್ಚಿಸಬೇಕು.
ಕೇಂದ್ರ ಸರ್ಕಾರ ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಶೇ.೭ ರಷ್ಟು ಮೀಸಲಾತಿ ನೀಡಿದೆ. ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆ ಇತರ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಶೇ.೭.೫ ರಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ದುರಂತವೆಂದರೆ ಈ ನೀತಿಯು ಇದುವರೆಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನ್ವಯವಾಗುತ್ತಿಲ್ಲ.
ರಾಜ್ಯದಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೇವಲ ಶೇ.೩ರಷ್ಟು ಮಾತ್ರ ಮೀಸಲಾತಿ ನಿಗದಿಯಾಗಿರುವುದನ್ನು ಮರು ಪರಿಷ್ಕರಣೆ ಮಾಡಬೇಕು. ಇತರೆ ಸಮಾಜಗಳನ್ನು ಎಸ್‌ಟಿಗೆ ಸೇರ್ಪಡೆ ಮಾಡಿದರೂ ಸಹ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಯೇ ಇಲ್ಲ. ಕಾಲ ಕಾಲಕ್ಕೆ ಪರಿಷ್ಕರಿಸುತ್ತ ಮಧ್ಯಪ್ರದೇಶದಲ್ಲಿ ಶೇ.೨೦ರಷ್ಟು ಹಾಗೂ ಜಾರ್ಖಂಡ್ ರಾಜ್ಯದಲ್ಲಿ ಶೇ.೨೬ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದರಂತೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಬೇಕಿದೆ ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಪ್ರತಿ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಟಿ ಕಲ್ಯಾಣ ಇಲಾಖೆಯನ್ನು ವಿಭಜಿಸಿ, ಪ್ರತ್ಯೇಕ ಕಚೇರಿ ಸ್ಥಾಪಿಸಬೇಕು. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಗಳನ್ನು ಎಲ್ಲ ಜಿಲ್ಲೆಗಳಲ್ಲಿ ಸ್ಥಾಪಿಸಬೇಕು ಹಾಗೂ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಇದರಿಂದ ನೈಜವಾಗಿ ಅನ್ಯಾಯಕ್ಕೊಳಗಾಗಿ ಶೋಷಣೆ ಅನುಭವಿಸುತ್ತಿರುವ ಸಮಾಜಕ್ಕೆ ದೊಡ್ಡ ದ್ರೋಹವಾಗುತ್ತಿದೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಮೋಗಳ್ಳಿ ಗಣೇಶ ಅವರು ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ‘ಪುಕ್ಕಟೆ ಊಟ, ವಸತಿ, ಸೌಲಭ್ಯಗಳನ್ನು ಪಡೆಯುತ್ತಿರುವ ಕಾಡುಮೃಗಗಳು’ ಎಂದು ಕರೆದು ಅವಮಾನಿಸಿದ್ದಾರೆ. ಮಾರ್ಗದರ್ಶನ ಬಯಸಿ ಬರುವ ಸಮಾಜದ ವಿದ್ಯಾರ್ಥಿಗಳಿಗೆ ನಿಂದಿಸಿ, ನೋಯಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇಂತಹ ಪ್ರಾದ್ಯಾಪಕರ ವಿರುದ್ಧ ವಿಶ್ವವಿದ್ಯಾಲಯ ಮತ್ತು ಸರ್ಕಾರ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸ್‌ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಇತರ ಸೌಲಭ್ಯಗಳು ಕಳೆದ ಹಲವು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಪಾವತಿಯಾಗದೇ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ತಕ್ಷಣ ಸರಿಪಡಿಸಬೇಕು.
ಹಾಗೂ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಹೊಂಗನಸನ್ನು ತನ್ನ ಸೋದರಳಿಯಂದಿರಾದ ಹಕ್ಕ-ಬುಕ್ಕರಲ್ಲಿ ಬಿತ್ತಿದ, ಪರನಾರಿ ಸಹೋದರ, ವೀರಪುರುಷ, ಗಂಡುಗಲಿ ಕುಮಾರರಾಮನ ಸಮಾಧಿ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದಲ್ಲಿದೆ. ಅವರ ಆರಾಧ್ಯ ದೈವ ಜಟ್ಟಂಗಿ ರಾಮೇಶ್ವರ ದೇವಸ್ಥಾನ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಅವರಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳನ್ನು ಸೇರಿಸಿ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಗಂಡುಗಲಿ ಕುಮಾರರಾಮ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಜಿಬಿ ಮಜ್ಜಗಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ, ಕೊಪ್ಪಳ ಜಿಲ್ಲಾ ವಾಲ್ಮೀಕಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ಸುರೇಶ ಡೊಣ್ಣಿ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರು, ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್, ಮಂಜುನಾಥ್ ಜಿ. ಗೊಂಡಬಾಳ, ಅನುಸೂಯಾ ವಾಲ್ಮೀಕಿ, ಮಹೇಶ ಅರಕೇರಿ, ಧರ್ಮಣ್ಣ ಹಟ್ಟಿ, ರುಕ್ಮಣ್ಣ ಶಾವಿ, ಶ್ರೀನಿವಾಸ್ ಪುಜಾರ್, ಶಂಕ್ರಪ್ಪ ನಾಯಕ, ಮಲ್ಲಪ್ಪ ಬೇಲೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Please follow and like us:
error