ಮಿಸ್ಟರ್ ಮೋದಿ, ದಲಿತರನ್ನು ಬೊಗಳುವ ನಾಯಿಗಳೆಂದ ಹೆಗಡೆಯನ್ನು ಹೊರಹಾಕುವಿರ?

ಜಿಗ್ನೇಷ್ ಮೆವಾನಿ ಪತ್ರಿಕಾ ಪ್ರಕಟಣೆ
ದಿನಾಂಕ: 22 ಜನವರಿ 2018

ಮಿಸ್ಟರ್ ಮೋದಿ, ದಲಿತರನ್ನು ಬೊಗಳುವ ನಾಯಿಗಳೆಂದ ಹೆಗಡೆಯನ್ನು ಹೊರಹಾಕುವಿರ? ನಮಗೆ ಉತ್ತರ ಬೇಕು.

ಇತ್ತೀಚೆಗೆ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ ಕರ್ನಾಟಕದ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರತದ ಸಂವಿಧಾನ, ಜಾತ್ಯಾತೀತತೆ, ಬರಹಗಾರರು, ದಲಿತರು ಮತ್ತು ಇತರ ಶೋಷಿತ ಸಮುದಾಯಗಳ ಬಗ್ಗೆ ಕಟುವಾಗಿ ಮಾತನಾಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ.

ಈ ಮಂತ್ರಿಯ ಹಲವು ಹೇಳಿಕೆಗಳ ವಿರುದ್ಧ ದಲಿತರು ಪ್ರತಿಭಟನೆ ಮಾಡಿದ್ದಕ್ಕೆ ಅವರನ್ನು “ಬೊಗಳುವ ನಾಯಿಗಳು” ಎಂದು ಅವಮಾನಿಸಿದ್ದಾರೆ. ಇದು ದಲಿತರ ಬಗ್ಗೆ ಕಾಳಜಿಯೇ ಇಲ್ಲದ ಸಂಘ ಪರಿವಾರ ಮತ್ತು ಅದರ ಕಾರ್ಯಕರ್ತರ ಬ್ರಾಹ್ಮಣಿಕೆ ಮತ್ತು ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ.

ಈ ಮಂತ್ರಿ ಹೇಳಿರುವ ಮಾತು ಈ ದೇಶದ ದಲಿತರ ಗೌರವ ಮತ್ತು ಸ್ವಾಭಿಮಾನದ ಮೇಲೆ ಮಾಡಿರುವ ಬಲವಾದ ದೌರ್ಜನ್ಯವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಪ್ರಕಾರ ಇದೊಂದು ಅಪರಾಧವಾಗಿರುವ ಕಾರಣ ಆದಷ್ಟು ಬೇಗ FIR ದಾಖಲಿಸಿ ಆತನನ್ನು ಬಂಧಿಸಬೇಕಿದೆ. ಆದಾಗ್ಯೂ ಬಿಜೆಪಿಯ ಮನುವಾದಿ ಅಜೆಂಡಾವನ್ನು ಈ ಮಂತ್ರಿ ಹೊರಹಾಕಿರುವುದು ಇದೇ ಮೊದಲಲ್ಲ.

ಕಳೆದ ತಿಂಗಳು ಕೊಪ್ಪಳದ ಸಾರ್ವಜನಿಕ ಕಾರ್ಯಕ್ರಮದಲ್ಲಿ “ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಭಾರತದ ಸಂವಿಧಾನವನ್ನು ಬದಲಾಯಿಸಲು” ಎಂದು ಹೇಳಿದ್ದ. ಅದೇ ಸಭೆಯಲ್ಲಿ ಜಾತ್ಯಾತೀತರ ಬಗ್ಗೆ “ಜಾತ್ಯಾತೀತರೆಂದರೆ ಅಪ್ಪ-ಅಮ್ಮನ ರಕ್ತದ ಪರಿಚಯವಿಲ್ಲದವರು” ಎಂದಿದ್ದಲ್ಲದೆ ಸಂವಿಧಾನ ಬದಲಾಯಿಸಿ ಜಾತ್ಯಾತೀತತೆಯನ್ನು ಹೊರದೂಡುವ ಬಗ್ಗೆ ಮಾತನಾಡಿದ್ದರು.

ತದನಂತರ ಇದರ ವಿರುದ್ಧ ಯಾವಾಗ ಕೋಲಾಹಲವೆದ್ದಿತೋ, ಬಿಜೆಪಿ ಈ ಹೇಳಿಕೆಯಿಂದ ದೂರ ಉಳಿಯುವ ಪ್ರಯತ್ನ ಮಾಡಿತು. ಅದನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ಮಾಡಿತು. ಆದರೆ ಹಲವು ಹಿರಿಯ ಬಿಜೆಪಿ ಮುಖಂಡರು ಸಂವಿಧಾನಕ್ಕೆ ಈಗಾಗಲೇ ಹಲವು ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಮರ್ಥಿಸಿಕೊಂಡರು.

ಈ ಸನ್ನಿವೇಶದಲ್ಲಿ ನೆನೆಯಬೇಕಾದ ಮತ್ತೊಂದು ಅಂಶವಿದೆ. ಕಳೆದ ತಿಂಗಳು, ತನ್ನ ಭಕ್ತಾದಿಗಳಿಗೆ ಬಹಿರಂಗವಾಗಿ ಜಾತಿ ತಾರತಮ್ಯ ಮಾಡುವ ಉಡುಪಿ ಮಠದ ಪೇಜಾವರ ಸ್ವಾಮೀಜಿ ಧರ್ಮ ಸಂಸದ್ ನಲ್ಲಿಯೂ ಇದೇ ರೀತಿಯ ಮಾತುಗಳನ್ನಾಡಿದ್ದರು. ಬಿಜೆಪಿಯ ಮನುವಾದಿ-ಕಾರ್ಪೋರೇಟಿಸ್ಟ್ ಗಳ ಅಜೆಂಡಾ ತುಂಬಾ ಸ್ಪಷ್ಟವಾಗಿದೆ. ಅವರು ಮಾಡಲು ಹೊರಟಿರುವುದೇನೆಂದರೆ, ಭಾರತದ ಸಂವಿಧಾನಕ್ಕೆ ತಿದ್ದುಪಡಿ ತಂದು ಅದರ ಸಮಾನತಾ ತತ್ವ ಜಾಗದಲ್ಲಿ ಬ್ರಾಹ್ಮಣಶಾಹಿ ಶ್ರೇಣಿಕೃತ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ತರುವುದಾಗಿದೆ. ಅನಂತಕುಮಾರ್ ಹೆಗಡೆ ಹೇಳಿಕೆಗಳು ಬಿಜೆಪಿ ಮತ್ತು ಸಂಘಪರಿವಾರದ ನೈಜ ಉದ್ದೇಶಗಳನ್ನು ಪ್ರತಿಫಲಿಸುತ್ತಿವೆ.

ಇದೇ ಮಂತ್ರಿ ಹೆಗಡೆಯೇ ತನ್ನ ಹಿಂಬಾಲಕರಿಗೆ ತನ್ನ ಸ್ವಕ್ಷೇತ್ರದಲ್ಲಿ ನಿರ್ಭಿಡೆಯಿಂದ ಮಾತನಾಡುವ, ಹಿಂದುತ್ವ ರಾಜಕಾರಣವನ್ನು ಟೀಕಿಸುವ ಮತ್ತು ಧರ್ಮಾಂದರನ್ನು ಖಂಡಿಸುವ ಚಿತ್ರನಟ ಪ್ರಕಾಶ್ ರೈ ಪಾಲ್ಗೊಂಡ ಕಾರ್ಯಕ್ರಮದ ವೇಧಿಕೆಯನ್ನು ಗೋ ಮೂತ್ರದಿಂದ ಶುದ್ಧೀಕರಿಸಲು ಉತ್ತೇಜಿಸಿದ್ದರು.

ಜನವರಿ 16 ರಂದು ಬೆಳಗಾವಿಯ ಮತ್ತೊಂದು ಸಭೆಯಲ್ಲಿ ಮಾತನಾಡುತ್ತಾ ಬರಹಗಾರರು ಮತ್ತು ಬುದ್ಧಿ ಜೀವಿಗಳನ್ನು ‘ಕೇವಲ ಸರ್ಕಾರದ ಸವಲತ್ತುಗಳನ್ನು ಅನುಭವಿಸಲು ತಮಗೆ ತಾವೇ ಬುದ್ಧಿ ಜೀವಿಗಳೆಂದು ಕರೆದುಕೊಳ್ಳುವ ಗುಂಪು’ ಎಂದು ಅವಮಾನಿಸಿದ್ದಾನೆ.

ಈ ಮೊದಲು, ಇಸ್ಲಾಂ ನಂಬಿಕೆಗಳನ್ನ ಈ ಪ್ರಪಂಚದಿಂದ ಹೊರಹಾಕಬೇಕೆಂಬ ಪ್ರಯತ್ನದಲ್ಲಿ, ಎಲ್ಲಿಯವರೆಗೆ ಈ ಭೂಮಿ ಮೇಲೆ ಇಸ್ಲಾಂ ಇರುತ್ತದೆಯೋ ಅಲ್ಲಿಯವರೆಗೆ ಈ ಪ್ರಪಂಚದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು.

ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತಿದ್ದೇನೆ, ದಲಿತರನ್ನು ನಾಯಿಗಳೆಂದ ಈತನನ್ನು ಮಂತ್ರಿ ಮಂಡಲದಿಂದ ಹೊರಹಾಕಿ.

ಭಾರತದ ಸಂವಿಧಾನವನ್ನು, ಅದು ಒಳಗೊಂಡಿರುವ ಮೌಲ್ಯಗಳನ್ನು ವಿರೋಧಿಸಿದ ಹೆಗಡೆಗೆ ಅದೇ ಮೌಲ್ಯಗಳನ್ನು ಪ್ರತಿಪಾಧಿಸುವ ಸಂವಿಧಾನದಡಿಯಲ್ಲಿ ಲೋಕಸಭಾ ಸದಸ್ಯನಾಗಿ ಮುಂದುವರೆಯಲು ಯಾವುದೇ ಹಕ್ಕಿರುವುದಿಲ್ಲ.

ದಲಿತರೇ ಆಗಿರುವ ಭಾರತ ಸಂವಿಧಾನದ ಅಗ್ರ ರಕ್ಷಕರಾಗಿರುವ ರಾಷ್ಟ್ರಪತಿಗಳು ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈ ಮಂತ್ರಿಯನ್ನು ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಳಿಸಬೇಕಾಗಿ ಒತ್ತಾಯಿಸುತ್ತೇನೆ.

ಹಾಗೂ ಚುನಾಚಣಾ ಆಯೋಗ ಈ ಮಂತ್ರಿಯ ಸಂವಿಧಾನ ವಿರೋಧಿ ನಡೆಯನ್ನು ಗಮನಿಸಿ ಲೋಕಸಭೆಯಿಂದ ಹೊರಹಾಕುವ ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಹಾಗೂ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನೋಡಿಕೊಳ್ಳಬೇಕೆಂದು ನಿರೀಕ್ಷಿಸುತ್ತೇನೆ.

ದಲಿತ ಮತ್ತು ಇತರ ಶೋಷಿತ ಸಮುದಾಯಗಳಿಗೆ ಕರೆ ನೀಡುವುದೆಂದರೆ, ದಲಿತರನ್ನು ನಾಯಿಗಳಂತೆ ಕಾಣುವ ಬಿಜೆಪಿಯನ್ನು ಮುಂಬರುವ ಕರ್ನಾಟಕದ ಚುನಾವಣೆಯಲ್ಲಿ ಸೋಲಿಸಿರಿ.

ಜಿಗ್ನೇಷ್ ಮೆವಾನಿ, ಶಾಸಕರು, ಗುಜರಾತ್

Please follow and like us:
error