ಮಿನಿ ಉದ್ಯೋಗ ಮೇಳ : ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರಿಂದ ಸ್ಥಳ ಪರಿಶೀಲನೆ

ಕೊಪ್ಪಳ ಜ. : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ, ಇವರ ಸಹಯೋಗದಲ್ಲಿ ಫೆ. 06 ಮತ್ತು 07 ರಂದು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಿಮಿತ್ಯ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಂಗಳವಾರದಂದು ಸ್ಥಳ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾತನಾಡಿ, ಉದ್ಯೋಗಾಕಾಂಕ್ಷಿಗಳು ತಾವು ಹೊಂದಿರುವ ವಿದ್ಯಾರ್ಹತೆಗೆ ಅನುಗುಣವಾಗಿ ಉತ್ತಮ ಉದ್ಯೋಗವಕಾಶ ಪಡೆಯಲು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 18 ರಿಂದ 35 ವರ್ಷದ ವಯೋಮಿತಿಯಲ್ಲಿರುವ ಅವಿದ್ಯಾವಂತರು ಮತ್ತು ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮೋ, ವಿವಿಧ ಪದವಿ, ಎಂ.ಬಿ.ಎ., ಎಂ.ಟೆಕ್., ವಿವಿಧ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪುರುಷ ಮತ್ತು ಮಹಿಳಾ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳಕ್ಕೆ ಆಗಮಿಸಲಿರುವ ಅಭ್ಯರ್ಥಿಗಳಿಗೆ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಿಂದ ಉದ್ಯೋಗ ಮೇಳ ನಡೆಯುವ ಜಿಲ್ಲಾ ಕ್ರೀಡಾಂಗಣಕ್ಕೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಸಿಟಿ ಬಸ್ಸ್‍ಗಳ ವ್ಯವಸ್ಥೆಯನ್ನು ಒದಗಿಸಬೇಕು. ಉದ್ಯೋಗಾಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಆಹಾರ ಪೂರೈಕೆಯಾಗುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನೀಡಿರುವ ಸಂಚಾರಿ ಕ್ಯಾಂಟಿನ್ ವಾಹನದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಲ್ಲದೇ ಕಾರ್ಯಕ್ರಮದ ಸ್ಥಳದಲ್ಲಿ ಇತರೆ ಹೋಟೆಲ್‍ಗಳು ಕಡಿಮೆ ದರದಲ್ಲಿ ಆಹಾರ ಒದಗಿಸುವ ಕುರಿತು ಕ್ರೀಡಾಂಗಣದ ಹೊರಗಡೆ ಅಗತ್ಯ ವ್ಯವಸ್ಥೆಯನ್ನು ಹಾಗೂ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ನಗರಸಭೆಯವರು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಪ್ರೋಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿ.ಐ. ಶಿವಾನಂದ ವಾಲಿಕಾರ, ತಹಶೀಲ್ದಾರರಾದ ಜೆ.ಬಿ. ಮಜ್ಗಿ, ರಮೇಶ ಅಳವಂಡಿಕರ್, ವಿರೇಶ ಬಿರಾದರ, ಕವಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು