ಮಾಹಿತಿ ಹಕ್ಕು ಅಧಿನಿಯಮ ಸದುಪಯೋಗವಾಗಲಿ- ಡಾ. ಸುಚೇತನ ಸ್ವರೂಪ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶದಿಂದ ಜಾರಿಗೆ ತರಲಾಗಿರುವ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಸದುಪಯೋಗವಾದಾಗ ಮಾತ್ರ ಕಾಯ್ದೆಯ ಜಾರಿಗೆ ತಂದ ಉದ್ದೇಶ ಈಡೇರಲು ಸಾಧ್ಯ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಬುಧವಾರದಂದು ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ಉತ್ತರದಾಯಿತ್ವದ ಉದ್ದೇಶದಿಂದ ಜಾರಿಗೆ ತರಲಾಗಿರುವ ಮಾಹಿತಿ ಹಕ್ಕು ಅಧಿನಿಯಮ ದೇಶದಲ್ಲಿಯೇ ಮಹತ್ವದ ಕಾಯ್ದೆಯಾಗಿದೆ. ಆದರೆ ಈ ಕಾಯ್ದೆ ಸದುಪಯೋಗವಾಗುವ ಬದಲು ದುರುಪಯೋಗವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾಹಿತಿ ಆಯೋಗವು ಕಾಯ್ದೆಯ ಅನುಷ್ಠಾನಕ್ಕೆ ಬದ್ಧವಾಗಿದ್ದು, ಉಲ್ಲಂಘನೆಯ ಪ್ರಕರಣಗಳಲ್ಲಿ ದಂಡ ಹಾಕುವುದಕ್ಕೆ ಆಯೋಗ ಆದ್ಯತೆ ನೀಡುವುದಿಲ್ಲ. ಬದಲಿಗೆ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಲುಪಿಸಲು ಹೆಚ್ಚಿನ ಆದ್ಯತೆ ನೀಡುತ್ತದೆ. ಕಾಯ್ದೆಯ ಉದ್ದೇಶವೂ ಇದೇ ಆಗಿದೆ. ದಂಡ ಹಾಕಿದ ಮಾತ್ರಕ್ಕೆ ಎಲ್ಲವೂ ಪರಿಹಾರವಾಗುವುದಿಲ್ಲ. ಅಧಿಕಾರಿಗಳು ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಅಗತ್ಯ ಮಾಹಿತಿಯನ್ನು ಒದಗಿಸುವುದಕ್ಕೆ ಆದ್ಯತೆ ನೀಡಬೇಕು. ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ಬಂದು ಹಲವು ವರ್ಷಗಳೇ ಆಗಿದ್ದರೂ, ಕಾಯ್ದೆಯ ಕುರಿತು ಅಧಿಕಾರಿಗಳಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿವೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ಆಗಿಂದಾಗ್ಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತಂತೆ ತರಬೇತಿ ಕಾರ್ಯಗಾರಗಳು ಜರುಗಬೇಕು. ಅಂದಾಗ ಮಾತ್ರ ಕಾಯ್ದೆ ಅನುಷ್ಠಾನ ಇನ್ನಷ್ಟು ಸಮರ್ಪಕವಾಗಲಿದೆ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

Please follow and like us:
error