ಮಾನಸಿಕ ರೋಗಿಗಳಿಗೆ ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕುವ ಹಕ್ಕಿದೆ : ಟಿ ಶ್ರೀನಿವಾಸ


ಕೊಪ್ಪಳ ಅ. : ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವು ಒಂದು ಮಹತ್ವದ ಕಾರ್ಯಕ್ರಮವಾಗಿದ್ದು, ಮಾನಸಿಕ ರೋಗಿಗಳಿಗೂ ಈ ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕುವ ಹಕ್ಕಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಾರ್ಯಲಯ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾನಿಲಯ ಸ್ನಾತ್ತಕೋತ್ತರ ಕೇಂದ್ರ ವಿಭಾಗ ಕೊಪ್ಪಳ ಇವರ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಕೊಪ್ಪಳದಲ್ಲಿ ಆಯೋಜಿಸಲಾದ ಜನಜಾಗೃತಿ ಜಾಥಕ್ಕೆ ನೀಡಿದ ಬಳಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಡಿದರು.
ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಉದ್ದಾರವೇ ದೇಶದ ಅಭಿವೃದ್ಧಿಯಾಗಿದೆ. ನಾವು ವಾಸಿಸುವ ಸಮಾಜದಲ್ಲಿ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ವಿಚಾರಸಿ ಅವರಿಗೆ ಸಿಗುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಬೇಕು. ಮಾನಸಿಕ ರೋಗಿಗಳಿಗೂ ಈ ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕುವ ಹಕ್ಕು ಇದೆ. “ಬದಲಾಗುತ್ತಿರುವ ಜಗತ್ತಿನಲ್ಲಿ ಯುವ ಜನತೆ ಹಾಗೂ ಮಾನಸಿಕ ಆರೋಗ್ಯ” ಎಂಬುದು ಈ ವರ್ಷದ ಘೋಷಣೆಯಾಗಿದೆ. ಇಂದಿನ ಯುವ ಪೀಳಿಗೆ ಹಲವಾರು ಸಮಸ್ಯೆಗಳಿಂದ ಒತ್ತಡ ಜೀವನಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಅವರು ಹೊರಗೆ ಬರಬೇಕು, ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಮಾನಸಿಕ ಖಾಯಿಲೆಗೂ ಖಂಡಿತ ಚಿಕಿತ್ಸೆ ಇದೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಬೇಕು. ಮಾನಸಿಕ ರೊಗಿಗಳನ್ನು ಒಂದು ರೂಮಿನಲ್ಲಿ ಕಟ್ಟಿ ಹಾಕುವುದು, ಕೈ ಮತ್ತು ಕಾಲುಗಳಿಗೆ ಸರಪಳಿ ಹಾಕುವುದು, ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸೆ ನೀಡುವ ತಜ್ಞ ವೈದ್ಯರಿದ್ದು, ಗ್ರಾಮ ಮಟ್ಟದಲ್ಲಿ ಕೆಲಸ ನಿರ್ವಹಿಸುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾನಸಿಕ ರೋಗಿಗಳನ್ನು ಗುರುತಿಸಿ ತಾಲೂಕಾ ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗೆ ನಿರ್ದೇಶನ ಮಾಡಬೇಕು ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮಾನಸಿಕ ರೋಗ ತಜ್ಞ ಡಾ. ಕೃಷ್ಣ ಓಂಕಾರ ಅವರು ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮ ಮೊದಲಿಗೆ ೧೯೮೪ ರಲ್ಲಿ ಪ್ರಾರಂಭವಾಯಿತು. ಮಾನಸಿಕ ಖಾಯಿಲೆಗಳಾದ ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ಯ/ ಮಾದಕ ವ್ಯಸನ, ಬುದ್ದಿ ಮಾಂದ್ಯತೆ, ಮಕ್ಕಳಲ್ಲಿ ಕಂಡುಬರುವ ನಡುವಳಿಕೆ ದೋಷ, ಮನೋ ದೈಹಿಕ ಬೇನೆಗಳು, ವ್ಯಕ್ತಿ ದೋಷ, ಮೆದುಳಿನ ಅಂಗದೋಷದ ಖಾಯಿಲೆಗಳ ಲಕ್ಷಣಗಳು ಇರುವವರು ಮತ್ತು ಇವುಗಳಿಗೆ ಎಲ್ಲಾ ರೀತಿ ಚಿಕಿತ್ಸೆಗಳಿವೆ. ಮಾನಸಿಕ ರೋಗಿಗಳು ಯಾವ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಮಾನಸಿಕ ರೋಗ ಯಾವುದೋ ಶಾಪ ಅಥವಾ ಮೂಡನಂಬಿಕೆಯಿಂದ ಬರುತ್ತದೆ ಎಂದು ಭಾವಿಸುತ್ತಾರೆ. ಮಾನಸಿಕ ರೋಗಿಗಳನ್ನು ಸಮಾಜದಲ್ಲಿ ಗುರುತಿಸಿ ಪ್ರಾ.ಆ.ಕೇಂದ್ರ., ಸ.ಆ.ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಈ ಮಾನಸಿಕ ಖಾಯಿಲೆಯ ಲಕ್ಷಣಗಳು ಕಂಡ ಬಂದರೆ ಅಂತಹ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ನಿರ್ದೇಶನ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ತರಬೇತಿ ತರಬೇತಿ ಕೇಂದ್ರದ ಸಿವಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎಂ., ರಾಜೇಂದ್ರ ಪ್ರಸಾದ ಕೆ.ಎಸ್., ಚಂದ್ರಕಾಂತ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ತಾಲೂಕಿನ ವಿವಿಧ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು. ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾನಿಲಯದ ಸ್ನಾತ್ತಕೋತ್ತರ ಕೇಂದ್ರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಸ್ವಾಗತಿಸಿದರು. ಗವಿಸಿದ್ದಪ್ಪ ಮನೋ ಸಮಾಜಿಕ ಆರೋಗ್ಯಾಧಿಕಾರಿ ಇವರು ವಂಧನಾರ್ಪಣೆ ಮಾಡಿದರು.
ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ ಶ್ರೀನಿವಾಸ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ”ಜನಜಾಗೃತಿ ಜಾಥಾ” ಕಾರ್ಯಕ್ರಮದಲ್ಲಿ ಕಲಾವಿದರಿಂದ ”ಮಾನಸಿಕ ಆರೋಗ್ಯ ಕಾರ್ಯಕ್ರಮ” ಕ್ಕೆ ಸಂಬಂದಿಸಿದ ಜಾನಪದ ಗೀತೆಗಳ ಮೂಲಕ ಅಶೋಕ ವೃತ್ತ, ಹಸನ್ ರೋಡ, ದಿವಟರ ವೃತ್ತ, ಗ್ರಾಮೀಣ ಪೋಲಿಸ್ ಸ್ಟೇಷನ್ ಮಾರ್ಗವಾಗಿ ಸರಕಾರಿ ನೌಕರರ ಭವನದ ವರೆಗೆ ಯಶಸ್ವಿಯಾಗಿ ಜರುಗಿತು. ಶರಣಪ್ಪ ವಡಿಗೇರಿ ಕಲಾತಂಡದರಿಂದ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಾನಪದ ಗೀತೆಯನ್ನು ಹಾಡಿ ಜಾಗೃತಿ ಮೂಡಿಸಲಾಯಿತು.