ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಿ : ಪಿ. ಸುನೀಲ್ ಕುಮಾರ್


ಕೊಪ್ಪಳ ಡಿ.೧೦ : ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ತಡೆಯಲು ವಿಶ್ವ ಸಂಸ್ಥೆಯು ಮಾನವ ಹಕ್ಕುಗಳನ್ನು ಜಾರಿಗೆ ತಂದಿದ್ದು, ಅವುಗಳ ರಕ್ಷಣೆ ಮತ್ತು ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿರುವುದರಿಂದ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಅವರು ಕರೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳಲ್ಲಿದ್ದ ಗುಲಾಮಗಿರಿ ವ್ಯವಸ್ಥೆಯನ್ನು ಹೋಗಲಾಡಿಸಲು ವಿಶ್ವ ಸಂಸ್ಥೆಯು ಮಾನವ ಹಕ್ಕುಗಳನ್ನು ಜಾರಿಗೆ ತಂದಿದೆ. ಇದರ ಅಂಗವಾಗಿ ಪ್ರತಿ ವರ್ಷ ಡಿ. ೧೦ ರಂದು ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಾಗಿ ಜೀವಿಸುವ ಹಕ್ಕಿದೆ. ಆದ್ದರಿಂದ ಭಾರತದ ಸಂವಿಧಾನವು ಪ್ರತಿ ಒಬ್ಬ ಪ್ರಜೆಗಳಿಗೂ ಸಮಾನತೆಯ ಹಕ್ಕು, ಜೀವಿಸುವ ಹಕ್ಕು, ಸ್ವಾತಂತ್ರದ ಹಕ್ಕು, ಶಿಕ್ಷಣ ಪಡೆಯುವ ಹಕ್ಕು, ಸೇರಿದಂತೆ ಹತ್ತು ಹಲವಾರು ಹಕ್ಕುಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಬುದುಕುವ ಹಕ್ಕು, ಸಮಾನತೆ, ಸ್ವಾತಂತ್ರ್ಯದ ಹಕ್ಕು ಮತ್ತು ಕಡ್ಡಾಯವಾಗಿ ಶಿಕ್ಷಣ ಪಡೆಯುವ ಹಾಗೂ ಇತ್ಯಾದಿ ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಹಕ್ಕುಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳುವುದೇ ಮಾನವ ಹಕ್ಕುಗಳ ರಕ್ಷಣೆಯಾಗಿದೆ. ಆದ್ದರಿಂದ ಎಲ್ಲರೂ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಮಾತನಾಡಿ, ಒಂದು ಮಗು ತನ್ನ ತಾಯಿ ಗರ್ಭದಲ್ಲಿ ಇದ್ದಾಗಿನಿಂದ ಹಿಡಿದು ಮರಣ ಹೊಂದುವವರೆಗೆ ಮತ್ತು ನಂತರ ತನ್ನ ಹಕ್ಕನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಗುಲಾಮಗಿರಿ, ಜೀತ ಪದ್ಧತಿ, ಅಸಮಾನತೆ ಇವು ಎಲ್ಲಾ ಮಾನವ ಹಕ್ಕುಗಳ ವಿರುದ್ಧವಾಗಿವೆ. ಒಂದು ಉನ್ನತವಾದ ಹುದ್ದೆಯಲ್ಲಿರುವ ವ್ಯಕ್ತಿ ಮತ್ತು ಒಬ್ಬ ಸಾಮಾನ್ಯ ಮನುಷ್ಯನಿಗೆ ಸಮಾಜವು ಒಂದು ರೀತಿಯಲ್ಲಿ ಅಂದರೆ, ಸಮಾನವಾಗಿ ಕಾಣಬೇಕು ಅಂದಾಗ ಮಾತ್ರ ಮನವ ಹಕ್ಕುಗಳ ಪಾಲನೆಯಾಗುವುದು. ಸಂವಿಧಾನಾತ್ಮಕವಾಗಿ ನೀಡಿರುವ ನಮ್ಮದೇಯಾದ ಆರೋಗ್ಯ ಹಕ್ಕು, ಆಸ್ತಿ ಹಕ್ಕು, ಶಿಕ್ಷಣ ಹಕ್ಕು, ಇತ್ಯಾದಿ ಹಕ್ಕುಗಳನ್ನು ನಾವು ದಿನನಿತ್ಯದಲ್ಲಿ ನೋಡುತ್ತಾ ಇದ್ದೇವೆ. ಅವುಗಳು ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕಾದರೆ ಮೊದಲು ನಾವು ಜವಾಬ್ದಾರಿಯುತರಾಗಬೇಕು. ಮಾನವ ಹಕ್ಕುಗಳ ರಕ್ಷಣೆಗಾಗಿ ಕಾನೂನು ಇಲಾಖೆಯು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದೆ. ಯಾರಿಗಾದರು ತಮ್ಮ ಹಕ್ಕುಗಳು ದೊರೆಯದೇ ಇದ್ದಲ್ಲಿ ಅಂತಹ ವ್ಯಕ್ತಿಗಳು ಈ ವಿಶೇಷ ನ್ಯಾಯಾಲಯದ ಮೂಲಕ ತಮ್ಮ ಹಕ್ಕುಗಳನ್ನು ಕಾನೂನಿನ ರೀತಿಯಲ್ಲಿ ಪಡೆಯಬಹುದಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಇಲ್ಲ ಆದ್ದರಿಂದ ಎಲ್ಲರಲ್ಲಿಯೂ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಪ್ರಭುರಾಜ ನಾಯಕ ಅವರು ಮಾತನಾಡಿ, ಹಿರೋಸಿಮಾ ಮತ್ತು ನಾಗಾಸಾಕಿಯಲ್ಲಾದ ಬಾಂಬು ಸ್ಪೋಟದಿಂದ ಕೇವಲ ಐದೇ ನಿಮಿಷದಲ್ಲಿ ೮೦ ಸಾವಿರಕ್ಕೂ ಅಧಿಕ ಜನರು ಸಾವನ್ನಪಿದ್ದರು. ಅಲ್ಲದೇ ಈ ಪರಿಣಾಮದಿಂದ ೨ ಲಕ್ಷಕ್ಕೂ ಅಧಿಕ ಜನರು ಮರಣಹೊಂದಿದರು. ಈ ಘಟನೆಯಿಂದಾಗಿ ವಿಶ್ವ ಸಂಸ್ಥೆಯು ೧೯೪೮ ರಲ್ಲಿ ಎಲ್ಲಾ ದೇಶಗಳ ಸಭೆಯನ್ನು ಕರೆದು ಡಿ. ೧೦ ರಂದು ಮಾನವ ಹಕ್ಕುಗಳನ್ನು ಜಾರಿಗೆ ತಂದಿತು. ಮೊದಲು ಕೇವಲ ೫೬ ದೇಶಗಳ ಈ ಸಭೆಯಲ್ಲಿ ಭಾಗವಹಿಸಿದ್ದವು ಈ ಎಲ್ಲಾ ದೇಶಗಳು ಇದ್ದಕ್ಕೆ ಸಹಿ ಹಾಕಿವೆ. ಇದರ ಅಂಗವಾಗಿ ಡಿ. ೧೦ ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಾದ ಕಪ್ಪುಕೋಣೆ ದುರಂತವು ಮಾನವ ಹಕ್ಕುಗಳ ಉಲ್ಲಂಘನೆಗೆ ಬಹುದೊಡ್ಡ ಉದಾಹರಣೆಯಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿ ಮಾನವ ಹಕ್ಕುಗಳ ಕುರಿತು ೨೧, ೨೩ ಹೀಗೆ ಅನೇಕ ಕಾಯ್ದೆಗಳು ರಚಿತವಾಗಿವೆ. ಇಂದು ಶೇ.೪೦ ರಷ್ಟು ಮಕ್ಕಳು ಅಪೌಷ್ಠಿಕತೆಯಿಂತ ಬಳಲುತ್ತಿದ್ದಾರೆ. ಶೇ.೨೦ ರಷ್ಟು ಜನರು ಬಡತನ ರೇಖೆಗಿಂತ ಕೆಳ ಮಟ್ಟದಲ್ಲಿದ್ದಾರೆ. ಇನ್ನೂ ಕೆಲ ಜನ ಅಸ್ಪೃಶ್ಯತೆಗೆ ಒಳಗಾಗಿದ್ದಾರೆ. ಮರ್ಯಾದ ಹತ್ಯೆಗಳು, ಇವು ಎಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಗೆ ಬಹುದೊಡ್ಡ ಕಾರಣವಾಗಿದೆ. ಮೂಲ ಭೂತ ಹಕ್ಕುಗಳಾದ ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ, ಮನೆ, ಆಹಾರ ಇವುಗಳನ್ನು ನೀಡುವುದು ಮಾನವರ ಮೂಲಭೂತ ಹಕ್ಕಾಗಿದ್ದು, ಪ್ರತಿ ಗ್ರಾಮ ಅಥವಾ ಒಂದು ಪ್ರದೇಶಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾಸಕಾಂಗವು ಕಾರ್ಯನಿರ್ವಹಿಸಬೇಕಾಗಿದೆ. ಜನಾಂಗಿಯ ಭೇದ, ಮಾನವ ಹತ್ಯೆ ಬಹುದೊಡ್ಡ ಪಾಪವಾಗಿದೆ. ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕಿಲ್ಲ ಎಂಬುವುದು, ವಿವಿಧ ಕ್ಷೇತ್ರದಲ್ಲಿ ಅವರಿಗೆ ಮೀಸಲಾತಿ ದೊರೆಯದೇ ಇರುವುದು ಮಹಿಳಾ ಹಕ್ಕುಗಳ ಉಲ್ಲಂಘನೆಯಾಗಿದೆ. ಮಹಿಳೆಯರಿಗಾಗಿಯೇ ನಮ್ಮ ಸಂವಿಧಾನವು ಶೇ.೫೦ ರಷ್ಟು ಮೀಸಲಾತಿಯನ್ನು ನೀಡಿದೆ. ಆದರೆ ಇಂದಿನ ದಿನಗಳಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಕಡಿಮೆ ಇದೆ. ಈ ಮೀಸಲಾತಿಯು ಸಮರ್ಪಕವಾಗಿ ಬಳಕೆಯಾದಾಗ ಮಾತ್ರ ಮಹಿಳಾ ಹಕ್ಕುಗಳ ರಕ್ಷಣೆಯಾದಂತೆ. ಆದ್ದರಿಂದ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಉಮಾದೇವಿ ಸೊನ್ನದ, ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ. ಹನುಮಂತರಾವ್, ಡಿ.ವೈ.ಎಸ್.ಪಿ. ಎಸ್.ಎಸ್. ಸಂದೀಗವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಸರ್ವಾಜನಿಕ ಪ್ರತಿಜ್ಞಾವಿಧಿಯನ್ನು ಇದೇ ಸಂದರ್ಭದಲ್ಲಿ ಭೋಧಿಸಿದರು.

Please follow and like us:
error