ಮಾನವ ಕುಲಕ್ಕೆ ಅಂಬಿಗರ ಚೌಡಯ್ಯನವರ ಸೇವೆ ಅನನ್ಯ : ಗವಿಸಿದ್ದಪ್ಪ ಕರಡಿ

ಕೊಪ್ಪಳ ಜ. : ಮಾನವ ಕುಲಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಸೇವೆ ಅನನ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಜಾತಿ, ಧರ್ಮ ಯಾವುದೇ ಬೇಧವಿಲ್ಲದೇ ಎಲ್ಲಾ ಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ ಮಹನಿಯರಲ್ಲಿ ಅಂಬಿಗರ ಚೌಡಯ್ಯನವರು ಸಹ ಒಬ್ಬರಾಗಿದ್ದಾರೆ. ಸಮಾಜದ ಅಂಕು ಡೊಂಕು ಪದ್ಧತಿಗಳನ್ನು ತಿದ್ದಲು ವಚನಗಳಿಂದ ಜಾಗೃತಿ ಮೂಡಿಸಿದ್ದಾರೆ. ಬಡತನಕ್ಕೆ ಊಟದ ಚಿಂತೆ, ಊಟವಾದರೆ ಬಟ್ಟೆಯ ಚಿಂತೆ, ಬಟ್ಟೆ ಆದರೆ ಇಡುವ ಚಿಂತೆ. ಇದಾದರೆ ಹೆಂಡತಿ ಚಿಂತೆ, ಮಕ್ಕಳ ಚಿಂತೆ, ಕೇಡಿನ ಚಿಂತೆ, ನಂತರ ಮರಣದ ಚಿಂತೆ ಹಿಗೇ ಮನಷ್ಯನು ಚಿಂತೆಗಳಿಗೆ ಒಳಗಾಗುತ್ತಿದ್ದು, ಶಿವನ ಜ್ಞಾನದಿಂದ ದೂರವಾಗುತ್ತಿದ್ದಾನೆ. ಎಂದು ನಿಜಶರಣ ಅಂಬಿಗರ ಚೌಡಯ್ಯನವರ ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕಿದೆ. ಚೌಡಯ್ಯನವರು ನೇರವಾಗಿ ನುಡಿದಂತಹ ಶರಣರಾಗಿದ್ದರು. ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿ, ಅವುಗಳ ವಿರುದ್ಧ ವಚನಗಳ ಮೂಲಕ ಹೋರಾಡಿ ಸಮಾಜದಲ್ಲಿ ಬದಲಾವಣೆಗಳನ್ನು ತಂದಂತಹ ಮಹನಿಯರಲ್ಲಿ ಒಬ್ಬರು. ಸಮಾಜವೂ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರಿಯಬೇಕಾದರೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣವಿಲ್ಲದೆ, ಯಾವುದೇ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಭಲರನ್ನಾಗಿಸಿ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ತಾಲೂಕಿನ ಇರಕಲ್ಲಗಡ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಂಕ್ರಯ್ಯ ಅಬ್ಬಿಗೇರಿಮಠ ಅವರು ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ಬಸವಾತಿ ಶವಶರಣರ 12ನೇ ಶತಮಾನದವರು. ಅಂಬಿಗರ ಚೌಡಯ್ಯನವರ ಹುಟ್ಟು ಸ್ಥಳ ಕುರಿತು ಹಲವಾರು ಗೊಂದಲಗಳಿವೆ. ಆದರೂ ಇತ್ತೀಚಿನ ಸಂಶೊಧನೆಯ ಪ್ರಕಾರ ಹಾವೇರಿ ಜಿಲ್ಲೆಯವರು ಎಂದು ತಿಳಿದಿದೆ. ಸಮಾಜ ಪರಿವರ್ತನೆಗಾಗಿ ಹೋರಾಡಿದ ಚೌಡಯ್ಯನವರು 12ನೇ ಶತಮಾನದ ವಚನ ಕ್ರಾಂತಿಯ ನಿಜವಾದ ಕ್ರಾಂತಿಕಾರರಾಗಿದ್ದು, ನೇರ ನಡೆ ನೇರ ನುಡಿಯ ವಚನಗಳು ಅವರದ್ದು. ಮೌಢ್ಯತೆಯಿಂದ ಕೂಡಿದ್ದ ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ ಅನೇಕ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ. ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕು ಪದ್ಧತಿಗಳನ್ನು ತಿದ್ದಲು ವಚನಗಳಿಂದ ಜಾಗೃತಿ ಮೂಡಿಸಿದವರು. ಅಂಬಿಗರ ಚೌಡಯ್ಯನವರ ಸಮ ಸಮಾಜ ನಿರ್ಮಾಣದ ಕಳಕಳಿಯು ಮೆಚ್ಚುವಂತಹದ್ದಾಗಿದೆ. ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು. ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇಪ್ಪವರನ್ನು ಕಂಡೆನು, ಶಿವನ ಚಿಂತೆಯಲಿದ್ದವರೊಬ್ಬರನು ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ. ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ ಎಂದು ಅಂಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಸಂದೇಶವನ್ನು ನೀಡಿದ್ದಾರೆ ಎಂದರು.
ಸಭಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ ಅವರು ವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ. ಬಸವರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಸಮಾಜದ ಮುಖಂಡರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ಸೋಮಣ್ಣ ಬಾರಕೇರ, ರಮೇಶಪ್ಪ ಕಬ್ಬೇರ, ವಸಂತ ಚೌರದ, ನಾಗರತ್ನ ಪೂಜಾರ, ಗಂಗಾಧರ ಕಬ್ಬೇರ, ಹನುಮಂತಪ್ಪ ಕಂಪಸಾಗರ, ಕಂಬಣ್ಣ ಭಜಂತ್ರಿ, ಶಂಕರಗೌಡ ಮಾಲಿಪಾಟೀಲ, ವೆಂಕಪ್ಪ ಬಾರಕೇರ ಸೇರಿದಂತೆ ಅನೇಕ ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಮೆರವಣಿಗೆಯು ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Please follow and like us:
error