ಮಾಟಲದಿನ್ನಿ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ : ಪ್ರಕರಣ ದಾಖಲು

Koppal News  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಮಗುವನ್ನು ತೊರೆದು ಹೋದ ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬೇವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದ ಹೊರವಲಯದಲ್ಲಿ ಆ. ೧೯ರ ಭಾನುವಾರದಂದು ಯಾರೋ ಅಪರಿಚಿತರು ನವಜಾತ ಹೆಣ್ಣು ಶಿಶುವನ್ನು ತೊರೆದು ಹೋಗಿದ್ದು, ಈ ನವಜಾತ ಶಿಶುವನ್ನು ಗಮನಿಸಿದ ಗ್ರಾಮಸ್ಥರು ಹಿರೇವಂಕಲಕುಂಟ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಮಗುವನ್ನು ಶುಚಿಗೊಳಿಸಿ ತಾತ್ಕಾಲಿಕ ಆರೈಕೆ ನೀಡಿ, ಈ ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಿದ್ದು, ನಂತರದಲ್ಲಿ ಸ್ಥಳೀಯ ಅಂಗನವಾಡಿ ಸಿಬ್ಬಂದಿಗಳ ನೆರವಿನಿಂದ ೧೦೮-ವಾಹನದ ಮೂಲಕ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ನವಜಾತ ಶಿಶುಗಳ ತೀವ್ರ (ಎಸ್.ಎನ್.ಸಿ.ಯು) ನಿಗಾ ಘಟಕಕ್ಕೆ ದಾಖಲಿಸಿದ್ದಾರೆ.
ಈ ರೀತಿಯಲ್ಲಿ ತೊರೆದು ಹೋದ ಮಕ್ಕಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ಯಾರಾದರು ಅನಧಿಕೃತವಾಗಿ ಸಾಕುವ ಉದ್ದೇಶದಿಂದ ಮಾಹಿತಿಯನ್ನು ಮುಚ್ಚಿಟ್ಟಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರ ಕಲಂ ೩೪ರಡಿಯಲ್ಲಿ ೬ ತಿಂಗಳ ಸೆರೆವಾಸ ಮತ್ತು ರೂ. ೧೦.೦೦೦/-ದಂಡ ತಪ್ಪಿದಲ್ಲ. ಅನಧಿಕೃತವಾಗಿ ಹಾಗೂ ಈ ಕಾಯ್ದೆಯ ನಿಯಮಾವಳಿಗಳನ್ನು ಪಾಲಿಸದೇ ಅಕ್ರಮವಾಗಿ ಮಗುವನ್ನು ಸಾಕುತ್ತಿದ್ದಲ್ಲಿ ಕಲಂ ೮೦ ರನ್ವಯ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿದಿಸಲಾಗುವುದು. ಆದ್ದರಿಂದ ಈ ರೀತಿ ಪರಿತ್ಯಜಿಸಲ್ಪಟ್ಟ ಮಕ್ಕಳು ಕಂಡುಬಂದಲ್ಲಿ ಹತ್ತಿರ ಪೊಲೀಸ್ ಠಾಣೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಸಹಾಯವಾಣಿ-೧೦೯೮ ಕ್ಕೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಅಸಾಂಸ್ಥಿಕ) ಪ್ರಶಾಂತ ರೆಡ್ಡಿ ಅವರು ತಿಳಿಸಿದ್ದಾರೆ.
ನವಜಾತ ಶಿಶುವಿನ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊಬೇಷನರ್ ಆಫೀಸರ್ ಶಿವಲೀಲಾ ವನ್ನೂರ ಸೇರಿದಂತೆ ಸ್ಥಳೀಯ ಅಂಗನವಾಡಿ ಸಿಬ್ಬಂದಿಗಳು ಭಾಗವಹಿಸಿದ್ದರು. ಮಗುವನ್ನು ತೊರೆದು ಹೋದ ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬೇವೂರು ಪೋಲಿಸ್ ಠಾಣೆಯಲ್ಲಿ ಸೋಮವಾರದಂದು ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error

Related posts