ಮಹಿಳೆಯರ ಸಬಲೀಕರಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ- ಪಿ.ಸುನೀಲ್ ಕುಮಾರ್

(ಮಹಿಳಾ ಅರಿವು ವಿಚಾರ ಸಂಕಿರಣ)

ಕೊಪ್ಪಳ : ಎಲ್ಲ ಹಂತಗಳಲ್ಲೂ ಮಹಿಳೆಯರ ಸಬಲೀಕರಣ ಇಂದಿನ ಅವಶ್ಯಕತೆಯಾಗಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣದಿಂದ ಮಾತ್ರ ಮಹಿಳೆಯರ ಸ್ಥಿತಿಗತಿ ಬದಲಾಯಿಸಲು ಸಾಧ್ಯ. ಮಹಿಳೆಯರು ಮುಖ್ಯವಾಗಿ ಶಿಕ್ಷಣ ಹೊಂದುವಂತೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.
ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸವಾ ಎನ್‌ಜಿಓ, ಸೇವಾ ಕೌಟುಂಬಿಕ ಸಲಹಾ ಕೇಂದ್ರದ ಆಶ್ರಯದಲ್ಲಿ ನಡೆದ ಮಹಿಳಾ ಅರಿವು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿತ್ರಿಬಾಯಿ ಪುಲೆಯವರ ಜೀವನ ಚರಿತ್ರೆಯ ಪುಸ್ತಕಗಳನ್ನು ಪಿಜಿ ಸೆಂಟರ್‌ನ ವಿಶೇಷಾಧಿಕಾರಿ ಡಾ.ಮನೋಜ್ ಡೊಳ್ಳಿಯವರಿಗೆ ಹಸ್ತಾಂತರಿಸುವ ಮೂಲಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಹಿಳೆ ಶಿಕ್ಷಣ ಹೊಂದುವುದರಿಂದ ಇಡೀ ಕುಟುಂಬದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಾಧ್ಯ. ಪೌಷ್ಟಿಕ ಆಹಾರಕ್ಕಾಗಿ ಸರ್ಕಾರ ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸಲಾಗುತ್ತಿದೆ. ಆದರೆ ಮಹಿಳೆಯರು ಶಿಕ್ಷಣವಂತರಾದರೆ ತನ್ನ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾಳೆ. ಆರ್ಥಿಕವಾಗಿ ಸ್ವಾಲಂಭಿಗಳಾದರೆ ಸರಕಾರದ ಸವಲತ್ತುಗಳ ಅವಶ್ಯಕತೆಗ ಇರುವುದಿಲ್ಲ. ಸ್ವಾಲಂಭಿಗಳಾಗಿ ದುಡಿಯಲು ಬಯಸುವ ಮಹಿಳೆಗೆ ಹಲವಾರು ಯೋಜನೆಗಳು ಲಭ್ಯವಿವೆ. ಕೊಪ್ಪಳ ಜಿಲ್ಲೆಯಲ್ಲಿಯೇ ನಿರ್ಮಿತಿ ಕೇಂದ್ರದಲ್ಲಿ ಸ್ವಉದ್ಯೋಗಕ್ಕಾಗಿ ತರಬೇತಿ ನೀಡಿ ಅವರಿಗೆ ಬದುಕಿಗೆ ದಾರಿ ಮಾಡಿಕೊಡುವ ಯೋಜನೆ ಜಾರಿಮಾಡಿದ್ದೇವೆ. ಕಿಟ್ ಗಳನ್ನು ನೀಡಲಾಗುತ್ತದೆ ಅಂತಹ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕು.
ಮಹಿಳೆಯರು ರಾಜಕೀಯವಾಗಿ ಮುಂದುವರೆಯುತ್ತಿದ್ದರೂ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳಾ ಜನಪ್ರತಿನಿಧಿಗಳಿದ್ದರೂ, ಅಧಿಕಾರವನ್ನು ಅವರ ಪತಿ, ಸಹೋದರರು ನಡೆಸುತ್ತಾರೆ. ಮಹಿಳೆಯರು ಹೆಸರಿಗೆ ಮಾತ್ರ ಅಧಿಕಾರವನ್ಬು ಹೊಂದಿರುತ್ತಾರೆ. ಅವರಿಗೆ ಗೊತ್ತಾಗುವುದಿಲ್ಲ ಎನ್ನುವ ಕಾರಣ ಹೇಳುತ್ತಾರೆ. ಅದೇ ಪುರಷರಾಗಿದ್ದರೆ ಅನಕ್ಷರಸ್ಥರಾದರೂ ಸಹ ನಡೆದುಹೋಗುತ್ತೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಬೇಕು ಎಂದರು.ಸರ್ಕಾರವೂ ಮಹಿಳೆಯರ ಸಬಲೀಕರಣಕ್ಕಾಗಿ ಯಾವಾಗಲೂ ಬದ್ಧವಾಗಿದೆ. ಇದಕ್ಕಾಗಿಯೇ ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗೆ ಮೀಸಲಾಗಿರಿಸಿದೆ. ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ನರೇಗಾ ಯೋಜನೆಯಲ್ಲಿ ಮಹಿಳೆಯರಿಗೂ ಅನುದಾನ ಮೀಸಲಿರಿಸಲಾಗಿದೆ. ಅವುಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಪುಲೆಯವ ಜೀವನ ಮತ್ತು ಹೋರಾಟದ ಕುರಿತು ಪತ್ರಕರ್ತ ಸಿರಾಜ್ ಬಿಸರಳ್ಳಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳಾ ಚಿಂತಕಿ, ಹೋರಾಟಗಾರ್ತಿ ಮಂಗಳೂರಿನ ವಾಣಿ ಪೆರಿಯೋಡಿ ಅವರಿಗೆ ಸೇವಾಜ್ಯೋತಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಕಾರ್‍ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಸದಸ್ಯರಾದ ಅಬ್ದುಲ್ ಗಫಾರ್ ಅತ್ತಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಈರಣ್ಣ ಪಾಂಚಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ.ಮನೋಜ್ ಡೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸೇವಾ ಸಂಸ್ಥೆಯ ಅಧ್ಯಕ್ಷ ರಾಜಾಬಕ್ಷಿ ಎಚ್.ವಿ. ಮಾತನಾಡಿದರು.
ನಂತರ ನಡೆದ ಗೋಷ್ಠಿಯಲ್ಲಿ ಮಹಿಳಾ ದೌರ್ಜನ್ಯ – ಇನ್ನು ಸಾಕು ವಿಷಯದ ಕುರಿತು ಮಹಿಳಾ ಚಿಂತಕಿ ಶ್ರೀಮತಿ ವಾಣಿ ಪೆರಿಯೋಡಿ ಮಾತನಡಿದರು ಹಾಗೂ ಮಹಾತ್ಮಾ ಗಾಂಧೀಜಿ – ೧೫೦ ಕುರಿತು ಮಂಗಳೂರಿನ ಹಿತಾ ರಿಸೋರ್ಸ ಯುನಿಟ್ ಕಿರುನಾಟಕ ನಡೆಸಿಕೊಟ್ಟರು. ನಗರಸಭೆ ಸದಸ್ಯರಾದ ಮುತ್ತುರಾಜ್ ಕುಷ್ಟಗಿ , ಶ್ರೀಮತಿ ಸಬೀಯಾ ಆದಿಲ್ ಪಟೇಲ್, ಶ್ರೀಮತಿ ಆಯಿಷಾ ರುಬಿನಾ ಎಸ್.ಎಂ.ಹುಸೇನಿ ಉಪಸ್ಥಿತಿರಿದ್ದರು.
ಕೊನೆಯ ಗೋಷ್ಠಿಯಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್, ಸಂವಿಧಾನ ಮತ್ತು ಮಹಿಳೆ ಕುರಿತು ಪತ್ರಕರ್ತ , ಉಪನ್ಯಾಸಕ ರಾಜು ಬಿ.ಆರ್. ಉಪನ್ಯಾಸ ನೀಡಿದರು, ಅತಿಥಿಗಳಾಗಿ ಆಗಮಿಸಿದ್ದ ಸಿಡಿಪಿಓ ಶ್ರೀಮತಿ ಸಿಂಧೂ ಎಲಿಗಾರ ಸರಕಾರದ ಯೋಜನೆಗಳ ಕುರಿತು ಮಾತನಾಡಿದರೆ ನಗರ ಠಾಣೆಯ ಸಿಪಿಐ ಶಿವಾನಂದ ವಾಲೀಕಾರ ಕಾನೂನು ಪಾಲನೆಯ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾದಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಸದಸ್ಯರಾದ ಅಬ್ದುಲ್ ಗಫಾರ್ ಅತ್ತಾರ್‌ರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು ಕಾರ್ಯಕ್ರಮದ ಸ್ವಾಗತವನ್ನು ಉಪನ್ಯಾಸಕರಾದ ಮಲ್ಲಪ್ಪ ಬಿ.ಜಿ, ವಂದನಾರ್ಪಣೆಯನ್ನು ವಿನೂತಾ ನೆರವೇರಿಸಿದರೆ ನಿರೂಪಣೆಯವನ್ನು ರವಿ ಮಾಟಲದಿನ್ನಿ ನೆರವೇರಿಸಿದರು.

Please follow and like us:
error