ಮಹಿಳೆಯರೇ ನಡೆಸುವ ಸವಿರುಚಿ ಸಂಚಾರಿ ಕ್ಯಾಂಟೀನ್‍ಗೆ ಚಾಲನೆ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಹಿಳೆಯರು ಮುಂದಾಗಿ- ಡಿ.ಸಿ. ಕನಗವಲ್ಲಿ

ಕೊಪ್ಪಳ ಜು. ಮಹಿಳೆಯರು ಯಾವುದೇ ಉದ್ಯಮವನ್ನು ನಡೆಸಲು ಸಶಕ್ತರಾಗಿದ್ದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮೂಲಕ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಾಯೋಗಿಕ ಯೋಜನೆಯಾದ ‘ಸವಿರುಚಿ ಸಂಚಾರಿ ಕ್ಯಾಂಟೀನ್’ಗೆ ಸೋಮವಾರದಂದು ಜಿಲ್ಲಾಡಳಿತ ಭವನ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮಥ್ರ್ಯ ತೋರಿಸಲು ಸಶಕ್ತರಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಮಹಿಳೆಯರಿಗೆ ಬೆಂಬಲ ನೀಡುತ್ತಿದೆ. ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ, ಸಂಪೂರ್ಣ ಮಹಿಳೆಯರೇ ನಡೆಸುವ ‘ಸವಿರುಚಿ ಸಂಚಾರಿ ಕ್ಯಾಂಟೀನ್’ ಕೂಡ ಇಂತಹದೇ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಸದ್ಯ ಚಾಲನೆ ನೀಡಲಾಗುತ್ತಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಮತ್ತು ಉಪಹಾರ ನೀಡುವ ಯೋಜನೆ ಇದಾಗಿದ್ದು, ಮಹಿಳೆಯರು ಉತ್ತಮ ಗುಣಮಟ್ಟದ ಊಟೋಪಹಾರ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಮಹಿಳಾ ಸಬಲೀಕರಣಕ್ಕೆ ಇದು ಪೂರಕ ಯೋಜನೆಯಾಗಿದೆ. ಇಂತಹ ಯೋಜನೆಗಳ ಸದುಪಯೋಗವನ್ನು ಮಹಿಳೆಯರು ಪಡೆದುಕೊಂಡು, ಯೋಜನೆ ಯಶಸ್ವಿಗೊಳಿಸಬೇಕು. ಯೋಜನೆ ಯಶಸ್ಸುಗೊಂಡಲ್ಲಿ, ಇಂತಹ ಕ್ಯಾಂಟೀನ್‍ಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗಲಿದೆ. ಸವಿರುಚಿ ಕ್ಯಾಂಟೀನ್‍ನಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿಅ ಕೊರತೆಯಾಗದಂತೆ ಮಹಿಳೆಯರು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು, ಸವಿರುಚಿ ಕ್ಯಾಂಟೀನ್‍ನಲ್ಲಿ 40 ರೂ. ದರದಲ್ಲಿ ಉತ್ತಮ ಊಟ ದೊರೆಯಲಿದ್ದು, ಇದರಲ್ಲಿ ರೊಟ್ಟಿ/ಚಪಾತಿ, ಎರಡು ಬಗೆಯ ಪಲ್ಯೆ, ಅನ್ನ, ಸಾಂಬಾರ್ ಕೂಡ ನೀಡಲಾಗುತ್ತದೆ. ಅಲ್ಲದೆ 20 ರೂ. ದರದಲ್ಲಿ ಉಪಹಾರ ನೀಡಲಾಗುವುದು. ಇದು ಸಂಚಾರಿ ಕ್ಯಾಂಟೀನ್ ಆಗಿರುವುದರಿಂದ, ಜಿಲ್ಲಾಡಳಿತ ಭವನ, ಜಿಲ್ಲಾಸ್ಪತ್ರೆ, ಕೋರ್ಟ್ ಆವರಣ, ಬಸ್‍ಸ್ಟ್ಯಾಂಡ್ ಹೀಗೆ ಎಲ್ಲೆಲ್ಲಿ ಜನಸಂದಣಿ ಹೆಚ್ಚಿದ್ದು, ಊಟೋಪಹಾರದ ಬೇಡಿಕೆ ಲಭ್ಯವಾಗುವ ಸಾಧ್ಯತೆಳಿರುತ್ತವೆಯೋ, ಅಂತಹ ಸ್ಥಳಗಳಿಗೆ ತೆರಳಿ, ಕ್ಯಾಂಟೀನ್‍ನಲ್ಲಿ ಊಟೋಪಹಾರ ನೀಡಲಾಗುವುದು. ಸವಿರುಚಿ ಸಂಚಾರಿ ಕ್ಯಾಂಟೀನ್ ಯೋಜನೆಗೆ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಕ್ಕೆ 10 ಲಕ್ಷ ರೂ. ಗಳ ಬಡ್ಡಿರಹಿತ ಸಾಲವನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದು, 9 ರಿಂದ 11 ಸದಸ್ಯರನ್ನೊಳಗೊಂಡ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದವರು, ಈ ಹಣದಲ್ಲಿ ಸಂಚಾರಿ ವಆಹನ, ಪಾಕೋಪಕರಣ ಅಲ್ಲದೆ ಅಗತ್ಯ ಸಲಕರಣೆಗಳನ್ನು ಖರೀದಿಸಿ, ರುಚಿ-ಶುಚಿಯಾದ ಉಪಹಾರ, ಊಟ, ಕಾಫಿ, ಟೀ ಪೂರೈಸಬಹುದಾಗಿದೆ. ಬಂದಂತಹ ಲಾಭಾಂಶದಲ್ಲಿ ಪ್ರತಿ ತಿಂಗಳು 15000 ರೂ. ಗಳಂತೆ 67 ಕಂತುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಸವಿರುಚಿ ಸಂಚಾರಿ ಕ್ಯಾಂಟೀನ್ ಅನ್ನು ಸುಸಜ್ಜಿತ ವಾಹನದಲ್ಲಿ ಅಳವಡಿಸಲಾಗಿದ್ದು, ವಾಹನವನ್ನು ಕ್ಯಾಂಟೀನ್ ಮಾಡಲು ಅಗತ್ಯವಿರುವ ವಿನ್ಯಾಸದಲ್ಲಿ ಸಿದ್ಧಪಡಿಸಲಾಗಿದೆ. ಸ್ವಸಹಾಯ ಮಹಿಳಾ ಗುಂಪುಗಳು ತಯಾರಿಸುವ ಉಪ್ಪಿನಕಾಯಿ, ವಿವಿಧ ಬಗೆಯ ಚಟ್ನಿ, ಹಪ್ಪಳ, ರೊಟ್ಟಿ ಮುಂತಾದ ತಿನಿಸುಗಳನ್ನು ಸ್ತ್ರೀಶಕ್ತಿ ಒಕ್ಕೂಟದವರಿಂದ ಖರೀದಿಸಿ, ಕ್ಯಾಂಟೀನ್‍ಗೆ ಬಳಕೆ ಮಾಡುವ ಕುರಿತಂತೆ ಯೋಜಿಸಲಾಗುತ್ತಿದ್ದು, ಇದರಿಂದಾಗಿ ಮಹಿಳೆಯರ ಆರ್ಥಿಕ ಸಬಲತೆಗೆ ಪೂರಕವಾಗಲಿದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸುಧಾ ಚಿದ್ರಿ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು, ಸ್ತ್ರೀಶಕ್ತಿ ಒಕ್ಕೂಟದ ಸದಸ್ಯರುಗಳು, ವಾರ್ತಾ ಇಲಾಖೆಯ ಎಂ. ಅವಿನಾಶ ಉಪಸ್ಥಿತರಿದ್ದರು. ಜಿಲ್ಲಾಡಳಿತ ಭವನದಲ್ಲಿ ಪ್ರಾರಂಭಗೊಂಡ ಸವಿರುಚಿ ಕ್ಯಾಂಟೀನ್‍ನಲ್ಲಿ ಸಾರ್ವಜನಿಕರು, ರುಚಿ ರುಚಿಯಾದ ಊಟ ಸವಿದು ಖುಷಿ ಪಟ್ಟರು. 40 ರೂ. ದರದಲ್ಲಿ ರೊಟ್ಟಿ, ಚಪಾತಿ, ಪಲ್ಯೆ, ಅನ್ನ ಸಾಂಬಾರ್ ದೊರೆಯುತ್ತಿದ್ದು, ಊಟ ಕೂಡ ರುಚಿಯಾಗಿದೆ. ಕಡಿಮೆ ದರದಲ್ಲಿ ಭರಪೂರ ಊಟ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಊಟ ಸವಿದ ಸಾರ್ವಜನಿಕರು ಅಭಿಪ್ರಾಯಪಟ್ಟರು.