ಮನೆ ನಿರ್ಮಾಣ ಪ್ರಾರಂಭಿಸದ ಫಲಾನುಭವಿಗಳ ಆಯ್ಕೆ ರದ್ದು- ಮುನೀಷ್ ಮೌದ್ಗಿಲ್

ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯಾಗಿ, ಕಾರ್ಯಾದೇಶ ನೀಡಿದ ನಂತರವೂ, ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸದ ಫಲಾನುಭವಿಗಳ ಆಯ್ಕೆಯನ್ನು ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುನೀಷ್ ಮೌದ್ಗಿಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೊಪ್ಪಳ ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಆಶ್ರಯ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಸಂಬಂಧಪಟ್ಟ ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾರ್ಯಾದೇಶ ಪತ್ರ ನೀಡಲಾಗಿದ್ದು, ಜಿಲ್ಲೆಯ ನಗರ ಪ್ರದೇಶದಲ್ಲಿನ ೧೦೮೬ ಫಲಾನುಭವಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಸುಮಾರು ೨೫೦೦ ಫಲಾನುಭವಿಗಳು ಇದುವರೆಗೂ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸದಿರುವುದು ನಿಗಮದ ಗಮನಕ್ಕೆ ಬಂದಿದೆ.  ಫಲಾನುಭವಿಗಳು ಕಾರ್ಯಾದೇಶ ಕೊಟ್ಟ ೯೦ ದಿನಗಳ ಒಳಗಾಗಿ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕು.  ಪ್ರಮುಖವಾಗಿ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ೨೫೨ ಫಲಾನುಭವಿಗಳು ಹಾಗೂ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೧೭೭ ಫಲಾನುಭವಿಗಳು ಮನೆ ನಿರ್ಮಾಣ ಪ್ರಾರಂಭಿಸಿಲ್ಲ.  ಗ್ರಾಮೀಣ ಆಶ್ರಯ ಯೋಜನೆಯಲ್ಲಿ ಗಂಗಾವತಿ ತಾಲೂಕಿನಲ್ಲಿ ೯೬೭, ಕೊಪ್ಪಳ-೯೧೫, ಕುಷ್ಟಗಿ-೫೧೦ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೧೦೮ ಫಲಾನುಭವಿಗಳು ಮನೆ ನಿರ್ಮಾಣ ಪ್ರಾರಂಭಿಸಿಲ್ಲ.  ವಸತಿ ಯೋಜನೆಗೆ ಆಯ್ಕೆಗೊಂಡು, ಕಾಯಾದೇಶ ನೀಡಿದಾಗ್ಯೂ ಮನೆ ನಿರ್ಮಾಣ ಪ್ರಾರಂಭಿಸದೇ ಇರುವ ಫಲಾನುಭವಿಗಳ ಆಯ್ಕೆಯನ್ನು ರದ್ದುಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.  ಹೀಗೆ ರದ್ದುಪಡಿಸುವ ಸಂದರ್ಭದಲ್ಲಿ, ತೀವ್ರ ಬಡತನ ಎದುರಿಸುತ್ತಿರುವ ಫಲಾನುಭವಿಗಳ ಆಯ್ಕೆ ರದ್ದತಿಗೆ ವಿನಾಯಿತಿ ನೀಡಬೇಕು ಹಾಗೂ ಅವರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಿ, ಕೂಡಲೆ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸುವಂತೆ ತಾಕೀತು ಮಾಡಬೇಕು.  ಎಲ್ಲ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದು, ಯೋಜನೆಗೆ ಜೋಡಣೆ ಮಾಡಬೇಕು. ಕಳೆದ ೨೦೧೦-೧೧ ರಿಂದ ೨೦೧೫-೧೬ ರವರೆಗಿನ ಫಲಾನುಭವಿಗಳಿಗೆ ಇದು ಅನ್ವಯವಾಗುತ್ತದೆ ಎಂದು ಮುನೀಷ್ ಮೌದ್ಗಿಲ್ ಅವರು ಅಧಿಕಾರಿಗಳಿಗೆ ತಿಳಿಸಿದರು.ಆಗಸ್ಟ್ ಒಳಗಾಗಿ ಆಯ್ಕೆ ಪಟ್ಟಿ ಸಲ್ಲಿಸಿ : ೨೦೧೭-೧೮ ನೇ ಸಾಲಿನ ವಸತಿ ಯೋಜನೆಯ ಗುರಿಯನ್ನು ಈಗಾಗಲೆ ನಿಗದಿಪಡಿಸಲಾಗಿದ್ದು, ಕಳೆದ ವರ್ಷ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸುವಲ್ಲಿ ವಿಳಂಬವಾಗಿದ್ದರಿಂದ, ಯೋಜನೆ ಅನುಷ್ಠಾನದಲ್ಲಿ ತೊಂದರೆ ಉಂಟಾಗಿತ್ತು.  ಪ್ರಸಕ್ತ ಸಾಲಿನ ಫಲಾನುಭವಿಗಳ ಆಯ್ಕೆ ಪಟ್ಟಿಗೆ ಆಗಸ್ಟ್ ತಿಂಗಳ ಅಂತ್ಯದೊಳಗೆ ಅನುಮೋದನೆ ಪಡೆದುಕೊಳ್ಳಬೇಕಿದೆ.  ಇಲ್ಲದಿದ್ದಲ್ಲಿ, ಜಿಲ್ಲಾಧಿಕಾರಿಗಳೇ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಬೇಕಾಗುತ್ತದೆ ಎಂದು ನಿಗಮ ಈಗಾಗಲೆ ಸ್ಪಷ್ಟಪಡಿಸಿದೆ.  ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು, ಆಯಾ ಶಾಸಕರ ಗಮನಕ್ಕೆ ತಂದು, ಆದ್ಯತೆ ಮೇರೆಗೆ ನಿಗದಿತ ಅವಧಿಯೊಳಗೆ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸಲ್ಲಿಸಬೇಕು.  ನಿಗದಿತ ಗುರಿ ಸಾಧನೆಗೆ ಪ.ಜಾತಿ ಅಥವಾ ಪ.ಪಂಗಡದ ಅರ್ಹ ಫಲಾನುಭವಿಗಳು ದೊರೆಯದಿದ್ದಲ್ಲಿ, ಗುರಿ ಪರಿವರ್ತನೆಗೆ ನಿಗಮದಿಂದ ಅನುಮೋದನೆ ಪಡೆಯಬೇಕಿಲ್ಲ, ಅಂಕಿ-ಅಂಶದ ವಿವರ ನೀಡಿದಲ್ಲಿ, ನಿಗಮದಿಂದ ತಂತ್ರಾಂಶ ಬದಲಾಯಿಸಿ ಕೊಡಲಾಗುವುದು ಎಂದರು.ಮನೆ ನಿರ್ಮಾಣ ಕಾರ್ಯ ಖುದ್ದು ಪರಿಶೀಲಿಸಿ : ನಗರ ಆಶ್ರಯ ಯೋಜನೆಯಡಿ ಫಲಾನುಭವಿಗಳು ನಿರ್ಮಿಸುತ್ತಿರುವ ಮನೆಗಳನ್ನು ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಪೌರಾಯುಕ್ತರು/ಮುಖ್ಯಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು.  ಈ ರೀತಿ ಖುದ್ದು ಪರಿಶೀಲನೆ ನಡೆಸುತ್ತಿರುವ ಫೋಟೋ ಹಾಗೂ ಜಿಪಿಎಸ್ ಅನ್ನು ಅಪ್‌ಲೋಡ್ ಮಾಡಬೇಕು.  ಈ ಫೋಟೋದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಣಿಸಿಕೊಳ್ಳುವುದು ಕಡ್ಡಾಯ.  ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ.  ಮನೆಗಳ ನಿರ್ಮಾಣ ಕಾರ್ಯ ವಿಳಂಬ ಮಾಡುವ ಫಲಾನುಭವಿಗಳಿಗೆ ನೋಟಿಸ್ ನೀಡಿ, ತ್ವರಿತವಾಗಿ ಮನೆ ನಿರ್ಮಾಣ ಪೂರ್ಣಗೊಳಿಸಲು ಸೂಚನೆ ನೀಡಬೇಕು ಎಂದು ತಾಕೀತು ಮಾಡಿದರು.ಜಿಲ್ಲೆಗೊಂದು ವಸತಿ ನಿರ್ಮಾಣ ಕೋಶ : ವಿವಿಧ ವಸತಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸ್ಥಳೀಯ ತೊಂದರೆಗಳನ್ನು ನಿವಾರಿಸಿ, ಫಲಾನುಭವಿಗಳಿಗೆ ತ್ವರಿತವಾಗಿ ಯೋಜನೆಯ ಸವಲತ್ತು ದೊರೆಯುವಂತೆ ಮಾಡಲು, ಜಿಲ್ಲಾ ಮಟ್ಟದಲ್ಲಿ ವಸತಿ ನಿರ್ಮಾಣ ಕೋಶ (ಹೌಸಿಂಗ್ ಸೆಲ್) ಸ್ಥಾಪನೆಗೆ ನಿಗಮ ಮುಂದಾಗಿದೆ.  ಹೌಸಿಂಗ್ ಸೆಲ್‌ಗೆ ಜಿಲ್ಲಾ ವ್ಯವಸ್ಥಾಪಕರ ಹುದ್ದೆಯ ಜೊತೆಗೆ ವಿವಿಧ ಹಂತದ ಒಟ್ಟು ೧೦ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗುವುದು.  ವಸತಿ ಯೋಜನೆಗಳ ಸಮಗ್ರ ಅನುಷ್ಠಾನ ಹಾಗೂ ಪರಿಶೀಲನೆಯನ್ನು ಹೌಸಿಂಗ್ ಸೆಲ್ ನಿರ್ವಹಿಸಲಿದೆ ಎಂದು ಮುನೀಷ್ ಮೌದ್ಗಿಲ್ ಅವರು ಹೇಳಿದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಇಂಜಿನಿಯರ್‌ಗಳ ಕೊರತೆ ಇದ್ದು, ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗಿದೆ ಎಂದರು.   ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಪ್ರತಿ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೆ ನಿರ್ಮಾಣ ಹಂತದಲ್ಲಿರುವ ಮನೆಗಳ ಪೈಕಿ ಪ್ರತಿ ತಿಂಗಳಿಗೆ ೧೦೦ ಮನೆಗಳ ನಿರ್ಮಾಣ ಪೂರ್ಣಗೊಳ್ಳಲೇಬೇಕು.  ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಟ ೦೫ ರಿಂದ ೧೦ ಮನೆಗಳು ಪೂರ್ಣಗೊಳ್ಳಬೇಕು.  ಪ್ರತಿಯೊಂದು ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಪಡೆದು, ಯೋಜನೆಗೆ ಜೋಡಣೆಗೊಳಿಸಬೇಕು.  ನಿಗದಿತ ಗುರಿ ಸಾಧಿಸಲು ವಿಫಲರಾಗುವ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಸಭೆಯಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಐಎಎಸ್ ಪ್ರೊಬೆಷನರಿ ಅಧಿಕಾರಿ ಪ್ರಾವಿಣ್ಯ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು, ಪಿಡಿಒಗಳು ಪಾಲ್ಗೊಂಡಿದ್ದರು.

Please follow and like us:
error