ಮನುಷ್ಯನ ರಕ್ತದಲ್ಲಿಯೂ ಜಾತಿ ಹುಡುಕುವ ಅನಂತಕುಮಾರ ಹೆಗಡೆ ಹೇಳಿಕೆಗೆ ಖಂಡನೆ

ಗಂಗಾವತಿ ೨೬: ಜಾತ್ಯಾತೀತರಿಗೆ ಅಪ್ಪ, ಅಮ್ಮ ಯಾರೆಂದು ಗೊತ್ತಿಲ್ಲ, ಅವರ ರಕ್ತದ ಗುರುತಿಲ್ಲದವರೇ ಜಾತ್ಯಾತೀತರು, ವಿಚಾರವಾದಿಗಳೆಂದು ಕುಕನೂರಿನ ಬ್ರಾಹ್ಮಣ ಯುವ ಪರಿಷತ್ತಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರಬಲವಾಗಿ ಖಂಡಿಸುತ್ತೇವೆ. ಜಾತಿ ವ್ಯವಸ್ಥೆಯನ್ನು ಜೀವಂತವಾಗಿ ಇಟ್ಟುಕೊಂಡು ನಿರಂತರವಾಗಿ ದಲಿತರನ್ನು ಶೋಷಿಸುತ್ತಲೆ ಬದುಕಬೇಕೆನ್ನುವ ಉದ್ಧೇಶದ ಬ್ರಾಹ್ಮಣ ಅನಂತಕುಮಾರ, ಸರ್ವ ಜನಾಂಗದ ಶಾಂತಿಯ ತೋಟ ಎನಿಸಿರುವ ಪ್ರಜಾಪ್ರಭುತ್ವ ದೇಶದ ಸಚಿವರಾಗಿರಲಿಕ್ಕೆ ಯಾವುದೆ ಯೋಗ್ಯತೆ ಇಲ್ಲದರಿಂದ, ನಿಜವಾದ ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇಕಾದರೆ ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳಲಿ. ಎಲ್ಲಾ ಜನವರ್ಗವನ್ನು ಪ್ರತಿನಿಧಿಸುವ ಸಚಿವ ಸ್ಥಾನ ಪಡೆದು ಈ ರೀತಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವಕ್ಕೆ ಮತ್ತು ದೇಶಕ್ಕೆ ದ್ರೋಹ ಬಗೆದಂತೆ.
ಎಲ್ಲರ ರಕ್ತವೂ ಕೆಂಪಾಗಿರುತ್ತದೆ. ಅದರಲ್ಲಿ ಜಾತಿಯನ್ನು ಹುಡುಕಿದರೆ ಎಂದಿಗೂ ಸಿಗಲಾರದೆನ್ನುವ ಸಾಮಾನ್ಯವಾದ ಸತ್ಯವನ್ನೂ ತಿಳಿಯಲಾರದೆ, ಬಾಯಿಗೆ ಬಂದಂತೆ ಮಾತನಾಡಿ ಸಮಾಜದ ಶಾಂತಿಯನ್ನು ಕದಡುವ ಮತ್ತು ಸಮಾನತೆಯ ತತ್ವಕ್ಕೆ ವಿರುದ್ಧವಾಗಿರುವ ಇಂತಹವರಿಂದ ಯಾವ ದೇಶವೂ ಉದ್ಧಾರವಾಗಲಾರದು. ಸರ್ವ ಜನರೂ ಮಾನ್ಯ ಮಾಡಿರುವ ಸಂವಿಧಾನವನ್ನೆ ಬದಲಾಯಿಸಿ ಮತ್ತೆ ಜಾತಿಯ ಅಸಮಾನತೆಯನ್ನು ಸೇರಿಸಬೇಕು ಎನ್ನುವ ಕುತ್ಸಿತ ಭಾವದ ಇಂತವರು ದೇಶದ್ರೋಹಿಗಳು, ಜನದ್ರೋಹಿಗಳು ಮತ್ತು ಅಪಾಯಕಾರಿ ವ್ಯಕ್ತಿಗಳು.
ಜಾತಿಹೀನರ ಮನೆಯ ಜ್ಯೋತಿ ತಾ ಹೀನವೇ, ಜಾತಿವಿಜಾತಿ ಎನಬೇಡ ಎಂದ ಸರ್ವಜ್ಞ ಅಥವಾ ಮಾನವ ಜಾತಿ ತಾನೊಂದೆ ವಲಂ ಎಂದಿರುವ ಆದಿಕವಿ ಪಂಪರಿಗಿಂತಲೂ ತಾನು ಶ್ರೇಷ್ಟನೆಂಬ ಅಹಂಕಾರ ಪ್ರದರ್ಶಿಸುವ ಅಪ್ರಬುದ್ಧ ಅವಿವೇಕಿ ಅನಂತಕುಮಾರ ಹೆಗಡೆ ಮಾತುಗಳನ್ನು ಮಾನವಂತರಾದವರು, ಪ್ರಜ್ಞಾವಂತರಾದವರು ಖಂಡಿಸಲೇಬೇಕು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೆಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರ ಒತ್ತಾಯಿಸಿದ್ದಾರೆ.