ಮತದಾನ ಪ್ರಜಾ ಪ್ರಭುತ್ವದ ಹಬ್ಬದ ಸಂಭ್ರಮದಂತಾಗಲಿ

ಸ್ವೀಪ್ ಪರಿಣಾಮ : ಮತದಾನ ಪ್ರಮಾಣದಲ್ಲಿ ಹೆಚ್ಚಳದ ನಿರೀಕ್ಷೆ- ವೆಂಕಟ್ ರಾಜಾ
***************************
ಕೊಪ್ಪಳ ಮೇ.: ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಜಾರಿಗೆ ತಂದ ಸ್ವೀಪ್ ಕಾರ್ಯಕ್ರಮದ ಪರಿಣಾಮವಾಗಿ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಶಿಕ್ಷಿತ ಮತದಾರರೇ ತಮ್ಮ ಪವಿತ್ರ ಕರ್ತವ್ಯದಿಂದ ವಿಮುಖರಾಗುತ್ತಿರುವ ಪರಿಣಾಮವಾಗಿ ದೇಶದ ಅನೇಕ ಕಡೆಗಳಲ್ಲಿ ಕನಿಷ್ಟ ಪ್ರಮಾಣದ ಮತದಾನ ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಜನಹಿತ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುವಂತಹ ಜವಾಬ್ದಾರಿಯನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಹಿಸಿಕೊಡಲಾಗಿದ್ದು, ಇಂತಹ ಜನಪ್ರತಿನಿಧಿಗಳು ಈ ನಾಡಿನ ಎಲ್ಲ ಮತದಾರರ ಪ್ರತಿನಿಧಿಯಾಗಿರುತ್ತಾರೆ. ಇಂತಹ ಜನಪ್ರತಿನಿಧಿಯನ್ನು ಶೇ. 100 ರಷ್ಟು ಮತದಾರರೇ ಆಯ್ಕೆ ಮಾಡಿದಲ್ಲಿ, ಅದು ಸೂಕ್ತ. ಇಲ್ಲದೇ ಹೋದರೆ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ. ಎಲ್ಲ ಮತದಾರರು ಅಂದರೆ ಶೇ. 100 ರಷ್ಟು ಮತದಾನವಾಗಬೇಕೆಂಬುದೇ ನಮ್ಮ ಜನತಂತ್ರದ ಸಿದ್ದಾಂತವಾಗಿದ್ದು, ಹೀಗಾದಾಗ ಮಾತ್ರ ಜನಪ್ರತಿನಿಧಿಯ ಆಯ್ಕೆ ಸಮಂಜಸ ಎನಿಸಿಕೊಳ್ಳುತ್ತದೆ. ಕ್ಷೇತ್ರದಲ್ಲಿ ಈಗ ಸುಮಾರು 10. 7 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಇವರಲ್ಲಿ ಎಲ್ಲ ಮತದಾರರಾದರೂ ತಮ್ಮ ಹಕ್ಕನ್ನು ಚಲಾಯಿಸಿದಾಗ ಮಾತ್ರ ಚುನಾವಣೆ ವ್ಯವಸ್ಥೆಗೆ ಒಂದು ಅರ್ಥ ಬಂದಂತಾಗುತ್ತದೆ
ಕಳೆದ 2013 ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 73. 52 ರಷ್ಟು, ರಷ್ಟು ಮತದಾನವಾಗಿದೆ. ಈ ರೀತಿಯ ಕಡಿಮೆ ಮತದಾನ ಪ್ರಮಾಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಎಲ್ಲ ಮತದಾರರೂ ಕಡ್ಡಾಯವಾಗಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಯಾವುದೇ ವಯಕ್ತಿಕ ಲಾಭದ ನಿರೀಕ್ಷೆ ಇಟ್ಟುಕೊಳ್ಳದೆ ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು. ಮತದಾರ ತನ್ನ ಶಕ್ತಿ ಪ್ರದರ್ಶಿಸಲು ಚುನಾವಣೆಯೇ ಸೂಕ್ತ ವೇದಿಕೆಯಾಗಿದ್ದು, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು. ಈ ಮೂಲಕ ಸುಭದ್ರ ದೇಶ ಕಟ್ಟಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ.

ಮತದಾರರ ಜಾಗೃತಿಗೆ ವ್ಯಾಪಕ ಕ್ರಮ :
**************** ಮೊದಲ ಹಂತದಲ್ಲಿ ಮತದಾರರ ನೊಂದಣಿಗೆ ಹೆಚ್ಚಿನ ಒತ್ತು ನೀಡಿ, ಜಿಲ್ಲೆಯಾದ್ಯಂತ ವಿಶೇಷ ಅಭಿಯಾನದ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಉತ್ತೇಜನ ನೀಡಿದ ಪರಿಣಾಮವಾಗಿ ಕ್ಷೇತ್ರದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಎರಡನೆ ಹಂತವಾಗಿ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಲವು ಬಗೆಯ ಸ್ವೀಪ್ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮಹಿಳೆಯರಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ವಿಕಲಚೇತನರನ್ನು ಮತದಾನದ ಮುಖ್ಯ ವಾಹಿನಗೆ ತರಲು ಈ ಬಾರಿ ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನು ನಿರ್ಮಿಸಿ, ಅಲ್ಲಿ, ವೀಲ್ ಚೇರ್‍ಗಳನ್ನು ಒದಗಿಸಲಾಗುತ್ತಿದೆ. ಇದಕ್ಕೆಂದೇ ಜಿಲ್ಲೆಗೆ ಪ್ರತ್ಯೇಕವಾಗಿ ಜಿಲ್ಲೆಯಲ್ಲಿ ಕಂಡುಬರುವ ಚಿರತೆಯನ್ನೊಳಗೊಂಡ ‘ವೋಟರ್ ಕುಮಾರ’ ಲಾಂಛನವನ್ನು ಸಿದ್ಧಪಡಿಸಿ, ಆಯೋಗದಿಂದ ಅನುಮೋದನೆ ಪಡೆದು, ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಮತಯಂತ್ರದ ಬಳಕೆ ಹಾಗೂ ವಿವಿ ಪ್ಯಾಟ್ ಮತಖಾತ್ರಿ ಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಜನರಲ್ಲಿ ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು. ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಅವರನ್ನು ಜಿಲ್ಲೆಯ ಮತದಾರರ ಜಾಗೃತಿಗೆ ಐಕಾನ್ ಆಗಿ ನೇಮಿಸಿ, ಅವರ ವಿಶೇಷ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಹಲವೆಡೆ ಬೈಕ್ ರ್ಯಾಲಿಗಳನ್ನು ಆಯೋಜಿಸಿ ಜನರಲ್ಲಿ ಮತದಾನದ ಜಾಗೃತಿ ಕೈಗೊಳ್ಳಲಾಗಿದೆ.
ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮವಾಗಬೇಕು. ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಅನೇಕ ವೈವಿಧ್ಯಮಯ ಕ್ರಮಗಳು ಪರಿಣಾಮಕಾರಿಯಾಗಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Please follow and like us:
error